ಕಾಲಿನ್ ಗೊನ್ಸಾಲ್ವಿಸ್‌ಗೆ ‘ರೈಟ್ ಲೈವ್ಲಿಹುಡ್’ ಪ್ರಶಸ್ತಿ

0
19

ಭಾರತದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು ಸ್ವೀಡನ್‌ನ ಪ್ರತಿಷ್ಠಿತ ರೈಟ್ ಲೈವ್ಲಿಹುಡ್–2017 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಭಾರತದಲ್ಲಿನ ಅಲ್ಪಸಂಖ್ಯಾತರು ಹಾಗೂ ದುರ್ಬಲ ಸಮುದಾಯದ ಜನರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಹೊಸ ರೀತಿಯಲ್ಲಿ ಬಳಸಿಕೊಂಡ ಭಾರತದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು ಸ್ವೀಡನ್‌ನ ಪ್ರತಿಷ್ಠಿತ ರೈಟ್ ಲೈವ್ಲಿಹುಡ್–2017 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿರುವ ನವದೆಹಲಿಯ ಕಾಲಿನ್ (65) ಅವರ ಜೊತೆಗೆ ಅಜೆರ್ಬೈಜಾನ್‌ನ ಖದೀಜಾ ಇಸ್ಮಾಯಿಲೋವಾ ಹಾಗೂ ಇಥಿಯೋಪಿಯಾದ ಯೆಟ್ನ್‌ಬರ್ಶ್ ನಿಗುಸ್ಸೀ ಅವರೂ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಪ್ರಶಸ್ತಿಯ ಮೊತ್ತ ₹ 19.64 ಕೋಟಿ (3 ಲಕ್ಷ ಡಾಲರ್).

‘ಮಾನವ ಹಕ್ಕುಗಳ ರಕ್ಷಣೆಗಾಗಿ ಮೂರು ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ ಕಾಲಿನ್ ಈ ಪ್ರಶಸ್ತಿಗೆ ಅರ್ಹರು’ ಎಂದು ಪ್ರಶಸ್ತಿ ಸಮಿತಿ ಹೇಳಿದೆ. ಕಾಲಿನ್ ಅವರು ಮಾನವ ಹಕ್ಕು ಕಾನೂನು ಜಾಲದ ಸ್ಥಾಪಕರೂ ಹೌದು.

‘ಭಾರತದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರು ಭೀತಿ ಎದುರಿಸುತ್ತಿದ್ದಾರೆ. ಇಂಥ ಪರಿಸ್ಥಿತಿ ಎದುರಿಸಲು ಈ ‍ಪ್ರಶಸ್ತಿಯು ಶಕ್ತಿ ತುಂಬುತ್ತದೆ’ ಎಂದು ಕಾಲಿನ್ ಪ್ರತಿಕ್ರಿಯಿಸಿದ್ದಾರೆ.

ಐದು ವರ್ಷದವರಿದ್ದಾಗಲೇ ಕಣ್ಣು ಕಳೆದುಕೊಂಡ ಯೆಟ್ನ್‌ಬರ್ಶ್ ನಿಗುಸ್ಸೀ (35) ಮಾನವ ಹಕ್ಕುಗಳ ಹೋರಾಟಗಾರ್ತಿ. ಖದೀಜಾ ಇಸ್ಮಾಯಿಲೋವಾ ಅಜೆರ್ಬೈಜಾನ್‌ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆದ ಪತ್ರಕರ್ತೆ.

ಗೌರವ ಪ್ರಶಸ್ತಿ

ಅಮೆರಿಕದ ನಾಗರಿಕರಿಗೆ ಪೂರೈಸಲಾಗುತ್ತಿರುವ ಕುಡಿಯುವ ನೀರು ರಾಸಾಯನಿಕ ಅಂಶಗಳಿಂದ ಕಲುಷಿತವಾಗಿದೆ ಎಂಬುದನ್ನು ತೋರಿಸಿಕೊಟ್ಟ ಅಮೆರಿಕದ ಪರಿಸರವಾದಿ ರಾಬರ್ಟ್ ಬೈಲಟ್ (52) ಅವರು 2017ನೇ ಸಾಲಿನ ರೈಟ್ ಲೈವ್ಲಿಹುಡ್‌ನ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.