ಕಾಂಗ್ರೆಸ್ ಹಿರಿಯ ನಾಯಕ ಎನ್‌.ಡಿ.ತಿವಾರಿ ನಿಧನ

0
381

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಉತ್ತರಪ್ರದೇಶ ಹಾಗೂ ಉತ್ತರಾಖಂಡ ರಾಜ್ಯದ ಮಾಜಿ ಮುಖ್ಯಮಂತ್ರಿ ಎನ್‌.ಡಿ. ತಿವಾರಿ ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ತಿವಾರಿ ದೆಹಲಿಯ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

# ತಿವಾರಿ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರು. ಉತ್ತರ ಪ್ರದೇಶದಲ್ಲಿ ಎರಡು ಸಲ ಹಾಗೂ ಉತ್ತರಾಖಂಡದಲ್ಲಿ ಒಂದು ಬಾರಿ ಮುಖ್ಯಮಂತ್ರಿಯಾಗಿದ್ದರು.

# ಅವಿಭಜಿತ ಆಂಧ್ರಪ್ರದೇಶದ ರಾಜ್ಯಪಾಲರಾಗಿ ಎರಡು ವರ್ಷ ಸೇವೆ ಸಲ್ಲಿಸಿದ್ದರು. ಲೈಂಗಿಕ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 2009ರಲ್ಲಿ ರಾಜ್ಯಪಾಲರ ಹುದ್ದೆಗೆ ರಾಜಿನಾಮೆ ನೀಡಿದ್ದರು.

# 1990ರಲ್ಲಿ ಪ್ರಧಾನಿ ಹುದ್ದೆಯ ಅಭ್ಯರ್ಥಿಗಳ ಸಾಲಿನಲ್ಲಿ ತಿವಾರಿ ಅವರ ಹೆಸರು ಕೂಡ ಕೇಳಿಬಂದಿತ್ತು. 1994ರಲ್ಲಿ ಕಾಂಗ್ರೆಸ್‌ ತೊರೆದು ಅರ್ಜುನ್‌ ಸಿಂಗ್ ಜೊತೆಗೂಡಿ ಪ್ರಾದೇಶಿಕ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ನಂತರ ಸೋನಿಯಾ ಗಾಂಧಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆಯಾದಾಗ ಮರಳಿ ಕಾಂಗ್ರೆಸ್‌ ಪಕ್ಷ ಸೇರಿದ್ದರು. 

# ತಿವಾರಿ ನಿಧನಕ್ಕೆ ದೇಶದ ಗಣ್ಯರು ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.