ಕರ್ನಾಟಕ ಸರ್ಕಾರ : ಕಟ್ಟಡ, ಬಡಾವಣೆ, ಭೂ ಪರಿವರ್ತನೆಗೆ ಆನ್​ಲೈನ್ ಲೈಸನ್ಸ್

0
18

ಕಟ್ಟಡ ನಿರ್ಮಾಣ ನಕ್ಷೆ, ಭೂ ಪರಿವರ್ತನೆ, ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿ ಇನ್ನು ಮುಂದೆ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯಬೇಕಿಲ್ಲ. ಪೂರಕ ದಾಖಲೆಗಳೊಂದಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸಾಕು ಪರವಾನಗಿ ಕೈಸೇರುತ್ತದೆ. ಇದಕ್ಕಾಗಿ ಐಡಿಎಸ್​ಐ ಸಂಸ್ಥೆ ಸಾಫ್ಟ್​ವೇರ್ ಅಭಿವದ್ಧಿಪಡಿಸಿದ್ದು, ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನವಾಗಲಿದೆ.

ಬೆಂಗಳೂರು: ಕಟ್ಟಡ ನಿರ್ಮಾಣ ನಕ್ಷೆ, ಭೂ ಪರಿವರ್ತನೆ, ಬಡಾವಣೆ ನಿರ್ವಣಕ್ಕೆ ಸಂಬಂಧಿಸಿ ಇನ್ನು ಮುಂದೆ ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯಬೇಕಿಲ್ಲ. ಪೂರಕ ದಾಖಲೆಗಳೊಂದಿಗೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಸಾಕು ಪರವಾನಗಿ ಕೈಸೇರುತ್ತದೆ. ಇದಕ್ಕಾಗಿ ಐಡಿಎಸ್​ಐ ಸಂಸ್ಥೆ ಸಾಫ್ಟ್​ವೇರ್ ಅಭಿವದ್ಧಿಪಡಿಸಿದ್ದು, ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನವಾಗಲಿದೆ. ಜೂ.11ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ. ಇದು ದೇಶದಲ್ಲೇ ಮೊದಲ ಪ್ರಯೋಗ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಪ್ರಕ್ರಿಯೆ ಹೀಗಿದೆ: ಎಲ್​ಬಿಪಿಎಎಸ್ ವೆಬ್ ಪೋರ್ಟಲ್​ನಲ್ಲಿ ಬಳಕೆದಾರರು ನೋಂದಣಿ ಮಾಡಿಸಿಕೊಂಡು, ಅರ್ಜಿ ಸಿದ್ಧಪಡಿಸಿ, ಸಂಬಂಧಪಟ್ಟ ದಾಖಲಾತಿ ಸಲ್ಲಿಸಬೇಕು. ದಾಖಲೆಗಳ ಪರಿಶೀಲನೆ ಬಳಿಕ, ಸಂಬಂಧ ಎಲ್ಲ ಇಲಾಖೆಯವರು ಏಕಕಾಲಕ್ಕೆ ಸ್ಥಳ ಪರಿಶೀಲಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ. ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಅನುಮತಿ ಸಿಗುತ್ತದೆ. ಬಳಿಕ ನಿಗದಿತ ಶುಲ್ಕವನ್ನು ಆನ್​ಲೈನ್ ಮೂಲಕ ಪಾವತಿಸಿದರೆ ಡಿಜಿಟಲ್ ಸಹಿಯುಳ್ಳ ಅನುಮತಿ ಪತ್ರ ಕೈಗೆ ಸಿಗುತ್ತದೆ. ಕಟ್ಟಡ ನಿರ್ಮಾಣ ಸಂಬಂಧ ಸಾಫ್ಟ್​ವೇರ್ ಅಭಿವದ್ಧಿಪಡಿಸಲಾಗಿದೆ. ಆನ್​ಲೈನ್ ಮೂಲಕವೇ ಎಲ್ಲ ಕೆಲಸ ನಡೆಯುವುದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ಖಾದರ್ ತಿಳಿಸಿದರು.

30×40 ನಿವೇಶನಕ್ಕೆ ಹೆಚ್ಚು ಪ್ರಯೋಜನ

30×40 ವಿಸ್ತೀರ್ಣದ ನಿವೇಶನದಲ್ಲಿ ಮನೆ ಕಟ್ಟುವವರಿಗೆ ಈ ಸಾಫ್ಟ್​ವೇರ್​ನಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಸಮರ್ಪಕ ದಾಖಲೆ ಮತ್ತು ನಕ್ಷೆ ಒದಗಿಸಿದರೆ ಲೈಸನ್ಸ್ ತಕ್ಷಣ ದೊರೆಯಲಿದೆ. 30 x 50 ನಿವೇಶನಕ್ಕೂ ಸೌಲಭ್ಯ ಒದಗಿಸುವ ಚಿಂತನೆ ಇದೆ ಎಂದು ಖಾದರ್ ಹೇಳಿದರು.

ಮೊಬೈಲ್ ಟವರ್​ಗೆ ಹೊಸ ನೀತಿ

ರಾಜ್ಯದಲ್ಲಿ ಮೊಬೈಲ್ ಟವರ್​ಗಳ ಅಳವಡಿಕೆಗೆ ಸಂಬಂಧಿಸಿ ಸೂಕ್ತ ಮಾರ್ಗಸೂಚಿಗಳು ಇಲ್ಲದಿರುವುದರಿಂದ ನೂತನ ನೀತಿ ಜಾರಿಗೆ ತರಲಾಗಿದೆ ಎಂದು ಖಾದರ್ ತಿಳಿಸಿದರು. ಹೆಚ್ಚು ಟವರ್​ಗಳ ಅಳವಡಿಕೆಯಿಂದ ಜನಸಾಮಾನ್ಯರು, ಪಕ್ಷಿಗಳು ಸೇರಿ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ಆರೋಪ ಹಿನ್ನೆಲೆ ಕ್ರಮ ತೆಗೆದುಕೊಳ್ಳಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಟವರ್​ಗೆ 1 ಲಕ್ಷ ರೂ., ಇತರ ಮಹಾನಗರ ಪಾಲಿಕೆಗಳಲ್ಲಿ 50 ಸಾವಿರ ರೂ., ನಗರಸಭೆಗಳ ವ್ಯಾಪ್ತಿಯಲ್ಲಿ 35 ಸಾವಿರ ರೂ., ಪುರಸಭೆಗಳ ವ್ಯಾಪ್ತಿಯಲ್ಲಿ 25 ಸಾವಿರ ರೂ., ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 20 ಸಾವಿರ ರೂ. ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 15 ಸಾವಿರ ರೂ.ಗಳನ್ನು ಒಂದು ಬಾರಿಯ ಶುಲ್ಕವಾಗಿ ಪಾವತಿಸಬೇಕು ಎಂದು ತಿಳಿಸಿದರು.