ಕರ್ನಾಟಕ ವಿಭಾಗದ ಮುಖ್ಯಸ್ಥರಾಗಿ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಅಧಿಕಾರ ಸ್ವೀಕಾರ

0
575

ನೌಕಾ ಪಡೆಯ ಕರ್ನಾಟಕ ವಿಭಾಗದ ಮುಖ್ಯಸ್ಥರಾಗಿ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಶನಿವಾರ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮೊದಲು ಅವರು ನೌಕಾಪಡೆಯ ಪೂರ್ವ ವಿಭಾಗದ ಸಿಬ್ಬಂದಿ (ಆಪರೇಷನ್ಸ್) ಮುಖ್ಯಸ್ಥರಾಗಿದ್ದರು.

ಕಾರವಾರ:ನೌಕಾ ಪಡೆಯ ಕರ್ನಾಟಕ ವಿಭಾಗದ ಮುಖ್ಯಸ್ಥರಾಗಿ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಶನಿವಾರ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮೊದಲು ಅವರು ನೌಕಾಪಡೆಯ ಪೂರ್ವ ವಿಭಾಗದ ಸಿಬ್ಬಂದಿ (ಆಪರೇಷನ್ಸ್) ಮುಖ್ಯಸ್ಥರಾಗಿದ್ದರು.

ಸೀಬರ್ಡ್ ನೌಕಾನೆಲೆಯಲ್ಲಿ ನಡೆದ ಪರೇಡ್ ಸಮಾರಂಭದಲ್ಲಿ ಅವರಿಗೆ ನೌಕಾನೆಲೆಯ ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದರು. 1987ರ ಜನವರಿಯಲ್ಲಿ ನೌಕಾಪಡೆ ಸೇರಿದ ಮಹೇಶ್ ಸಿಂಗ್, 2016ರ ಅಕ್ಟೋಬರ್‌ನಲ್ಲಿ ರಿಯರ್ ಅಡ್ಮಿರಲ್ ಆಗಿ ಬಡ್ತಿ ಹೊಂದಿದರು. ಅವರು ಮಾರ್ಗದರ್ಶನ ಮತ್ತು ನಿರ್ದೇಶನ (ನೇವಿಗೇಷನ್ ಮತ್ತು ಡೈರೆಕ್ಷನ್) ವಿಭಾಗದಲ್ಲಿ ತಜ್ಞರಾಗಿದ್ದಾರೆ. ನೌಕಾಪಡೆಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ಸಲ್ಲಿಸಿದವರಿಗೆ ನೀಡುವ ‘ನೌ ಸೇನಾ’ ಪದಕಕ್ಕೂ ಭಾಜನರಾಗಿದ್ದಾರೆ.

ರಾಷ್ಟ್ರೀಯ ಭದ್ರತಾ ಅಕಾಡೆಮಿಯಲ್ಲಿ ಅಧ್ಯಯನ ಮಾಡಿರುವ ಅವರು, ಐಎನ್ಎಸ್ ಅಕ್ಷಯ್ ಮತ್ತು ಐಎನ್ಎಸ್ ಜ್ಯೋತಿ ನೌಕೆಗಳು ನೌಕಾಪಡೆಗೆ ಸೇರ್ಪಡೆಯಾದಾಗ ಆ ತಂಡದಲ್ಲಿದ್ದರು. ‘ಆಪರೇಷನ್ ವಿಜಯ್’ನಲ್ಲಿ ಕ್ಷಿಪಣಿ ವಾಹಕ ನೌಕೆ ಐಎನ್ಎಸ್ ನಿರ್ಘಾತ್‌ನ ಕಮಾಂಡರ್ ಆಗಿದ್ದರು. ಅಲ್ಲದೇ ಮಾರಿಷಸ್ ಸರ್ಕಾರದ ಮನವಿಯ ಮೇರೆಗೆ ಭಾರತೀಯ ನೌಕಾಪಡೆಯ ನಿಯೋಜನೆ ಅವಧಿಯಲ್ಲಿ ‘ಐಎನ್ಎಸ್– ಜಲಾಶ್ವ’ದ ಭಾಗವಾಗಿದ್ದರು ಎಂದು ನೌಕಾಪಡೆಯ ಪ್ರಕಟಣೆ ತಿಳಿಸಿದೆ.  ಈ ಮೊದಲು ಮುಖ್ಯಸ್ಥರಾಗಿದ್ದ ರಿಯರ್ ಅಡ್ಮಿರಲ್ ಕೆ.ಜೆ.ಕುಮಾರ್ ಚೆನ್ನೈಗೆ ವರ್ಗಾವಣೆಗೊಂಡಿದ್ದಾರೆ.