ಸಮೀಕ್ಷೆ ಪ್ರಕಾರ, ಬಿಜೆಪಿ ಅತಿ ಹೆಚ್ಚು ಲಿಂಗಾಯತ ಮತಗಳನ್ನು ಪಡೆದುಕೊಳ್ಳಲಿದೆ. ಶೇ 60ರಷ್ಟು ಲಿಂಗಾಯತ ಮತದಾರರು ಬಿಜೆಪಿಗೆ ಮತ ನೀಡಲಿದ್ದಾರೆ.
ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ಅವಕಾಶ ಹೆಚ್ಚು ಎಂದು ಎಬಿಪಿ ನ್ಯೂಸ್–ಲೋಕನೀತಿ–ಜೈನ್ ಮತ್ತು ಸೆಂಟರ್ ಫಾರ್ ದ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ಡಿಎಸ್) ನಡೆಸಿದ ಸಮೀಕ್ಷೆ ಹೇಳಿದೆ.
89–95 ಸ್ಥಾನ ಪಡೆಯುವ ಮೂಲಕ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆಯುವ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 85–90 ಸ್ಥಾನ ಗಳಿಸಲಿದ್ದು, 32–38 ಸ್ಥಾನ ಗಳಿಸಲಿರುವ ಜೆಡಿಎಸ್ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಈ ಸಮೀಕ್ಷೆಯಲ್ಲಿ ಶೇ 37ರಷ್ಟು ಮತದಾರರು ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸಿದ್ದಾರೆ. ಶೇ 35ರಷ್ಟು ಜನರು ಬಿಜೆಪಿಗೆ ಮತ ಹಾಕುವುದಾಗಿ ಹೇಳಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಜೆಡಿಎಸ್ ಮೂರನೇ ಸ್ಥಾನದಲ್ಲಿದ್ದು ಶೇ 20 ರಷ್ಟು ಜನರ ಬೆಂಬಲ ಪಡೆದಿದೆ. ಪಕ್ಷೇತರರು ಹಾಗೂ ಇತರೆ ಪಕ್ಷಗಳ ಶೇ 8ರಷ್ಟು ಮತ ಪಡೆಯಬಹುದೆಂದು ಸಮೀಕ್ಷೆ ಹೇಳಿದೆ.
ಮುಖ್ಯಮಂತ್ರಿ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ನ ಸಿದ್ದರಾಮಯ್ಯ ಪರವಾಗಿ ಶೇ 30ರಷ್ಟು ಮತದಾರರು ಒಲವು ವ್ಯಕ್ತಪಡಿಸಿದ್ದು, ಪಕ್ಷ ಅಧಿಕಾರಕ್ಕೆ ಬಂದರೇ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂಬುದು ಮತದಾರರ ಅಭಿಪ್ರಾಯವಾಗಿದೆ. ಪ್ರತಿಕ್ರಿಯೆ ನೀಡಿರುವ ಒಟ್ಟು ಮತದಾರರ ಪೈಕಿ ಶೇ 25ರಷ್ಟು ಯಡಿಯೂರಪ್ಪ ಪರ ಹಾಗೂ ಶೇ 20ರಷ್ಟು ಕುಮಾರಸ್ವಾಮಿ ಪರವಾಗಿದ್ದಾರೆ.
ಸಮೀಕ್ಷೆ ಪ್ರಕಾರ, ಬಿಜೆಪಿ ಅತಿ ಹೆಚ್ಚು ಲಿಂಗಾಯತ ಮತಗಳನ್ನು ಪಡೆದುಕೊಳ್ಳಲಿದೆ. ಶೇ 60ರಷ್ಟು ಲಿಂಗಾಯತ ಮತದಾರರು ಬಿಜೆಪಿಗೆ ಮತ ನೀಡಲಿದ್ದಾರೆ.
ಮೇ 12ರಂದು ರಾಜ್ಯದ 224 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಹೊರ ಬೀಳಲಿದೆ.
ಸಮೀಕ್ಷೆ ಪ್ರಕಾರ ಪಕ್ಷಗಳು ಗಳಿಸುವ ಸ್ಥಾನಗಳು: (ಒಟ್ಟು ಸ್ಥಾನಗಳು–224)
* ಬಿಜೆಪಿ: 89–95 ಸ್ಥಾನ
* ಕಾಂಗ್ರೆಸ್: 85–90 ಸ್ಥಾನ
* ಜೆಡಿಎಸ್: 32–38 ಸ್ಥಾನ
* ಇತರೆ: 6–12 ಸ್ಥಾನ