ಕರ್ನಾಟಕ “ರಾಜ್ಯ ಹೆದ್ದಾರಿ”ಗಳಲ್ಲಿ ಟೋಲ್ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ

0
539

ನಿರಂತರ ತೈಲ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೀಗ ಸರ್ಕಾರ ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಬರೆ ಎಳೆದಿದೆ. ಸರಿಸುಮಾರು 1,400 ಕಿಮೀ ಉದ್ದದ 17 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ದೊರೆತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು: ನಿರಂತರ ತೈಲ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೀಗ ಸರ್ಕಾರ ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಬರೆ ಎಳೆದಿದೆ. ಸರಿಸುಮಾರು 1,400 ಕಿಮೀ ಉದ್ದದ 17 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ದೊರೆತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಈವರೆಗೆ ರಾಷ್ಟ್ರೀಯ ಹೆದ್ದಾರಿ ಗಳಿಗಷ್ಟೇ ಟೋಲ್ ಸೀಮಿತವಾಗಿತ್ತು. ರಾಜ್ಯದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಕೆಶಿಪ್ ಹಾಗೂ ಕೆಆರ್​ಡಿಸಿಎಲ್ ಸಂಸ್ಥೆಗಳು ವಿಶ್ವ ಬ್ಯಾಂಕ್ ಹಾಗೂ ಏಷಿಯನ್ ಅಭಿವೃದ್ಧಿ ಬ್ಯಾಂಕ್​ನಿಂದ ಸಾಲದ ನೆರವು ಪಡೆದು ನಿರ್ವಿುಸಿದ 3,800 ಕಿಮೀ ಉದ್ದದ 31 ರಸ್ತೆಗಳಿಗೆ ಟೋಲ್ ವಿಧಿಸುವುದಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಈ ಕುರಿತಂತೆ ಮಾ.17ರಂದು ಅಂದಿನ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲೇ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ರಾಜ್ಯದ 1,530 ಕಿಮೀ ಉದ್ದದ 19 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ಸಂಪುಟ ಒಪ್ಪಿಗೆ ನೀಡಿತ್ತು. ಆದರೆ ಆ ಪೈಕಿ ಎರಡು ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಲೀನಗೊಂಡಿರುವುದರಿಂದ 17 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲು ಸರ್ಕಾರ ಮುಂದಾಗಿದೆ.

ಟೋಲ್​ಗೊಳಪಡುವ ಹೈವೇ

# ಮುದಗಲ್-ಕುಡುತಿನಿ ರಾಜ್ಯ ಹೆದ್ದಾರಿ 29ರಲ್ಲಿ ಮುದಗಲ್​ನಿಂದ ತಾವರೆಕೆರೆ, ಕನಕಗಿರಿ ಮಾರ್ಗವಾಗಿ ಗಂಗಾವತಿ ವರೆಗೆ 74 ಕಿಮೀ.

# ಪಡುಬಿದ್ರಿ-ಚಿಕ್ಕಲಗುಡ್ಡ ಹೆದ್ದಾರಿ 1ರಲ್ಲಿ ಬೆಳ್ಮಣ್ ಮಾರ್ಗವಾಗಿ ಕಾರ್ಕಳದವರೆಗೆ 28 ಕಿ.ಮೀ.

# ಎಕ್ಕಂಬಿ – ಮೊಳಕಾಲ್ಮೂರು ರಾಜ್ಯ ಹೆದ್ದಾರಿ 2ರಲ್ಲಿ ಹಾವೇರಿ ಅಕ್ಕಿ ಆಲೂರು ಮಾರ್ಗವಾಗಿ ಹಾನಗಲ್ ವರೆಗೆ 33 ಕಿ.ಮೀ.

# ಔರಾದ – ಸದಾಶಿವಗಡ ರಾಜ್ಯ ಹೆದ್ದಾರಿ 34ರಲ್ಲಿ ಧಾರವಾಡದಿಂದ ಕರಡಿಗುಡ್ಡ ಮಾರ್ಗವಾಗಿ ಸವದತ್ತಿವರೆಗೆ 36 ಕಿ.ಮೀ.

# ಹೊಸಕೋಟೆ-ಗೌನಿಪಲ್ಲಿ ಹೆದ್ದಾರಿ 82ರಲ್ಲಿ ಹೊಸ ಕೋಟೆಯಿಂದ ಚಿಂತಾಮಣಿ ಬೈಪಾಸ್ 52ಕಿ.ಮೀ.

# ಮನಗೂಳಿ-ಚಿಚ್ಚಳ ರಾಜ್ಯ ಹೆದ್ದಾರಿ 61, ವನಮಾರಪಲ್ಲಿ-ರಾಯಚೂರು ರಾಜ್ಯ ಹೆದ್ದಾರಿ 15ರಲ್ಲಿ ತಿಂತಿಣಿ, ದೇವದುರ್ಗ, ಗಬ್ಬೂರು ಮಾರ್ಗ ಕಲ್ಮಲಾವರೆಗೆ 74 ಕಿಮೀ.

# ಹುಣಸನಹಳ್ಳಿ-ಚಿಕ್ಕಳ್ಳಿ ಹೆದ್ದಾರಿ 3ರಲ್ಲಿ ಮಾಗಡಿ, ರಾಷ್ಟ್ರೀಯ ಹೆದ್ದಾರಿ 48, ದಾಬಸ್ ಪೇಟೆ, ಕೊರಟಗೆರೆ, ಪಾವಗಡ ಮಾರ್ಗವಾಗಿ ಆಂಧ್ರಪ್ರದೇಶದ ಕಂಬ್ದೂರುವರೆಗೆ 91 ಕಿ.ಮೀ.

# ಬಾಗಲಕೋಟೆ-ಬಿಳಿಗಿರಿರಂಗನಬೆಟ್ಟ ಹೆದ್ದಾರಿ 57ರಲ್ಲಿ ನವಲಗುಂದ, ಶೆಲವಾಡಿ, ಗದಗ ಮಾರ್ಗವಾಗಿ ಮುಂಡರಗಿ ವರೆಗೆ 80 ಕಿ.ಮೀ.

# ಬೀರೂರು ಸಮ್ಮಸಗಿ ರಾಜ್ಯ ಹೆದ್ದಾರಿ 76ರಲ್ಲಿ ದಾವಣಗೆರೆ, ಸಂತೆಬೆನ್ನೂರು, ಚನ್ನಗಿರಿಯಿಂದ ಬೀರೂರು ಮಾರ್ಗವಾಗಿ 149 ಕಿ.ಮೀ

# ಔರಾದ್-ಸದಾಶಿವಗಡ ಹೆದ್ದಾರಿ 34, ರಾಮ ದುರ್ಗ-ಮಾನ್ವಿ ಹೆದ್ದಾರಿ 14 ಹಾಗೂ ಸಂಕೇಶ್ವರ- ಸಂಗಮ ರಾಜ್ಯ ಹೆದ್ದಾರಿ 44ರಲ್ಲಿ ಸವದತ್ತಿಯಿಂದ ರಾಮದುರ್ಗ, ಹಲಗಟ್ಟಿ, ಬಾದಾಮಿ, ಪಟ್ಟದಕಲ್ಲು ಮಾರ್ಗವಾಗಿ ಕಮತಗಿ ವರೆಗೆ 130 ಕಿ.ಮೀ.

# ಪಡುಬಿದ್ರಿ-ಚಿಕ್ಕಲಗುಡ್ಡ ರಾಜ್ಯ ಹೆದ್ದಾರಿ 1ರಲ್ಲಿ ಹಾನಗಲ್ ನಿಂದ ಶಿಕಾರಿಪುರ ಮಾರ್ಗವಾಗಿ ತಡಸವರೆಗೆ 144 ಕಿ.ಮೀ

# ಪಡುಬಿದ್ರಿ-ಚಿಕ್ಕಲಗುಡ್ಡ ಹೆದ್ದಾರಿ 1ರಲ್ಲಿ ಕುಪ್ಪಳಿ, ಕವಿಶೈಲ ಹೆದ್ದಾರಿ 148ರಲ್ಲಿ ಹಾಗೂ ಕುಮಟಾ- ತಡಸ ರಾಜ್ಯ ಹೆದ್ದಾರಿ 69ರಲ್ಲಿ ಶಿವಮೊಗ್ಗ 0.40 ಕಿ.ಮೀ.ಯಿಂದ ಶಿಕಾರಿಪುರ, ಆನವಟ್ಟಿಮಾರ್ಗವಾಗಿ ಹಾನಗಲ್​ವರೆಗೆ 128 ಕಿ.ಮೀ.

# ಹುಣಸನಹಳ್ಳಿ-ಚಿಕ್ಕಳ್ಳಿ ರಾಜ್ಯ ಹೆದ್ದಾರಿ 3ರಲ್ಲಿ ಹಾಗೂ ಕೊರಟಗೆರೆ-ಬಾವಲಿ ರಾಜ್ಯ ಹೆದ್ದಾರಿ 33ರಲ್ಲಿ ಮಳವಳ್ಳಿ, ಮದ್ದೂರು, ಹುಲಿಯೂರು ದುರ್ಗ, ಕುಣಿಗಲ್, ತುಮಕೂರು ಮಾರ್ಗವಾಗಿ ಕೊರಟಗೆರೆವರೆಗೆ 150 ಕಿ.ಮೀ.

# ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ 18ರಲ್ಲಿ ಮುಧೋಳದಿಂದ ಮಹಾಲಿಂಗಪುರ, ಕಬ್ಬೂರ, ಚಿಕ್ಕೊಡಿ, ನಿಪ್ಪಾಣಿ (ರಾಷ್ಟ್ರೀಯ ಹೆದ್ದಾರಿ 4) ಮಾರ್ಗವಾಗಿ ಮಹಾರಾಷ್ಟ್ರ ಗಡಿವರೆಗೆ 108 ಕಿ.ಮೀ. ಕೆಆರ್​ಡಿಸಿಎಲ್

# ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿ 30ರಲ್ಲಿ ಸಿಂಧನೂರಿನಿಂದ ತಾವರೆಗೇರಾ ಮಾರ್ಗವಾಗಿ ಕುಷ್ಟಗಿ ವರೆಗೆ 75 ಕಿ.ಮೀ.

# ಮಂಗಸೂಳಿ-ಲಕ್ಷ್ಮೆಶ್ವರ ರಾಜ್ಯ ಹೆದ್ದಾರಿ 73ರಲ್ಲಿ ಹುಬ್ಬಳ್ಳಿಯಿಂದ ಕುಂದಗೋಳ ಮಾರ್ಗವಾಗಿ ಲಕ್ಷ್ಮೆಶ್ವರ ವರೆಗೆ 43 ಕಿ.ಮೀ.

# ಕಂಪ್ಲಿ, ಕುರುಗೋಡು ರಾಜ್ಯ ಹೆದ್ದಾರಿ 132ರಲ್ಲಿ ಬಳ್ಳಾರಿಯಿಂದ ಮೋಕಾವರೆಗೆ 26 ಕಿ.ಮೀ.

ರಾಜ್ಯ ಸರ್ಕಾರ ಹೊಸದಾಗಿ ಟೋಲ್ ವಸೂಲಿಗೆ ಮುಂದಾಗಿಲ್ಲ. ಈ ಹಿಂದೆ ಕೈಗೊಂಡ ತೀರ್ವನಕ್ಕೆ ಅನುಸಾರವಾಗಿ 10 ಟೋಲ್​ಗಳಿಗೆ ಟೆಂಡರ್ ಕರೆಯಲಾಗಿತ್ತು. ಆ ಪೈಕಿ 5 ಟೋಲ್​ಗಳಲ್ಲಿ ಈಗ ಸಂಗ್ರಹ ಆರಂಭಗೊಂಡಿದೆ. ಇನ್ನುಳಿದ ಟೋಲ್​ಗಳಲ್ಲೂ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ.

                                       – | ಕೆ.ಎಸ್.ಕೃಷ್ಣಾರೆಡ್ಡಿ ಪಿಡಬ್ಲ್ಯೂಡಿ ಕಾರ್ಯದರ್ಶಿ

ಕಿಮೀಗೆ ಎಷ್ಟು?

ಪ್ರಸ್ತಾವಿತ 17 ರಾಜ್ಯ ಹೆದ್ದಾರಿಗಳಲ್ಲಿ ಕಾರ್, ಜೀಪ್, ವ್ಯಾನ್ ಮತ್ತಿತರ ಲಘು ಮೋಟಾರು ವಾಹನಗಳಿಗೆ ಪ್ರತಿ ಕಿಮೀಗೆ 58 ಪೈಸೆ, ಕಡಿಮೆ ಭಾರ ಹೊರುವ ಭಾರಿ ವಾಹನಗಳಿಗೆ 86 ಪೈಸೆ, ಬಸ್ ಮತ್ತು ಟ್ರಕ್​ಗೆ 1.73 ರೂ., ಮಲ್ಟಿ ಎಕ್ಸೆಲ್, ಅರ್ಥ್ ಮೂವಿಂಗ್ ಮಷಿನರಿ ಮತ್ತು 3ರಿಂದ 6 ಎಕ್ಸೆಲ್ ವಾಹನಗಳಿಗೆ 2.57 ರೂ. ಹಾಗೂ ಭಾರಿ ವಾಹನ ಮತ್ತು ಸೆವೆನ್ ಎಕ್ಸಲ್​ಗೂ ಅಧಿಕ ಭಾರದ ವಾಹನಗಳಿಗೆ 3.45 ರೂ.ದಂತೆ ಶುಲ್ಕ ಸಂಗ್ರಹಿಸಲಾಗುವುದು.

ವಿನಾಯಿತಿ ಉಂಟು

ಟ್ರಾಕ್ಟರ್, ಬೈಕ್, ಎತ್ತಿನಗಾಡಿ, ಸ್ಥಳೀಯವಾಗಿ ನಿತ್ಯ ಓಡಾಡುವ ಎಲ್ಲ ವಾಹನಗಳು (ಮಾಸಿಕ ಕನಿಷ್ಠ) ಶುಲ್ಕದೊಂದಿಗೆ, ಕೃಷಿ ಸಂಬಂಧಿ ಇತರೆ ವಾಹನಗಳಿಗೆ ರಾಜ್ಯ ಹೆದ್ದಾರಿ ಟೋಲ್ ಸಂಗ್ರಹದಿಂದ ವಿನಾಯಿತಿ ನೀಡಲಾಗಿದೆ.