ಕರ್ನಾಟಕ ರಾಜ್ಯ ಸರ್ಕಾರ : ಸ್ಥಿರಾಸ್ತಿ ಮಾರ್ಗಸೂಚಿ ದರ ಶೇ.5 ರಿಂದ ಶೇ.20 ಹೆಚ್ಚಳ

0
807

ನೋಟು ಅಮಾನ್ಯೀಕರಣದ ಹೊಡೆತದಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಸುಧಾರಿಸಿಕೊಳ್ಳುವ ಹಂತ ತಲುಪುತ್ತಿರುವಾಗಲೇ ರಾಜ್ಯ ಸರಕಾರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಿಸಿದೆ.

ಬೆಂಗಳೂರು: ನೋಟು ಅಮಾನ್ಯೀಕರಣದ ಹೊಡೆತದಿಂದ ರಿಯಲ್‌ ಎಸ್ಟೇಟ್‌ ಉದ್ಯಮ ಸುಧಾರಿಸಿಕೊಳ್ಳುವ ಹಂತ ತಲುಪುತ್ತಿರುವಾಗಲೇ ರಾಜ್ಯ ಸರಕಾರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಹೆಚ್ಚಿಸಿದೆ. 

ಶೇ.5 ರಿಂದ ಶೇ.20 ರಷ್ಟು ಮಾರ್ಗಸೂಚಿ ದರ ಹೆಚ್ಚಳ ಮಾಡಲಾಗಿದ್ದು, ಇದರಿಂದ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಆಸ್ತಿ ಖರೀದಿ ಮತ್ತಷ್ಟು ದುಬಾರಿಯಾಗಲಿದೆ. 

ಬೆಂಗಳೂರು ನಗರ, ಬೆಂ. ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಉಪನೋಂದಣಿ ಕಚೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗೆ ಹೊಸ ದರ ಅನ್ವಯವಾಗಲಿದೆ. ಮಾರ್ಗಸೂಚಿ ದರಗಳ ತಾತ್ಕಾಲಿಕ ಅಧಿಸೂಚನೆಯ ಪಟ್ಟಿಯನ್ನು ಸೆಪ್ಟೆಂಬರ್ 3 ರ ಸೋಮವಾರ ಪ್ರಕಟಿಸಲಾಗಿದೆ. 

ಮಾರ್ಗಸೂಚಿ ದರ ಪರಿಷ್ಕರಣೆಯ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಸರಕಾರದ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ತಾತ್ಕಾಲಿಕ ಮಾರ್ಗಸೂಚಿ ದರಗಳನ್ನು ಜಿಲ್ಲಾ ನೋಂದಣಿ ಕಚೇರಿ, ಉಪ ನೋಂದಣಿ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್‌, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ತಹಶೀಲ್ದಾರ್‌ ಕಚೇರಿಗಳಲ್ಲಿ ಪ್ರಕಟಿಸಲಾಗಿದ್ದು, ಇಲಾಖೆ ವೆಬ್‌ಸೈಟ್‌ನಲ್ಲೂ ಲಭ್ಯವಿದೆ. 

ಆಕ್ಷೇಪಣೆ ಸಲ್ಲಿಕೆಗೆ ಅವಕಾಶ: ದರ ಪರಿಷ್ಕರಣೆ ಬಗ್ಗೆ ಸಾರ್ವಜನಿಕರು 15 ದಿವಸಗಳೊಳಗೆ ಆಕ್ಷೇಪಣೆಗಳನ್ನು ಸದಸ್ಯ ಕಾರ್ಯದರ್ಶಿ, ಕೇಂದ್ರ ಮೌಲ್ಯಮಾಪನ ಹಾಗೂ ನೋಂದಣಿ ಉಪ ಮಹಾಪರಿವೀಕ್ಷ ಕರು, ಕೇಂದ್ರ ಮೌಲ್ಯ ಮಾಪನ ಸಮಿತಿ ಇವರಿಗೆ ಸಲ್ಲಿಸಬಹುದು. ಆಕ್ಷೇಪಗಳ ಪರಿಶೀಲನೆ ಬಳಿಕ ಅಂತಿಮ ಅಧಿಸೂಚನೆ ಹೊರಬೀಳಲಿದ್ದು, ಬಹುತೇಕ ಈ ತಿಂಗಳ ಕೊನೇ ವಾರದಲ್ಲಿ ಪರಿಷ್ಕೃತ ಮಾರ್ಗಸೂಚಿ ದರ ಜಾರಿಯಾಗಲಿದೆ. 

ಸ್ಥಿರಾಸ್ತಿಯ ಹಾಲಿ ಮಾರ್ಗಸೂಚಿ ದರ, ಸದ್ಯದ ಮಾರುಕಟ್ಟೆ ಮೌಲ್ಯ, ಸಂಪರ್ಕ ರಸ್ತೆ ವ್ಯವಸ್ಥ್ಥೆ, ಆಸ್ತಿ ಇರುವ ಪ್ರದೇಶದ ವಾಣಿಜ್ಯ ಚಟುವಟಿಕೆ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ, ಭೂಪರಿವರ್ತನೆ ಹಾಗೂ ಸ್ಥಿರಾಸ್ಥಿ ಸ್ವರೂಪಗಳನ್ನು ಆಧರಿಸಿ ದರ ಪರಿಷ್ಕರಣೆ ಮಾಡಲಾಗಿದೆ. 

ಈ ಹಿಂದೆ 2016ರ ಮಾರ್ಚ್‌ ತಿಂಗಳಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗಿತ್ತು. ಕೆಲವು ಕಡೆಗಳಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿ ಮಾರ್ಗಸೂಚಿ ದರ ಪರಿಷ್ಕರಣೆ ಆಗಿಲ್ಲ. ಈ ಅಂತರ ತಗ್ಗಿಸಲು ಹಾಗೂ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಗುರಿಯನ್ನು ಗಮನದಲ್ಲಿಟ್ಟುಕೊಂಡು ಈ ಪರಿಷ್ಕರಣೆ ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. 

10,400 ಕೋಟಿ ಸಂಗ್ರಹ ಗುರಿ 

2017-18ನೇ ಸಾಲಿನಲ್ಲಿ 9,000 ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಗುರಿ ನಿಗದಿಯಾಗಿತ್ತು. ಈ ಗುರಿ ಮೀರಿ 9,041 ಕೋಟಿ ರೂ. ಸಂಗ್ರಹ ಮಾಡಲಾಗಿತ್ತು. ಪ್ರಸಕ್ತ 2018 -19ನೇ ಸಾಲಿನಲ್ಲಿ 10,400 ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಗುರಿ ನಿಗದಿಯಾಗಿದೆ.