ಕರ್ನಾಟಕ ರಾಜ್ಯ ಸರ್ಕಾರ ಪಟಾಕಿಗೆ ಟೈಮ್ ಫಿಕ್ಸ್

0
268

ಸುಪ್ರೀಂಕೋರ್ಟ್​ನ ಖಡಕ್ ಸೂಚನೆ ಹಿನ್ನೆಲೆಯಲ್ಲಿ ದೆಹಲಿ ಮಾದರಿಯಂತೆ ರಾಜ್ಯದಲ್ಲೂ ದೀಪಾವಳಿಯ 3 ದಿನಗಳ ಕಾಲ ಪ್ರತಿದಿನ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸ್ಪೋಟಕ ಪಟಾಕಿ ಮಾರಾಟ ತಡೆಗಟ್ಟಬೇಕು ಮತ್ತು ಪಟಾಕಿ ಸಿಡಿತ ನಿಗದಿತ ಅವಧಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು: ಸುಪ್ರೀಂಕೋರ್ಟ್​ನ ಖಡಕ್ ಸೂಚನೆ ಹಿನ್ನೆಲೆಯಲ್ಲಿ ದೆಹಲಿ ಮಾದರಿಯಂತೆ ರಾಜ್ಯದಲ್ಲೂ ದೀಪಾವಳಿಯ 3 ದಿನಗಳ ಕಾಲ ಪ್ರತಿದಿನ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸ್ಪೋಟಕ ಪಟಾಕಿ ಮಾರಾಟ ತಡೆಗಟ್ಟಬೇಕು ಮತ್ತು ಪಟಾಕಿ ಸಿಡಿತ ನಿಗದಿತ ಅವಧಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಸ್ಪೋಟಕ ಪಟಾಕಿಗಳ ಮಾರಾಟ ತಡೆಗಟ್ಟುವಲ್ಲಿ ವಿಫಲರಾದರೆ ಸಂಬಂಧಿಸಿದ ಪೊಲೀಸ್ ಠಾಣಾಧಿಕಾರಿಗಳನ್ನೇ ನ್ಯಾಯಾಲಯದ ಆದೇಶ ಉಲ್ಲಂಘನೆಗಾಗಿ ತಪ್ಪಿತಸ್ಥರೆಂದು ನಿರ್ಧರಿಸಿ, ಕ್ರಮಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಪಟಾಕಿಯನ್ನು ದೀಪಾವಳಿಯ ದಿನಗಳಲ್ಲಿ ರಾತ್ರಿ 8 ರಿಂದ 10 ಗಂಟೆವರೆಗೆ ನಿಗದಿತ ಅವಧಿಯಲ್ಲಿ ಮಾತ್ರ ಸಿಡಿಸುವಂತೆ ಎಲ್ಲ ಇಲಾಖೆ ಕೈಜೋಡಿಸಬೇಕು. ಎಲ್ಲ ಮಹಾನಗರ ಪಾಲಿಕೆಗಳು, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿ, ತಾಲೂಕು ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪಟಾಕಿಗಳನ್ನು ಸಾಮೂಹಿಕವಾಗಿ ಸಿಡಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ.

ನಿಷೇಧ ಅನ್ವಯ: ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಪಟಾಕಿ ಸಿಡಿಸಿದ ನಂತರದ ಘನ ತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ, ಸರಣಿ ಸ್ಪೋಟಕ ಪಟಾಕಿ ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಸುವುದನ್ನು ನಿಷೇಧಿಸಲಾಗಿದೆ.

ಷರತ್ತು ಅನ್ವಯ: ಸ್ಪೋಟಕ ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರಷ್ಟೇ ಮಾರಾಟ ಮಾಡಬೇಕೆಂಬ ಷರತ್ತು ವಿಧಿಸಲಾಗಿದೆ.

ಜಾಗೃತಿ ಕಾರ್ಯಕ್ರಮ: ವಾರ್ತಾ ಮತ್ತು ಪ್ರಚಾರ ಇಲಾಖೆ ಮತ್ತು ಜಿಲ್ಲಾಡಳಿತದ ಎಲ್ಲ ಇಲಾಖೆಗಳು ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಿದೆ.

7 ದಿನ ಮೇಲ್ವಿಚಾರಣೆ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೀಪಾವಳಿಗೆ ಮುನ್ನ ಹಾಗೂ ನಂತರ ಒಟ್ಟು 14 ದಿನಗಳ ಕಾಲ ಪಟಾಕಿಯ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲಿದೆ.

ಯಾವತ್ತು ಅನುಮತಿ?

ನ.5, 6, 7,ರಂದು ರಾತ್ರಿ 8 ರಿಂದ 10ರವರೆಗಷ್ಟೇ ಪಟಾಕಿ ಸಿಡಿಸಲು ಅನುಮತಿ ಇದೆ.

ಪರಿಸ್ಥಿತಿ ಗಂಭೀರ

ಭಾರತದಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು, ಪ್ರತಿ ವರ್ಷ ಹತ್ತು ಲಕ್ಷಕ್ಕೂ ಹೆಚ್ಚು ಜನರು ವಾಯು ಮಾಲಿನ್ಯದಿಂದ ಉಂಟಾಗುವ ರೋಗಗಳಿಂದ ಸಾವನ್ನಪು್ಪತ್ತಿದ್ದಾರೆ. ರಾಜಧಾನಿ ನವದೆಹಲಿಯಲ್ಲಿ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) ಶೋಚನೀಯ ಸ್ಥಿತಿಯಲ್ಲಿದೆ ಎಂದು ಅಮೆರಿಕ ಮೂಲದ ವಾಯು ಗುಣಮಟ್ಟ ಮತ್ತು ಹವಾಮಾನ ವಿಶ್ಲೇಷಣೆ ಹಾಗೂ ಸಂಶೋಧನೆ (ಎಸ್​ಎಎಫ್​ಎಆರ್) ಹೇಳಿದೆ.

ಸುಪ್ರೀಂ ಆದೇಶವೇನು?

  • ಕಡಿಮೆ ಶಬ್ದ ಮತ್ತು ಹೊಗೆ ಹೊಮ್ಮುವ ಹಸಿರು (ಪರಿಸರ ಸ್ನೇಹಿ) ಪಟಾಕಿಗಳನ್ನು ರಾತ್ರಿ 8ರಿಂದ 10 ಗಂಟೆವರೆಗಷ್ಟೇ ಸಿಡಿಸಬಹುದು.
  • ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಮಧ್ಯರಾತ್ರಿ 35 ನಿಮಿಷ ಮಾತ್ರ ಪಟಾಕಿ ಹಚ್ಚಲು ಅವಕಾಶ. ರಾತ್ರಿ 11.55ರಿಂದ 12.30ರವರೆಗೆ ಮಾತ್ರ ಸಿಡಿಮದ್ದಿನ ಸಂಭ್ರಮಕ್ಕೆ ಮಿತಿ.
  • ಸಾಮೂಹಿಕವಾಗಿ ಪಟಾಕಿ ಸಿಡಿಸಲು ರಾಜ್ಯ ಸರ್ಕಾರಗಳು ಅನುವು ಮಾಡಿಕೊಡಬೇಕು. ನಿರ್ದಿಷ್ಟ ಜಾಗವನ್ನು ಒಂದು ವಾರ ದೊಳಗೆ ಗುರುತಿಸಿ, ಸಾರ್ವಜನಿಕವಾಗಿ ಪ್ರಕಟಿಸಲು ಸೂಚನೆ.
  • ಶಬ್ದ ಮತ್ತು ವಾಯುಮಾಲಿನ್ಯದ ಪರಿಮಿತಿಯೊಳಗೆ ಇರುವ ಪಟಾಕಿಗಳ ಮಾರಾಟಕ್ಕೆ ಮಾತ್ರ ಅನುಮತಿ. ಮಾಲಿನ್ಯದ ಪರಿಮಿತಿಯೊಳಗಿದೆ ಎಂಬುದನ್ನು ಪೆಟ್ರೋಲಿಯಂ ಮತ್ತು ಸ್ಪೋಟಕ ಸುರಕ್ಷತಾ ಸಂಸ್ಥೆ (ಪಿಇಎಸ್​ಒ) ದೃಢೀಕರಿಸಿದರೆ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ. ಉಲ್ಲಂಘಿಸಿದರೆ ಪರವಾನಗಿ ರದ್ದು.
  • ಆನ್​ಲೈನ್​ನಲ್ಲಿ ಪಟಾಕಿ ಮಾರಾಟ ಮಾಡಿದರೆ ದಂಡ ವಿಧಿಸುವುದರ ಜತೆಗೆ ಕಾನೂನು ಕ್ರಮ.
  • ನಿಬಂಧನೆ ಉಲ್ಲಂಘನೆಯಾದರೆ ಸ್ಥಳೀಯ ಪೊಲೀಸ್ ಅಧಿಕಾರಿಯೇ ಹೊಣೆ, ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾದೀತು ಎಚ್ಚರ.
  • ದೀಪಾವಳಿ ಸಂದರ್ಭದಲ್ಲಿ ಎರಡು ವಾರ ಪಟಾಕಿಯ ಪ್ರದೂಷಣೆ ಮೇಲೆ ನಿಗಾ ಇರಿಸುವಂತೆ ಕೇಂದ್ರ ಮತ್ತು ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸೂಚನೆ
  • ಪಟಾಕಿ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶೈಕ್ಷಣಿಕ ಸಂಸ್ಥೆ, ಕಚೇರಿಗಳಲ್ಲಿ ಅಭಿಯಾನ ನಡೆಸಲು ಸರ್ಕಾರಕ್ಕೆ ಸಲಹೆ