“ಕರ್ನಾಟಕ ರಾಜ್ಯ ಪೊಲೀಸ್” ಇಲಾಖೆಯ ನೂತನ ಆ್ಯಪ್‌ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ

0
26

ನಾಗರಿಕರಿಗೆ ತಮ್ಮ ಅಂಗೈಯಲ್ಲೇ ಇನ್ನು ಮುಂದೆ ಪೊಲೀಸ್ ಸೇವೆ ಸಿಗಲಿದೆ. ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಿರಬೇಕು ಎಂಬ ಉದ್ದೇಶದಿಂದ ‘ಕರ್ನಾಟಕ ರಾಜ್ಯ ಪೊಲೀಸ್’ ಆ್ಯಪ್‌ ಅನ್ನು ಇಲಾಖೆ ರೂಪಿಸಿದೆ.

ಬೆಂಗಳೂರು: ನಾಗರಿಕರಿಗೆ ತಮ್ಮ ಅಂಗೈಯಲ್ಲೇ ಇನ್ನು ಮುಂದೆ ಪೊಲೀಸ್ ಸೇವೆ ಸಿಗಲಿದೆ. ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಿರಬೇಕು ಎಂಬ ಉದ್ದೇಶದಿಂದ ‘ಕರ್ನಾಟಕ ರಾಜ್ಯ ಪೊಲೀಸ್’ ಆ್ಯಪ್‌ ಅನ್ನು ಇಲಾಖೆ ರೂಪಿಸಿದೆ.

ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ಜೂನ್ 22 ರ ಶುಕ್ರವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಈ ನೂತನ ಆ್ಯಪ್‌ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಕುಮಾರಸ್ವಾಮಿ, ‘ಈ ಆ್ಯಪ್‌ ಮೂಲಕ ಜನಸಾಮಾನ್ಯರಿಗೆ ಪೊಲೀಸರು ಮತ್ತಷ್ಟು ಹತ್ತಿರವಾಗಲಿದ್ದಾರೆ. ಜನ ಹಾಗೂ ಪೊಲೀಸರು, ಈ ಆ್ಯಪ್‌ನ ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಕೋರಿದರು.

‘ಹೊಸ ಸರ್ಕಾರದ ಮೇಲೆ ಜನರು ವಿಶ್ವಾಸ ಇಟ್ಟುಕೊಂಡಿದ್ದಾರೆ. ಕೆಳ ಹಂತದಲ್ಲಿ ಅಪರಾಧಗಳಿಗೆ ಕಡಿವಾಣ ಹಾಕಬೇಕಿದೆ. ಅದಕ್ಕೆ ಈ ಆ್ಯಪ್‌ ರೂಪಿಸಲಾಗಿದೆ. ಯಾವುದೇ ಸ್ಥಳದಿಂದ ಯಾವುದೇ ಸಮಯದಲ್ಲೂ ಪೊಲೀಸರಿಗೆ ಮಾಹಿತಿ ನೀಡುವ ಅವಕಾಶವೂ ಇದೆ’ ಎಂದು ಹೇಳಿದರು.

ಕೋಮು ಸೌಹಾರ್ದತೆ ಕದಡಿದರೆ  ಕ್ರಮ: ‘ನಾನು ಮುಖ್ಯಮಂತ್ರಿ ಆಗಿರುವವರೆಗೂ ರಾಜ್ಯದಲ್ಲಿ ಕೋಮು ಗಲಭೆ ಆಗಬಾರದು. ಸಾಮರಸ್ಯ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಆ ಸಂಘಟನೆ, ಈ ಸಂಘಟನೆ ಎಂದು ಹೆಸರು ಹೇಳುವುದಿಲ್ಲ. ಯಾವುದೇ ಸಂಘಟನೆ ಹಾಗೂ ಅದರ ಸದಸ್ಯರು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಬಾರದು. ಪ್ರಚೋದನಾ ಕೃತ್ಯಗಳು ಪುನರಾವರ್ತನೆಯಾದರೆ ಕಠಿಣ ಕ್ರಮ ಎದುರಿಸಬೇಕಾದಿತು’ ಎಂದು ಎಚ್ಚರಿಸಿದರು.

ಅಧಿಕಾರಿಗಳೇ ಹೊಣೆ: ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ‘ಕೋಮು ಗಲಭೆ ಹಾಗೂ ಯಾವುದೇ ಗಂಭೀರ ಅಪರಾಧಗಳು ನಡೆದರೆ, ಆಯಾ ಜಿಲ್ಲೆ ಹಾಗೂ ಕಮಿಷನರೇಟ್‌ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ಅಪರಾಧಗಳ ಸಂಖ್ಯೆವಾರು ದೇಶದಲ್ಲೇ ಕರ್ನಾಟಕ 10 ಸ್ಥಾನದಲ್ಲಿದೆ. ಎಚ್ಚರಿಕೆಯಿಂದ ಕೆಲಸ ಮಾಡಿ, ಅಪರಾಧ ಸಂಖ್ಯೆ ಇಳಿಸುವಂತೆ ಅಧಿಕಾರಿಗಳಿಗೆ ಹೇಳಿದ್ದೇವೆ. ರಾಜ್ಯದಲ್ಲಿ 14 ಸಾವಿರ ಕಾನ್‌ಸ್ಟೆಬಲ್ ಹುದ್ದೆ ಖಾಲಿ ಇದ್ದು, ಭರ್ತಿಗೆ ಕ್ರಮ ಕೈಗೊಳ್ಳಲಿದ್ದೇವೆ. ಪೊಲೀಸ್ ಗೃಹ ಯೋಜನೆಯಡಿ 11 ಸಾವಿರ ಮನೆಗಳ ನಿರ್ಮಾಣ 2020ರ ವೇಳೆಗೆ ಪೂರ್ಣಗೊಳ್ಳಲಿದೆ’ ಎಂದರು.

‘ರಾಜ್ಯದಲ್ಲಿ ಉಪ ಗಸ್ತು (ಸಬ್‌ ಬೀಟ್) ಜಾರಿಯಲ್ಲಿದ್ದು, ಅಪರಾಧಗಳು ಹತೋಟಿಗೆ ಬಂದಿವೆ. ಇದೇ ಮಾದರಿಯಲ್ಲೇ ದೇಶದ ಎಲ್ಲ ರಾಜ್ಯಗಳಲ್ಲಿ ಸಬ್ ಬೀಟ್‌ ವ್ಯವಸ್ಥೆ ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದು ರಾಜ್ಯ ಸರ್ಕಾರದ ಹೆಮ್ಮೆ’ ಎಂದು ಹೇಳಿದರು.

ನೂತನ ಆ್ಯಪ್‌ನ ವಿಶೇಷತೆ

* ಗೂಗಲ್ ಪ್ಲೇ ಸ್ಟೋರ್‌ನಲ್ಲಿ  ‘Karnataka State Police (Official)’ ಆ್ಯಪ್ ಲಭ್ಯವಿದೆ.
* ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಈ ಆ್ಯಪ್ ಬಳಸಬಹುದು
* ಅಪರಾಧ ಕೃತ್ಯಗಳ ಬಗ್ಗೆ ಮಾಹಿತಿ ನೀಡಬಹುದು
* ತುರ್ತು ಸಂದರ್ಭಗಳಲ್ಲಿ ನಿಯಂತ್ರಣ ಕೊಠಡಿಗೆ ಕರೆ ಮಾಡಬಹುದು
* ಪೊಲೀಸ್‌ ಇಲಾಖೆಯ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಬಹುದು
* ನಂಬಿಕಸ್ಥರ ಮೊಬೈಲ್ ನಂಬರ್ ನಮೂದಿಸಬಹುದು. ಅಪಾಯದ ಸಂದರ್ಭಗಳಲ್ಲಿ ಅವರಿಗೆ ಸಂದೇಶಗಳು ಹೋಗಲಿವೆ