ಕರ್ನಾಟಕ ರಾಜ್ಯದ ಮೂವರು ಶಿಕ್ಷಕರು “ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ”ಗೆ ಆಯ್ಕೆ

0
1331

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್​ಆರ್​ಡಿ) ನೀಡುವ 2017ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ.45 ಶಿಕ್ಷಕರ ಪಟ್ಟಿ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ ಡಾ.ಜಿ. ರಮೇಶಪ್ಪ, ಆರ್.ಎನ್. ಶೈಲಾ, ಡಾ.ಎಂ. ಶಿವಕುಮಾರ್ ಕೂಡ ಆಯ್ಕೆಯಾಗಿದ್ದಾರೆ.

ಬೆಂಗಳೂರು: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್​ಆರ್​ಡಿ) ನೀಡುವ 2017ನೇ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ.

45 ಶಿಕ್ಷಕರ ಪಟ್ಟಿ ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಕರ್ನಾಟಕದ ಡಾ.ಜಿ. ರಮೇಶಪ್ಪ, ಆರ್.ಎನ್. ಶೈಲಾ, ಡಾ.ಎಂ. ಶಿವಕುಮಾರ್ ಕೂಡ ಆಯ್ಕೆಯಾಗಿದ್ದಾರೆ. ಸೆ.5ರಂದು ದೆಹಲಿಯ ವಿಜ್ಞಾನಭವನದಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ 50 ಸಾವಿರ ನಗದು, ಬೆಳ್ಳಿ ಪದಕ ಮತ್ತು ಪ್ರಮಾಣ ಪತ್ರ ಒಳಗೊಂಡಿರುತ್ತದೆ.

ಡಾ.ಎಂ. ಶಿವಕುಮಾರ್: ಕಳೆದ 14 ವರ್ಷಗಳಿಂದ ಸರ್ಕಾರಿ ಶಾಲಾ ಶಿಕ್ಷಕರಾಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಶಿಢ್ಲಘಟ್ಟ ತಾಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ಸರ್ಕಾರಿ ಶಾಲಾ ಮಕ್ಕಳಿಗೆ ಕಬ್ಬಿಣದ ಕಡಲೆಯಾದ ಗಣಿತವನ್ನು ಸರಳವಾಗಿ ಅರ್ಥ ಮಾಡಿಸುವ ಸಲುವಾಗಿ ಹಲವಾರು ವಿಡಿಯೋ, ಮೊಬೈಲ್ ಆಪ್​ಗಳನ್ನು ರೂಪಿಸಿದ್ದಾರೆ. ಗಣಿತದ ಲೆಕ್ಕಗಳನ್ನು ಸುಲಭ ರೀತಿಯಲ್ಲಿ ಬಿಡಿಸುವುದನ್ನು ಯೂ-ಟ್ಯೂಬ್​ನಲ್ಲಿ ತಿಳಿಸಿ ವಿದ್ಯಾರ್ಥಿಗಳು ಅಧಿಕ ಅಂಕಗಳಿಸುವಂತೆ ಮಾಡಿದ್ದಾರೆ. ‘ನನ್ನ ಸಾಧನೆ ಗುರುತಿಸಿ ಕೇಂದ್ರ ಸರ್ಕಾರ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿಯ ವಿಚಾರ’ ಎಂದು ಶಿವಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಶೈಲಾ: ಸರ್ಕಾರಿ ಶಾಲಾ ಶಿಕ್ಷಕರಾಗಿ 24 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರು ಉತ್ತರ ವಿಭಾಗದ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ವರ್ಗಾವಣೆಯಾಗಿದ್ದು, ಇಲ್ಲಿ ವಿಜ್ಞಾನ ವಿಷಯ ಪರೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸರಳವಾಗಿ ವಿಜ್ಞಾನ ಕಲಿಯುವ ವಿಧಾನ ತಿಳಿಸಿ ಕೊಟ್ಟಿದ್ದಾರೆ. ‘ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಮೇಲೆ ಆಸಕ್ತಿ ಬರುವಂತೆ ಮಾಡಿದ್ದೆ. ಹಲವಾರು ಪ್ರಾಜೆಕ್ಟ್ ಗಳನ್ನು ವಿದ್ಯಾರ್ಥಿಗಳ ಕೈಯಿಂದಲೇ ರೂಪಿಸಿದ್ದೆ. ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಪ್ರಶಸ್ತಿ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದೆ’ ಎನ್ನುತ್ತಾರೆ ಶೈಲಾ.

ಡಾ.ಜಿ. ರಮೇಶಪ್ಪ: ದೇವನಹಳ್ಳಿ ತಾಲೂಕಿನ ವಿಜಯಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ 17 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯವರು. ಶಾಲಾ ಮಕ್ಕಳಿಗೆ ಕ್ರೀಡೆ, ಯೋಗ, ಏರೋಬಿಕ್ಸ್, ನೃತ್ಯ ಮುಂತಾದವುಗಳಲ್ಲಿ ಉನ್ನತಮಟ್ಟಕ್ಕೆ ಕರೆದೊಯ್ಯುವಲ್ಲಿ ಯಶಸ್ವಿ ಆಗಿದ್ದಾರೆ. ‘ನಾನು ಯಾವುದೇ ಪ್ರಶಸ್ತಿ ನಿರೀಕ್ಷಿಸದೆ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇನೆ. ಪ್ರಶಸ್ತಿ ಸಿಕ್ಕಿರುವುದು ನನ್ನ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚು ಮಾಡಿದೆ’ ಎನ್ನುತ್ತಾರೆ ಡಾ.ಜಿ. ರಮೇಶಪ್ಪ.