ಕರ್ನಾಟಕ ರಾಜ್ಯದ ಅಂತರ್ಜಲ ಪಾತಾಳದತ್ತ! (100 ತಾಲ್ಲೂಕುಗಳಲ್ಲಿ ಸ್ಥಿರಮಟ್ಟ ಕುಸಿತ; 45ಕ್ಕೆ ‘ಅತಿ ಬಳಕೆ’ ಹಣೆಪಟ್ಟಿ)

0
24

ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ವಾಡಿಕೆಯಷ್ಟು ಮಳೆ ಬಾರದಿರುವುದರಿಂದ ಅಂತರ್ಜಲ ಸ್ಥಿರಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು, ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಒಟ್ಟು 176 ತಾಲ್ಲೂಕುಗಳ ಪೈಕಿ 100ರಲ್ಲಿ ಅಂತರ್ಜಲ ಸ್ಥಿರ ಮಟ್ಟ ಕುಸಿತವಾಗಿದೆ.

ಬೆಂಗಳೂರು: ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ವಾಡಿಕೆಯಷ್ಟು ಮಳೆ ಬಾರದಿರುವುದರಿಂದ ಅಂತರ್ಜಲ ಸ್ಥಿರಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು, ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಒಟ್ಟು 176 ತಾಲ್ಲೂಕುಗಳ ಪೈಕಿ 100ರಲ್ಲಿ ಅಂತರ್ಜಲ ಸ್ಥಿರ ಮಟ್ಟ ಕುಸಿತವಾಗಿದೆ.

ಅಂತರ್ಜಲ ಮಟ್ಟ ತೀವ್ರ ಕುಸಿದ ಹಿನ್ನೆಲೆಯಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿಯ ನಿರ್ದೇಶನದಂತೆ 45 ತಾಲ್ಲೂಕುಗಳನ್ನು ಶೀಘ್ರದಲ್ಲೇ ಅಂತರ್ಜಲ ‘ಅತಿ ಬಳಕೆ’ ತಾಲ್ಲೂಕುಗಳು ಎಂದು ಘೋಷಿಸಿ ರಾಜ್ಯ ಅಂತರ್ಜಲ ಪ್ರಾಧಿಕಾರ ಅಧಿಸೂಚನೆ ಹೊರಡಿಸಲಿದೆ.

ಕೋಲಾರ ಜಿಲ್ಲೆಯಾದ್ಯಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸ್ಥಿರ ಮಟ್ಟ ಪಾತಾಳಕ್ಕಿಳಿದಿದೆ. ಕೋಲಾರ ತಾಲ್ಲೂಕಿನಲ್ಲಿ 2013–17ರ ಅವಧಿಯ ಸರಾಸರಿ ಗಮನಿಸಿದರೆ ಅಂತರ್ಜಲ ಸ್ಥಿರಮಟ್ಟ 62.54 ಮೀಟರ್‌ ಇತ್ತು. ಇದು ಈಗ 83.49 ಮೀಟರ್‌ (20.95 ಮೀಟರ್‌) ಕೆಳಕ್ಕೆ ಇಳಿದಿದೆ. ರಾಯಚೂರು, ಹಾವೇರಿ, ಧಾರವಾಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜ
ನಗರ ಜಿಲ್ಲೆಗಳ ಸ್ಥಿತಿಯೂ ಕಳವಳಕ್ಕೀಡು ಮಾಡುವಂತಿದೆ ಎಂದು ರಾಜ್ಯ ಅಂತರ್ಜಲ ನಿರ್ದೇಶನಾಲಯ ತಿಳಿಸಿದೆ.

ಐದು ವರ್ಷಗಳ ವಾರ್ಷಿಕ ಸರಾಸರಿ ಗಮನಿಸಿದರೆ 76 ತಾಲ್ಲೂಕುಗಳಲ್ಲಿ ಮಾತ್ರ ಏರಿಕೆ ಕಂಡುಬಂದಿದೆ. ಅದರಲ್ಲೂ ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳು ಮತ್ತು ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕು ಬಿಟ್ಟರೆ, ಉಳಿದ ಕಡೆಗಳಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದೆ. ರಾಮನಗರ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂತರ್ಜಲ ಸ್ಥಿರಮಟ್ಟ ಹೆಚ್ಚಳ ಕಂಡುಬಂದಿದೆ. ಇಲ್ಲಿ 2013–17ರ ಅವಧಿಯ ಸರಾಸರಿ ಗಮನಿಸಿದರೆ 38.86 ಮೀಟರ್‌ ಕೆಳಗೆ ಇತ್ತು. ಅದೀಗ 18.83 ಮೀಟರ್‌ (20.03 ಮೀಟರ್‌) ಮೇಲಕ್ಕೆ ಬಂದಿದೆ.

ಅನುಮತಿ ಕಡ್ಡಾಯ: ಅಂತರ್ಜಲ ‘ಅತಿ ಬಳಕೆ’ ತಾಲ್ಲೂಕುಗಳು ಎಂದು ಘೋಷಣೆಯಾದ ಪ್ರದೇಶಗಳಲ್ಲಿ ಬಾವಿ ಅಥವಾ ಕೊಳವೆಬಾವಿ ಕೊರೆದು ನೀರು ತೆಗೆಯಲು ಸರ್ಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ.

ರಾಜ್ಯದಾದ್ಯಂತ 1,256 ಬಾವಿಗಳು ಮತ್ತು 496 ಕೊಳವೆಬಾವಿ ಸೇರಿ ಒಟ್ಟು 1,752 ಅಧ್ಯಯನ ಬಾವಿಗಳಲ್ಲಿ ಪ್ರತಿ ತಿಂಗಳು ಅಂತರ್ಜಲ ಸ್ಥಿರ ಜಲಮಟ್ಟವನ್ನು ನಿರ್ದೇಶನಾಲಯ ದಾಖಲಿಸಲಾಗುತ್ತಿದೆ. ಈ ದತ್ತಾಂಶಗಳನ್ನು ಕ್ರೋಡೀಕರಿಸಿ ಜಲ ಮಟ್ಟ ಕುಸಿತವನ್ನು ಲೆಕ್ಕ ಹಾಕಲಾಗುತ್ತದೆ.

ಎರಡು ತಾಲ್ಲೂಕು ಸೇರ್ಪಡೆ: ಅಂತರ್ಜಲ ಸಂಪನ್ಮೂಲ ಮೌಲೀಕರಿಸಿ ಈ ಹಿಂದೆ (2013ರ ಮಾರ್ಚ್‌) 15 ಜಿಲ್ಲೆಗಳ 43 ತಾಲ್ಲೂಕುಗಳನ್ನು ಅತಿ ಬಳಕೆ ಪ್ರದೇಶಗಳ ಎಂದು ವರ್ಗೀಕರಿಸಲಾಗಿತ್ತು. ಇದೀಗ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮತ್ತು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕುಗಳು ಈ ಪಟ್ಟಿಗೆ ಹೊಸತಾಗಿ ಸೇರಲಿವೆ. ಎಲ್ಲ ತಾಲ್ಲೂಕುಗಳ ಅಂತರ್ಜಲ ಮಟ್ಟವನ್ನು ಮೌಲೀಕರಿಸಿ, ಮೂರು ತಿಂಗಳ ಹಿಂದೆಯೇ ಕೇಂದ್ರೀಯ ಅಂತರ್ಜಲ ಮಂಡಳಿಗೆ ವರದಿ ಸಲ್ಲಿಸಲಾಗಿದೆ.

ಅಂತರ್ಜಲ ಬಳಕೆ ಮೇಲೆ ನಿಯಂತ್ರಣ ಹೇರುವ ಉದ್ದೇಶದಿಂದ 2009ರಲ್ಲಿ 10 ಜಿಲ್ಲೆಗಳ 35 ತಾಲ್ಲೂಕುಗಳನ್ನು ನೀರಿನ ಅತಿ ಬಳಕೆಯ ತಾಲ್ಲೂಕುಗಳ ಎಂದು ಮೊದಲ ಬಾರಿಗೆ ಘೋಷಿಸಲಾಗಿತ್ತು. ಈ ಪೈಕಿ, ಆರು ತಾಲ್ಲೂಕುಗಳಲ್ಲಿ ನಂತರದ ವರ್ಷಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡುಬಂದ ಪರಿಣಾಮ, 2011ರಲ್ಲಿ ಈ ಪಟ್ಟಿಯಿಂದ ಆರು ತಾಲ್ಲೂಕುಗಳನ್ನು ಕೈಬಿಟ್ಟು, ಒಂದು ತಾಲ್ಲೂಕನ್ನು ಸೇರಿಸಿ 30 ಅನ್ನು ಅಂತರ್ಜಲ ಅತಿ ಬಳಕೆಯ ತಾಲ್ಲೂಕುಗಳು ಎಂದು ಮತ್ತೆ ಅಧಿಸೂಚಿಸಲಾಗಿತ್ತು. 2013ರಲ್ಲಿ ಈ ಪಟ್ಟಿಗೆ ಮತ್ತೆ 13 ತಾಲ್ಲೂಕು
ಗಳು ಸೇರಿದ್ದವು.

ಅಂತರ್ಜಲವನ್ನು ವಿವೇಚನಾರಹಿತವಾಗಿ ಬಳಸುವುದರಿಂದ ಉದ್ಭವಿಸಿದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ‘ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಯಮ ಹಾಗೂ ನಿಯಂತ್ರಣ) ಕಾಯ್ದೆ – 2011’ ಅನ್ನು ಜಾರಿಗೆ ತಂದಿದೆ. ಇದರ ಭಾಗವಾಗಿ 2012ರಲ್ಲಿ ಅಂತರ್ಜಲ ಪ್ರಾಧಿಕಾರ ರಚಿಸಲಾಗಿದೆ.

ಈ ಕಾಯ್ದೆ ಅನ್ವಯ ಎಲ್ಲ ಕೊಳವೆಬಾವಿಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಹೊಸತಾಗಿ ಕೊಳವೆಬಾವಿಗಳನ್ನು ತೆಗೆಯಲು ಸರ್ಕಾರದಿಂದ ಅನುಮತಿ ಪಡೆಯಬೇಕು. ನೋಂದಣಿ ಮಾಡಿಕೊಳ್ಳದೆ ಕೊಳವೆಬಾವಿ ಕೊರೆಸಿದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಶೇ 80ರಷ್ಟು ಕೊಳವೆಬಾವಿಗಳು ವಿಫಲ!

ಅಂತರ್ಜಲ ಪಾತಾಳಕ್ಕಿಳಿದರೂ ಅದನ್ನು ಮೇಲೆತ್ತಲು ಲಕ್ಷಾಂತರ ಹಣ ವೆಚ್ಚ ಮಾಡಿ ಕೊಳವೆಬಾವಿ ಕೊರೆಯುವ ಪ್ರಕ್ರಿಯೆ ಮುಂದುವರಿದಿದೆ. ಕಳೆದ 2–3 ತಿಂಗಳಲ್ಲಿ ಕೊರೆದ ಕೊಳವೆಬಾವಿಗಳ ಪೈಕಿ ಶೇ 80ರಷ್ಟು ವಿಫಲವಾಗಿದೆ. ಅದರಲ್ಲೂ ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿದೆ ಎಂದು ಅಂತರ್ಜಲ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

“ರಾಜ್ಯದ ಶೇ 84ರಷ್ಟು ಭಾಗದಲ್ಲಿ ಅಂತರ್ಜಲ ಕುಸಿದಿದ್ದು, ಜನ ಎಚ್ಚೆತ್ತುಕೊಳ್ಳದಿದ್ದರೆ ಕೆಟ್ಟ ದಿನಗಳನ್ನು ಎದುರಿಸಬೇಕಾದೀತು”

ಜಿ.ಎಸ್‌. ಶ್ರೀನಿವಾಸ ರೆಡ್ಡಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ