ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ “ಮಂಗಗಳ ಉದ್ಯಾನ” ನಿರ್ಮಾಣಕ್ಕೆ ಮುಂದಾದ ರಾಜ್ಯ ಸರ್ಕಾರ

0
41

ಮಲೆನಾಡು ಭಾಗದಲ್ಲಿ ಮಂಗಗಳ ಉಪಟಳ ಮಿತಿಮೀರಿದ್ದು, ಅವುಗಳನ್ನು ನಿಯಂತ್ರಿಸಲು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ನಾಗೋಡಿ ಬಳಿ ‍ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ‘ಮಂಗಗಳ ಉದ್ಯಾನ’ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ಬೆಂಗಳೂರು: ಮಲೆನಾಡು ಭಾಗದಲ್ಲಿ ಮಂಗಗಳ ಉಪಟಳ ಮಿತಿಮೀರಿದ್ದು, ಅವುಗಳನ್ನು ನಿಯಂತ್ರಿಸಲು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ನಾಗೋಡಿ ಬಳಿ ‍ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ‘ಮಂಗಗಳ ಉದ್ಯಾನ’ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ಪ್ರಾಯೋಗಿಕವಾಗಿ 100 ಎಕರೆ ಅರಣ್ಯ ಪ್ರದೇಶದಲ್ಲಿ ಮಂಗಗಳ ಉದ್ಯಾನ ನಿರ್ಮಿಸಲು ಉದ್ದೇಶಿಸಿದ್ದು, ಇಲ್ಲಿ ಮಂಗಗಳಿಗೆ ಬೇಕಾದ ಹಣ್ಣಿನ ಗಿಡಗಳನ್ನು ಬೆಳೆಸಿ, ಜಲಮೂಲವನ್ನು ಸೃಷ್ಟಿಸಲಾಗುವುದು. ಅಗತ್ಯ ನೋಡಿಕೊಂಡು ಹೊರಗಿನಿಂದಲೂ ಹಣ್ಣು, ಮತ್ತಿತರ ಆಹಾರ ಪೂರೈಕೆ ಮಾಡಲಾಗುತ್ತದೆ. ಪಾರ್ಕ್‌ನಿಂದ ಮಂಗಗಳು ಹೊರ ಬರದಂತೆ ಸೋಲಾರ್ ಬೇಲಿ ಹಾಗೂ ಕಂದಕ ನಿರ್ಮಿಸಲಾಗುತ್ತದೆ.

ಬೆಳೆ ಹಾಳುಮಾಡಿ, ಉಪಟಳ ನೀಡುವ ಮಂಗಗಳನ್ನು ಹಿಡಿದುತಂದು ಈ ಪಾರ್ಕ್‌ಗೆ ಬಿಡಲಾಗುತ್ತದೆ. ನಂತರ ಅವುಗಳ ವರ್ತನೆಯನ್ನು ಅಧ್ಯಯನ ಮಾಡಲಾಗುತ್ತದೆ. ಯೋಜನೆ ಯಶಸ್ವಿಯಾದರೆ ಮುಂದಿನ ಹಂತದಲ್ಲಿ ಇತರೆಡೆ ವಿಸ್ತರಿಸುವ ಚಿಂತನೆ ಇದೆ. ಸ್ವಯಂ ಸೇವಾ ಸಂಸ್ಥೆ ಜತೆಗೂಡಿ ಅರಣ್ಯ ಇಲಾಖೆ ಈ ಪಾರ್ಕ್ ನಿರ್ಮಿಸಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನವೆಂಬರ್ 5 ರ ಮಂಗಳವಾರ ನಡೆದ ಸಭೆಯಲ್ಲಿ ಮಲೆನಾಡು ಭಾಗದಲ್ಲಿ ಮಂಗಗಳ ಉಪಟಳದ ಬಗ್ಗೆ ಚರ್ಚಿಸಲಾಯಿತು. ಹಿಮಾಚಲ ಪ್ರದೇಶ, ಅಸ್ಸಾಂನಲ್ಲಿ ಇಂತಹ ಮಂಗಗಳ ಪಾರ್ಕ್‌ಗಳಿದ್ದು, ಅಧ್ಯಯನ ನಡೆಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು. ಅರಣ್ಯ ದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿದ್ದರೆ ಕಾಡಿನಿಂದ ನಾಡಿಗೆ ಬರುತ್ತಿರಲಿಲ್ಲ. ಇದಕ್ಕೆಲ್ಲ ಅರಣ್ಯಾಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯ ಮಾಹಿತಿ ನೀಡಿದ ಶಾಸಕ ಆರಗ ಜ್ಞಾನೇಂದ್ರ, ‘ಇತ್ತೀಚಿನ ದಿನಗಳಲ್ಲಿ ಮಂಗಗಳ ಕಾಟ ತೀವ್ರವಾಗಿದ್ದು, ಮಲೆನಾಡು ಭಾಗದಲ್ಲಿ ಪ್ರತಿ ವರ್ಷ 3 ಸಾವಿರ ಕೋಟಿಗೂ ಅಧಿಕ ಮೊತ್ತದ ಬೆಳೆ ಹಾಳುಮಾಡುತ್ತಿವೆ. ಮನೆಗಳ ಹೆಂಚುತೆಗೆದು ಒಳನುಗ್ಗಿ ಆಹಾರ ಪದಾರ್ಥಗಳನ್ನು ಹೊತ್ತುಕೊಂಡು ಹೋಗುತ್ತಿವೆ. ಅಡಿಕೆ, ತೆಂಗು, ಮೆಣಸು ಸೇರಿದಂತೆ ಕಣ್ಣಿಗೆ ಕಂಡ ಬೆಳೆಗಳನ್ನು ನಾಶಮಾಡುತ್ತಿವೆ’ ಎಂದು ಹೇಳಿದರು.

ಮತ್ತೇರಿಸುವ ಅಡಿಕೆ ರಸ

ಮಂಗಗಳಿಗೆ ಅಡಿಕೆ ಗೊನೆಯಲ್ಲಿ ಎಳೆಯದಾದ ಅಡಿಕೆ ಎಂದರೆ ಇಷ್ಟ. ಇದರ ರಸ ಹೀರಿದರೆ ಮತ್ತೇರುತ್ತದೆ. ಈ ಕಾರಣಕ್ಕೆ ಮಲೆನಾಡು ಭಾಗದಲ್ಲಿ ಅಡಿಕೆ ತೋಟಗಳಲ್ಲಿ ಮಂಗಗಳ ಹಾವಳಿ ವಿಪರೀತ. ರಸ ಹೀರುವುದರೊಂದಿಗೆ ಗೊನೆ ಕಿತ್ತು ಬಿಸಾಡುತ್ತವೆ. ಇವುಗಳ ನಿಯಂತ್ರಣ ಅಸಾಧ್ಯ ಎಂಬ ಮಟ್ಟಕ್ಕೆ ಬೆಳೆದಿದೆ. ಕೋವಿಯಿಂದ ಹುಸಿ ಗುಂಡು ಹಾರಿಸಿದರೂ ಅವು ಬೆದರುವುದಿಲ್ಲ ಎಂದು ಶೃಂಗೇರಿ ಭಾಗದ ಅಡಿಕೆ ಬೆಳೆಗಾರರೊಬ್ಬರು ತಿಳಿಸಿದರು.