ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ಪ್ರಕಟ

0
830

ಕಬಡ್ಡಿ ಆಟಗಾರ ಸುಖೇಶ್ ಹೆಗ್ಡೆ, ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ ಸಂಜನಾ ರಮೇಶ್ ಮತ್ತು ಸೈಕ್ಲಿಸ್ಟ್‌ ಮೇಘಾ ಗೂಗಾಡ ಒಳಗೊಂಡಂತೆ 13 ಕ್ರೀಡಾಪಟುಗಳು ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರು: ಕಬಡ್ಡಿ ಆಟಗಾರ ಸುಖೇಶ್ ಹೆಗ್ಡೆ, ಬ್ಯಾಸ್ಕೆಟ್‌ಬಾಲ್ ಆಟಗಾರ್ತಿ ಸಂಜನಾ ರಮೇಶ್ ಮತ್ತು ಸೈಕ್ಲಿಸ್ಟ್‌ ಮೇಘಾ ಗೂಗಾಡ ಒಳಗೊಂಡಂತೆ 13 ಕ್ರೀಡಾಪಟುಗಳು ಕರ್ನಾಟಕ ಒಲಿಂಪಿಕ್‌ ಸಂಸ್ಥೆಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

‘ಕ್ರೀಡಾ ಛಾಯಾಗ್ರಾಹಕ ಟಿ.ವಿನೋದ್ ಕುಮಾರ್ ಕೂಡ ಪ್ರಶಸ್ತಿಗೆ ಭಾಜನರಾಗಿದ್ದು ಈ 14 ಮಂದಿಗೆ ತಲಾ   1 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಗುವುದು. ಇಬ್ಬರು ಹಿರಿಯ ಕ್ರೀಡಾಪಟುಗಳು ಮತ್ತು ಮೂವರು ಕ್ರೀಡಾ ಪೋಷಕರಿಗೆ ಗೌರವ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದರಾಜ್‌ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘2002ರಿಂದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಮೊದಲು  10,000 ನಗದು ನೀಡಲಾಗುತ್ತಿತ್ತು. ನಂತರ ಮೊತ್ತವನ್ನು  25 ಸಾವಿರ ಮತ್ತು 50 ಸಾವಿರಕ್ಕೆ ಏರಿಸಲಾಗಿತ್ತು. ಎರಡು ವರ್ಷಗಳಿಂದ 1 ಲಕ್ಷ ನೀಡಲಾಗುತ್ತಿದೆ’ ಎಂದರು.

‘ಕಂಠೀರವ ಕ್ರೀಡಾಂಗಣದ ಆವರಣದಲ್ಲಿ ನಿರ್ಮಿಸಿರುವ ಒಲಿಂಪಿಕ್ ಭವನದಲ್ಲಿ ಇದೇ ಮೊದಲ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಡಿಸೆಂಬರ್ 27ರಂದು ಸಂಜೆ 5.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲ, ಸಚಿವರಾದ ಜಿ.ಪರಮೇಶ್ವರ, ಕೆ.ಜೆ.ಜಾರ್ಜ್‌, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ್‌ ಮುಂತಾದವರು ಪಾಲ್ಗೊಳ್ಳಲಿದ್ದಾರೆ’ ಎಂದು ಗೋವಿಂದರಾಜ್ ತಿಳಿಸಿದರು.

ಪ್ರೊ ಕಬಡ್ಡಿಗೆ ಮ್ಯಾಟ್ ಸಮಸ್ಯೆ: ಪ್ರೊ ಕಬಡ್ಡಿ ಲೀಗ್‌ಗೆ ಅವಕಾಶ ನೀಡದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೊ ಬ್ಯಾಡ್ಮಿಂಟನ್ ಲೀಗ್‌ಗೆ ಅನುಮತಿ ನೀಡಲು ಕಾರಣವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೋವಿಂದರಾಜ್‌ ‘ಪ್ರೊ ಕಬಡ್ಡಿಯವರು ಮ್ಯಾಟ್‌ ಮೇಲೆ ದೊಡ್ಡ ಯಂತ್ರಗಳನ್ನು ಇರಿಸುತ್ತಾರೆ. ಇದರಿಂದ ತೊಂದರೆಯಾಗುತ್ತದೆ. ಬದಲಿ ವ್ಯವಸ್ಥೆಗೆ ಅವರು ಒಪ್ಪಲಿಲ್ಲ’ ಎಂದರು.

‘ಅರಮನೆ ಮೈದಾನ ಅಥವಾ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಬೆಂಗಳೂರು ಲೆಗ್‌ನ ಪಂದ್ಯಗಳಿಗೆ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಮುಂದಿನ ಬಾರಿ ಬೆಂಗಳೂರಿನಲ್ಲೇ ಪಂದ್ಯಗಳು ನಡೆಯುವಂತೆ ಆಗಲಿ ಎಂದು ಬಯಸುತ್ತಿದ್ದೇನೆ’ ಎಂದು ಅವರು ನುಡಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅನಂತರಾಜು ಇದ್ದರು.

ಪ್ರಶಸ್ತಿ ಪುರಸ್ಕೃತರು: ಸುಖೇಶ್‌ ಹೆಗ್ಡೆ (ಕಬಡ್ಡಿ), ಬಿ.ಚೇತನ್‌ (ಅಥ್ಲೆಟಿಕ್‌), ಯು.ಕೆ.ಮಿಥುಲಾ (ಬ್ಯಾಡ್ಮಿಂಟನ್‌), ಸಂಜನಾ ರಮೇಶ್‌ (ಬ್ಯಾಸ್ಕೆಟ್‌ಬಾಲ್‌), ಮೇಘಾ ಗೂಗಾಡ (ಸೈಕ್ಲಿಂಗ್‌), ಎ.ಬಿ.ಚೀಯಣ್ಣ (ಹಾಕಿ), ಗೀತಾ ಬಿ.ದಾನಪ್ಪಗೋಳ್‌ (ಜೂಡೊ), ಸೂರಜ್ ಆರ್‌.ಪ್ರಬೋಧ್‌ (ಟೆನಿಸ್‌), ಟಿ.ಕೆ.ಕೀರ್ತನಾ (ರೋವಿಂಗ್‌), ಕೆ.ತೇಜಸ್ (ಶೂಟಿಂಗ್‌), ಶ್ರೀಹರಿ ನಟರಾಜ್‌ (ಈಜು), ಜಿ.ಟಿ.ನಳಿನಾ (ವಾಲಿಬಾಲ್‌), ಮಂಜುನಾಥ ಮರಾಟೆ (ವೇಟ್ ಲಿಫ್ಟಿಂಗ್‌), ಟಿ.ವಿನೋದ್ ಕುಮಾರ್ (ಕ್ರೀಡಾ ಛಾಯಾಗ್ರಾಹಕ). ಗೌರವ ಪ್ರಶಸ್ತಿ: ಶ್ರೀಧರ್ ಜೆ.ಪಾಟಣಕರ್‌ (ವಾಲಿಬಾಲ್ ಆಟಗಾರ), ಶ್ಯಾಮಲಾ ಶೆಟ್ಟಿ (ವೇಟ್‌ಲಿಫ್ಟರ್‌), ನೀಲಕಂಠ ರಾವ್ ಜಗದಾಳೆ, 
ರಾಜೇಶ್ ಜಗದಾಳೆ, ಮಂಜೇಗೌಡ (ಕ್ರೀಡಾ ಪೋಷಕರು).