ಕರ್ನಾಟಕ: ಅಗ್ರ ರೇಟಿಂಗ್‌ಗೆ ಏರದ ಸರ್ಕಾರಿ ವಿ.ವಿಗಳು

0
20

ಕರ್ನಾಟಕ ರಾಜ್ಯದ 43 ವಿಶ್ವವಿದ್ಯಾಲಯಗಳ ಗುಣಮಟ್ಟದ ಅಧ್ಯಯನ ನಡೆಸಿ ರೇಟಿಂಗ್ ಪ್ರಕಟಿಸಲಾಗಿದ್ದು, ಶತಮಾನ ಕಂಡ ಮೈಸೂರು, ಹಲವು ದಶಕಗಳ ಇತಿಹಾಸ ಇರುವ ಬೆಂಗಳೂರು, ಗುಲ್ಬರ್ಗ, ಮಂಗಳೂರು ವಿಶ್ವವಿದ್ಯಾಲಯಗಳೆಲ್ಲ ಅಗ್ರ ಸ್ಥಾನಕ್ಕೇರುವಲ್ಲಿ ವಿಫಲವಾಗಿವೆ.

ಬೆಂಗಳೂರು: ಕರ್ನಾಟಕ ರಾಜ್ಯದ 43 ವಿಶ್ವವಿದ್ಯಾಲಯಗಳ ಗುಣಮಟ್ಟದ ಅಧ್ಯಯನ ನಡೆಸಿ ರೇಟಿಂಗ್ ಪ್ರಕಟಿಸಲಾಗಿದ್ದು, ಶತಮಾನ ಕಂಡ ಮೈಸೂರು, ಹಲವು ದಶಕಗಳ ಇತಿಹಾಸ ಇರುವ ಬೆಂಗಳೂರು, ಗುಲ್ಬರ್ಗ, ಮಂಗಳೂರು ವಿಶ್ವವಿದ್ಯಾಲಯಗಳೆಲ್ಲ ಅಗ್ರ ಸ್ಥಾನಕ್ಕೇರುವಲ್ಲಿ ವಿಫಲವಾಗಿವೆ.

ರಾಜ್ಯದ ಸರ್ಕಾರಿ, ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳ ಗುಣಮಟ್ಟವನ್ನು ಒಂದೇ ಅಳತೆಗೋಲಿನಲ್ಲಿ ಪ್ರಮಾಣೀಕರಿಸುವ ಪ್ರಯತ್ನವನ್ನು ಉನ್ನತ ಶಿಕ್ಷಣ ಪರಿಷತ್‌ ಮಾಡಿದ್ದು, ಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮಾತ್ರ ಅಗ್ರ ಸ್ಥಾನದಲ್ಲಿ ನಿಂತು ಮಾನ ಉಳಿಸಿಕೊಂಡಿದೆ. ಮಂಗಳೂರು, ಬೆಂಗಳೂರು, ಗುಲ್ಬರ್ಗ ಮತ್ತು ಮೈಸೂರು ವಿಶ್ವವಿದ್ಯಾಲಯಗಳು ಕ್ರಮವಾಗಿ 6ರಿಂದ 9ರವರೆಗೆ ಸ್ಥಾನ ಗಳಿಸಿಕೊಂಡಿವೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ನ್ಯಾಷನಲ್‌ ಇನ್‌ಸ್ಟಿಟ್ಯೂಷನಲ್‌ ರ‍್ಯಾಂಕಿಂಗ್‌ ಫ್ರೇಂವರ್ಕ್‌ (ಎನ್‌ಐಆರ್‌ಎಫ್‌) ಮಾದರಿಯಲ್ಲಿ ರಾಜ್ಯದ 43 ವಿಶ್ವವಿದ್ಯಾಲಯಗಳ ಗುಣಮಟ್ಟ ಪರೀಕ್ಷೆ ನಡೆಸುವ ಹೊಣೆಯನ್ನು ಇಂಡಿಯನ್‌ ಸೆಂಟರ್‌ ಪಾರ್‌ ಅಕಾಡೆಮಿಕ್‌ ರ‍್ಯಾಂಕಿಂಗ್ಸ್‌ ಆ್ಯಂಡ್‌ ಎಕ್ಸಲೆನ್ಸ್‌ (ಐಸಿಎಆರ್‌ಇ) ಏಜೆನ್ಸಿಗೆ ವಹಿಸಲಾಗಿತ್ತು. ಅದು ಸಿದ್ಧಪಡಿಸಿದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ರೇಟಿಂಗ್ ಫ್ರೇಂವರ್ಕ್‌–2019ರ (ಕೆಎಸ್‌ಯುಆರ್‌ಎಫ್‌) ವರದಿಯನ್ನು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ. ಎನ್‌. ಅಶ್ವತ್ಥನಾರಾಯಣ ಮಂಗಳವಾರ ಇಲ್ಲಿ ಬಿಡುಗಡೆಗೊಳಿಸಿದರು.

ಅನ್ವೇಷಣೆ ಇಲ್ಲ: ಎಂಟು ಹೊಸ ವಿ.ವಿ.ಗಳು ಅನ್ವೇಷಣೆ ವಿಭಾಗದಲ್ಲಿ ಸಂಪೂರ್ಣ ಅಂಕ (5 ಸ್ಟಾರ್‌) ಗಳಿಸಿಲ್ಲ. ವಿಶೇಷ ವಿಶ್ವವಿದ್ಯಾಲಯಗಳ ಪೈಕಿ ಯಾವೊಂದೂ ಅನ್ವೇಷಣೆಯಲ್ಲಿ 5 ಸ್ಟಾರ್‌ ಗಳಿಸಿಲ್ಲ. ಯುವ ವಿಶ್ವವಿದ್ಯಾಲಯಗಳ ಸ್ಥಿತಿಯೂ ಇದಕ್ಕೆ ಹೊರತಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಆಕ್ಷೇಪ: ‘ಖಾಸಗಿ, ಡೀಮ್ಡ್‌ ಮತ್ತು ಸರ್ಕಾರಿ ವಿ.ವಿ.ಗಳನ್ನು ಒಟ್ಟಿಗೆ ಸೇರಿಸಿ ರೇಟಿಂಗ್‌ ಮಾಡಿದ್ದು ಸರಿಯಲ್ಲ’ ಎಂದು ಕೆಲವು ಕುಲಪತಿಗಳು ಬೇಸರ ವ್ಯಕ್ತಪಡಿಸಿದರು. ಇದರ ಬಗ್ಗೆ ಉಪಮುಖ್ಯಮಂತ್ರಿ ಅವರಲ್ಲಿ ಪ್ರಸ್ತಾಪಿಸಿದಾಗ, ‘ನಾನು ಅಧಿಕಾರ ವಹಿಸುವುದಕ್ಕೆ ಮೊದಲು ಕೈಗೊಂಡ ನಿರ್ಧಾರ ಇದು.  ರೇಟಿಂಗ್‌ ನಿರ್ಧರಿಸಲು ಖಾಸಗಿ ಏಜೆನ್ಸಿಗೆ ಅವಕಾಶ ಕೊಟ್ಟಿದ್ದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಇದಕ್ಕೆ ಆಗಿರುವ ಖರ್ಚಿನ ವಿವರವನ್ನೂ ಒದಗಿಸಲಾಗುವುದು’ ಎಂದರು.