ಕರ್ನಾಟಕದ ಹಿರಿಯ ಕಲಾವಿದರ ಮಾಸಾಶನ ಹೆಚ್ಚಳ (14 ಸಾವಿರ ಮಂದಿಗೆ ಅನುಕೂಲ: ಅಕ್ಟೋಬರ್‌ 1ರಿಂದಲೇ ಪೂರ್ವಾನ್ವಯ)

0
9

ಕಷ್ಟಕಾಲದಲ್ಲಿರುವ ಹಿರಿಯ ಸಾಹಿತಿಗಳು ಹಾಗೂ ಕಲಾವಿದರಿಗೆ ನೀಡಲಾಗುವ ಮಾಸಾಶನವನ್ನು ರಾಜ್ಯ ಸರ್ಕಾರವು ₹500 ರಷ್ಟು ಹೆಚ್ಚಿಸಿದೆ.

ರಾಮನಗರ: ಕಷ್ಟಕಾಲದಲ್ಲಿರುವ ಹಿರಿಯ ಸಾಹಿತಿಗಳು ಹಾಗೂ ಕಲಾವಿದರಿಗೆ ನೀಡಲಾಗುವ ಮಾಸಾಶನವನ್ನು ರಾಜ್ಯ ಸರ್ಕಾರವು 500 ರಷ್ಟು ಹೆಚ್ಚಿಸಿದೆ.

ರಾಜ್ಯ ಸರ್ಕಾರವು ತನ್ನ ಸಾಂಸ್ಕೃತಿಕ ನೀತಿಯ ಅನ್ವಯ 60 ವರ್ಷ ದಾಟಿದ ಸಾಹಿತಿಗಳು, ಹಿರಿಯ ಕಲಾವಿದರಿಗೆ ಈವರೆಗೆ ತಿಂಗಳಿಗೆ 1,500 ಮಾಸಾಶನ ನೀಡುತ್ತಿತ್ತು. ಇದನ್ನು 2 ಸಾವಿರಕ್ಕೆ ಹೆಚ್ಚಿಸಿ ಇದೇ ತಿಂಗಳ ನವೆಂಬರ್ 25ರಂದು ಆದೇಶ ಹೊರಡಿಸಿದೆ. ಕಳೆದ ಅಕ್ಟೋಬರ್‌ 1ರಿಂದಲೇ ಇದು ಪೂರ್ವಾನ್ವಯವಾಗಲಿದೆ. ಇದರಿಂದ ರಾಜ್ಯದಲ್ಲಿನ ಸುಮಾರು 14 ಸಾವಿರ ಮಂದಿಗೆ ಅನುಕೂಲ ಆಗಲಿದ್ದು, ಸರ್ಕಾರಕ್ಕೆ ವಾರ್ಷಿಕ 8.21 ಕೋಟಿಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ರಾಜ್ಯದಲ್ಲಿನ ಸಾಕಷ್ಟು ಹಿರಿಯ ಸಾಹಿತಿಗಳು, ಕಲಾವಿದರು ಇಂದು ಸಂಕಷ್ಟದ ಸ್ಥಿತಿಯಲ್ಲೇ ಬದುಕು ದೂಡುತ್ತಿದ್ದಾರೆ. ಅಂತಹವರಿಗೆ ಸರ್ಕಾರವು ನೀಡುವ ಮಾಸಾಶನವೇ ಆಧಾರವಾಗಿದೆ. ಅದರಲ್ಲಿಯೂ ಹಿರಿಯ ಜಾನಪದ ಕಲಾವಿದರು ಈ ಅಲ್ಪ ಹಣವನ್ನೇ ನಂಬಿ ಬದುಕುತ್ತಿದ್ದಾರೆ.

ಈಚಿನ ದಿನಗಳಲ್ಲಿ ಜೀವನ ನಿರ್ವಹಣೆ ದುಬಾರಿಯಾಗಿರುವ ಕಾರಣ ಸರ್ಕಾರವು ನೌಕರರಿಗೆ ವೇತನ ಹೆಚ್ಚಿಸಿದಂತೆ ಕಲಾವಿದರಿಗೆ ನೀಡಲಾಗುವ ಮಾಸಿಕ ಗೌರವ ಧನವನ್ನೂ ಹೆಚ್ಚಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತು, ಜಾನಪದ ಕಲಾವಿದರ ಒಕ್ಕೂಟ ಸೇರಿದಂತೆ ವಿವಿಧ ಸಂಘ–ಸಂಸ್ಥೆ ,ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದವು. ಈಗ ಇರುವ ಮಾಸಾಶನವನ್ನು ಕನಿಷ್ಠ ಮೂರರಿಂದ ಐದು ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.

‘ರಾಜ್ಯದಲ್ಲಿ ಸರ್ಕಾರದ ಮಾಸಾಶನವನ್ನೇ ನಂಬಿ ಬದುಕುವ ಕಲಾವಿದರ ಸಂಖ್ಯೆ ಸಾಕಷ್ಟಿದೆ. ಅದರಲ್ಲೂ 60 ವರ್ಷ ದಾಟಿದ ಜಾನಪದ ಕಲಾವಿದರಿಗೆ ಬೇರೆ ಆದಾಯವೇ ಇಲ್ಲ. ಹೀಗಾಗಿ ಅವರ ಜೀವನ ನಿರ್ವಹಣೆಗೆ ಅಗತ್ಯವಾದಷ್ಟು ಹಣವನ್ನು ಗೌರವ ಧನದ ರೂಪದಲ್ಲಿ ನೀಡಬೇಕು ಎಂದು ಸರ್ಕಾರವನ್ನು ಕೋರಿದ್ದೆವು. ಕನಿಷ್ಠ 1 ಸಾವಿರ ಹೆಚ್ಚಳ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ರಾಜ್ಯದಲ್ಲಿ ನೆರೆ, ಬರದ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರ್ಕಾರ ತನ್ನ ಸೀಮಿತ ಆರ್ಥಿಕ ಸಂಪನ್ಮೂಲದೊಳಗೆ ಮಾಸಾಶನ ಪರಿಷ್ಕರಣೆ ಮಾಡಿದೆ. ಮುಂದೆ ಆರ್ಥಿಕ ಪರಿಸ್ಥಿತಿ ಉತ್ತಮವಾದಾಗ ಇನ್ನೊಮ್ಮೆ ಪರಿಷ್ಕರಣೆ ಮಾಡಬೇಕು’ ಎಂದು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಗೌಡ ಹೇಳಿದರು.

ವಯೋಮಿತಿ ಇಳಿಕೆಗೆ ಆಗ್ರಹ
‘ಕಲಾವಿದರ ಬದುಕು ಇತರರಿಗಿಂತ ಸಾಕಷ್ಟು ಭಿನ್ನ. ಅವರಿಗೆ ಆದಾಯದ ಮೂಲಗಳೂ ಕಡಿಮೆ. ಹೀಗಾಗಿ ಅವರಿಗೆ ಇರುವ ಮಾಸಾಶನದ ವಯೋಮಿತಿಯನ್ನು 60ರಿಂದ 55ಕ್ಕೆ ಇಳಿಸಬೇಕು’ ಎನ್ನುವುದು ಸಂಘಟನೆಗಳು ಹಾಗೂ ಕಲಾವಿದರ ಆಗ್ರಹವಾಗಿದೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.