ಕರ್ತಾರಪುರ ಕಾರಿಡಾರ್‌ಗೆ ಅಸ್ತು

0
261

ಭಾರತ–ಪಾಕಿಸ್ತಾನದ ಗಡಿ ಬಳಿ ಪಾಕ್‌ ನೆಲದಲ್ಲಿರುವ ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಕಾರಿಡಾರ್ ನಿರ್ಮಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಗುರು ನಾನಕ್‌ ಅವರ 550ನೇ ಜನ್ಮ ವರ್ಷಾಚರಣೆ ಆರಂಭ ಸಂದರ್ಭದಲ್ಲೇ ಈ ಘೋಷಣೆ ಹೊರಬಿದ್ದಿದೆ.

ನವದೆಹಲಿ/ಇಸ್ಲಾಮಾಬಾದ್ (ಪಿಟಿಐ): ಭಾರತ–ಪಾಕಿಸ್ತಾನದ ಗಡಿ ಬಳಿ ಪಾಕ್‌ ನೆಲದಲ್ಲಿರುವ ಸಿಖ್ಖರ ಪುಣ್ಯಕ್ಷೇತ್ರ ಕರ್ತಾರಪುರ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಕಾರಿಡಾರ್ ನಿರ್ಮಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಗುರು ನಾನಕ್‌ ಅವರ 550ನೇ ಜನ್ಮ ವರ್ಷಾಚರಣೆ ಆರಂಭ ಸಂದರ್ಭದಲ್ಲೇ ಈ ಘೋಷಣೆ ಹೊರಬಿದ್ದಿದೆ. 

ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ದೇವ್‌ ಅವರು ತಮ್ಮ ಕೊನೆಯ 18 ವರ್ಷಗಳನ್ನು ಕರ್ತಾರಪುರದಲ್ಲೇ ಕಳೆದಿದ್ದರು. ಧರ್ಮ ಸ್ಥಾಪನೆಗಾಗಿ ಅವರು ಸಿಖ್ಖರನ್ನು ಒಗ್ಗೂಡಿಸಿದ್ದೂ ಇದೇ ಸ್ಥಳದಲ್ಲಿ. ಅವರು ತಮ್ಮ ಕೊನೆಯ ಉಸಿರು ಎಳೆದರು ಎನ್ನಲಾದ ಸ್ಥಳದಲ್ಲೇ ಈ ಗುರುದ್ವಾರವನ್ನು ನಿರ್ಮಿಸಲಾಗಿದೆ.

ಭಾರತದ ಪಂಜಾಬ್‌ನ ಗಡಿಯಿಂದ ಮೂರು ಕಿ.ಮೀ.ನಷ್ಟು ದೂರದಲ್ಲಿ ಈ ಗುರುದ್ವಾರವಿದೆ.

‘ಭಕ್ತರ ಓಡಾಟಕ್ಕೆ ಸುಲಭವಾಗಲಿ ಎಂದು ಡೇರಾ ಬಾಬಾ ನಾನಕ್ ಗುರುದ್ವಾರದಿಂದ ಅಂತರರಾಷ್ಟ್ರೀಯ ಗಡಿಯವರೆಗೆ ಅತ್ಯಾಧುನಿಕ ಸೌಕರ್ಯಗಳಿರುವ ಕಾರಿಡಾರ್‌ ಅನ್ನು ನಿರ್ಮಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಗಡಿಯಿಂದ ದರ್ಬಾರ್ ಸಾಹಿಬ್ ಗುರುದ್ವಾರದವರೆಗೆ ಕಾರಿಡಾರ್ ನಿರ್ಮಿಸಿ ಎಂದು ಪಾಕಿಸ್ತಾನವನ್ನು ಕೇಳಿಕೊಳ್ಳುತ್ತೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.

ಭಾರತದ ಈ ಘೋಷಣೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನವೂ ಸಕರಾತ್ಮಕ ಪ್ರತಿಕ್ರಿಯೆ ನೀಡಿದೆ.

ಸಿಖ್ ಸಮುದಾಯದವರನ್ನು ಪಾಕಿಸ್ತಾನಕ್ಕೆ ಸ್ವಾಗತಿಸುತ್ತೇವೆ. ನಮ್ಮ ಗಡಿಯ ಒಳಗೆ ನಾವೂ ಕಾರಿಡಾರ್ ನಿರ್ಮಿಸುತ್ತೇವೆ. ಈ ಹಿಂದೆಯೇ ನಾವು ಇದಕ್ಕೆ ಒಪ್ಪಿಗೆ ನೀಡಿದ್ದೆವು. ದ್ವಿಪಕ್ಷೀಯ ಮಾತುಕತೆಯನ್ನು ಭಾರತ ತಿರಸ್ಕರಿಸಿದ್ದರಿಂದ ಈ ಯೋಜನೆಯೂ ನನೆಗುದಿಗೆ ಬಿತ್ತು. ಕಾರಿಡಾರ್‌ಗೆ ಸಂಬಂಧಿಸಿದಂತೆ ಸರ್ವೆ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಇದೇ ನವೆಂಬರ್ 28ರಂದು ಪ್ರಧಾನಿ ಇಮ್ರಾನ್ ಖಾನ್ ಅವರು ಕಾರಿಡಾರ್‌ನ ಶಿಲಾನ್ಯಾಸ ನೆರವೇರಿಸಲಿದ್ದಾರೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಕುರೇಶಿ ಹೇಳಿದ್ದಾರೆ.

‘ಕರ್ತಾರಪುರ ಗುರುದ್ವಾರದಿಂದ ಅಂತರ ರಾಷ್ಟ್ರೀಯ ಗಡಿಯವರೆಗೆ ಕಾರಿಡಾರ್ ನಿರ್ಮಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಅಲ್ಲಿನ ಸೇನಾ ಮುಖ್ಯಸ್ಥರು ಹೇಳಿದ್ದಾರೆ’ ಎಂದು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದರು.

ಪಾಕ್ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ ಆದ ನಂತರ ಸಿಧು ಈ ಹೇಳಿಕೆ ನೀಡಿದ್ದರು. ಭಾರತವೂ ಕಾರಿಡಾರ್ ನಿರ್ಮಿಸಬೇಕು ಎಂದು ಸಿಖ್ಖರು ಒತ್ತಡ ಹೆಚ್ಚಿಸಿದ್ದರು. 

ಸಿಖ್ಖರ ಭಾವನೆಗಳನ್ನು ಪಾಕಿಸ್ತಾನವು ಗೌರವಿಸಬೇಕು. ಸಿಖ್ಖರು ಕರ್ತಾರಪುರಕ್ಕೆ ವರ್ಷಪೂರ್ತಿ ಭೇಟಿ ನೀಡಲು ಅನುವು ಮಾಡಿಕೊಡಲು ಕಾರಿಡಾರ್‌ ಅನ್ನು ಪಾಕಿಸ್ತಾನವೂ ನಿರ್ಮಿಸಬೇಕು

ರವೀಶ್ ಕುಮಾರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ