ಕರ್ಣಾಟಕ ಬ್ಯಾಂಕ್‌ಗೆ 111.86 ಕೋಟಿ ರೂ. ಲಾಭ

0
240

ಕರ್ಣಾಟಕ ಬ್ಯಾಂಕ್‌ ಸೆ.30ಕ್ಕೆ ಕೊನೆಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ಶೇ.19ರ ವೃದ್ಧಿಯೊಂದಿಗೆ 111 ಕೋಟಿ ರೂ.ಗಳ ನಿವ್ವಳ ಲಾಭ ಘೋಷಿಸಿದೆ.

ಮಂಗಳೂರು : ಕರ್ಣಾಟಕ ಬ್ಯಾಂಕ್‌ ಸೆ.30ಕ್ಕೆ ಕೊನೆಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ಶೇ.19ರ ವೃದ್ಧಿಯೊಂದಿಗೆ 111 ಕೋಟಿ ರೂ.ಗಳ ನಿವ್ವಳ ಲಾಭ ಘೋಷಿಸಿದೆ. 

ಬ್ಯಾಂಕ್‌ ಒಟ್ಟು ವ್ಯವಹಾರದಲ್ಲಿ ವರ್ಷದಿಂದ ವರ್ಷಕ್ಕೆ ಶೇ.16ರ ವೃದ್ಧಿ ದರವನ್ನು ಸಾಧಿಸಿ 1,13,854ಕೋಟಿ ರೂ.ಗಳ ವ್ಯವಹಾರವನ್ನು ದಾಖಲಿಸಿದೆ. ಠೇವಣಿ ಮೊತ್ತ 63,885 ಕೋಟಿ ರೂ.ಗಳನ್ನು ತಲುಪಿದ್ದು ಇದು ಶೇ.13ರ ಬೆಳವಣಿಗೆ ಸಾಧಿಸಿದೆ. ಮುಂಗಡ ಶೇ.22ರ ಬೆಳವಣಿಗೆಯೊಂದಿಗೆ 49,970 ಕೋಟಿ ರೂ.ಗಳಿಗೆ ತಲುಪಿದೆ. 

ವಿತ್ತೀಯ ವರ್ಷದ ಮೊದಲಾರ್ಧದಲ್ಲಿ ನಿವ್ವಳ ಲಾಭ ಶೇ.21ರ ದರದಲ್ಲಿ ವೃದ್ಧಿಗೊಂಡು 275 ಕೋಟಿ ರೂ.ಗಳ ಏರಿಕೆ ಕಂಡಿದೆ. ಕಳೆದ ವರ್ಷದ ಮೊದಲಾರ್ಧದಲ್ಲಿ ನಿವ್ವಳ ಲಾಭ 227 ಕೋಟಿ ರೂ.ಗಳಾಗಿತ್ತು. 

ಬ್ಯಾಂಕಿನ ಸ್ಥೂಲ ಅನುತ್ಪಾದಕ ಸ್ವತ್ತುಗಳು ಸುಧಾರಣೆ ಕಂಡಿದ್ದು ಶೇ.4.66 ರಷ್ಟಿವೆ. ಹಿಂದಿನ ತ್ರೈಮಾಸಿಕದಲ್ಲಿ ಸ್ಥೂಲ ಅನುತ್ಪಾದಕ ಸ್ವತ್ತುಗಳ ಶೇ.4.72ರಷ್ಟಿದ್ದವು. ಬ್ಯಾಂಕು ತನ್ನ ನಿರ್ವಹಣಾ ವೆಚ್ಚಗಳನ್ನು ಕೂಡಾ ಗಮನಾರ್ಹವಾದ ರೀತಿಯಲ್ಲಿ ಕಡಿತಗೊಳಿಸಿ ಹೆಚ್ಚಿನ ನಿಯಂತ್ರಣ ಸಾಧಿಸಿದೆ. ಈ ಹಿಂದಿನ ತ್ರೈಮಾಸಿಕಗಳ ವೆಚ್ಚಗಳನ್ನು ಗಮನಿಸಿದಾಗ ಈ ಅಂಶವು ಎದ್ದು ತೋರುತ್ತದೆ. ಬ್ಯಾಂಕಿನ ಗ್ರಾಹಕರ ಸಂಖ್ಯೆ ಕೂಡ ಇದೀಗ ಒಂದು ಕೋಟಿಯ ಮೈಲಿಗಲ್ಲನ್ನು ದಾಟಿ ಗ್ರಾಹಕರ ಅಚ್ಚುಮೆಚ್ಚಿನ ಬ್ಯಾಂಕ್‌ ಎಂದು ಗುರುತಿಸಲ್ಪಟ್ಟಿದೆ.