ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರದ ನೆರವು :

0
25

ಸಕ್ಕರೆ ಕಾರ್ಖಾನೆಗಳು ನಷ್ಟ ಎದುರಿಸುತ್ತಿರುವುದರಿಂದ ಪ್ರತಿ ಕ್ವಿಂಟಲ್‌ ಕಬ್ಬಿಗೆ ₹ 5.5ರಂತೆ ಕಬ್ಬು ಬೆಳೆಗಾರರಿಗೆ ನೇರವಾಗಿ ಪಾವತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ನವದೆಹಲಿ: ಸಕ್ಕರೆ ಕಾರ್ಖಾನೆಗಳು ನಷ್ಟ ಎದುರಿಸುತ್ತಿರುವುದರಿಂದ  ಪ್ರತಿ ಕ್ವಿಂಟಲ್‌ ಕಬ್ಬಿಗೆ 5.5ರಂತೆ ಕಬ್ಬು ಬೆಳೆಗಾರರಿಗೆ ನೇರವಾಗಿ ಪಾವತಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಂದರ್ಭದಲ್ಲಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ದಾಖಲೆ ಪ್ರಮಾಣದ ಸಕ್ಕರೆ ಉತ್ಪಾದನೆಯಿಂದಾಗಿ ಸಕ್ಕರೆ ಮಾರಾಟದಲ್ಲಿ ಪ್ರತಿ ಕೆಜಿಗೆ 8 ರಿಂದ 9ರಷ್ಟು ನಷ್ಟ ಅನುಭವಿಸುತ್ತಿರುವ ಸಕ್ಕರೆ ಕಾರ್ಖಾನೆಗಳಿಗೆ ಇದರಿಂದ ಪರಿಹಾರ ದೊರೆಯಲಿದೆ. ದೇಶದಾದ್ಯಂತ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಇದುವರೆಗೆ 20 ಸಾವಿರ ಕೋಟಿಗಳಷ್ಟು ಬಾಕಿ ಉಳಿಸಿಕೊಂಡಿವೆ.

ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಯು ಈ ನಿರ್ಧಾರ ಕೈಗೊಂಡಿದೆ. 2017–18ರ ಸಕ್ಕರೆ ಋತುವಿನಲ್ಲಿ ಪ್ರತಿ ಕ್ವಿಂಟಲ್‌ಗೆ 5.50ರಂತೆ ಹಣಕಾಸು ನೆರವು ಒದಗಿಸುವ ಈ ಸಬ್ಸಿಡಿಯಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 1,540 ಕೋಟಿಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ.

‘ಉತ್ಪಾದನೆ ಹೆಚ್ಚಳದಿಂದ ಕಾರ್ಖಾನೆಗಳು ಆರ್ಥಿಕ ನಷ್ಟ ಎದುರಿಸುತ್ತಿವೆ. ಕೇಂದ್ರದ ಈ ನೆರವಿನಿಂದ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಬಾಕಿ ಪಾವತಿಸಲು ಸಾಧ್ಯವಾಗಲಿದೆ. ಈ ನೆರವನ್ನು ಕಾರ್ಖಾನೆಗಳ ಪರವಾಗಿ ರೈತರಿಗೆ ನೇರವಾಗಿ ಪಾವತಿಸಲಾಗುವುದು’ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಈ ಹಣಕಾಸು ನೆರವನ್ನು, ಕಾರ್ಖಾನೆಗಳು ಬೆಳೆಗಾರರಿಗೆ ಪಾವತಿಸಬೇಕಾದ ಬಾಕಿ ಮೊತ್ತದ ಜತೆ ಹೊಂದಾಣಿಕೆ ಮಾಡಲು ನಿರ್ಧರಿಸಲಾಗಿದೆ. ಈ ವರ್ಷದ ಏ‍ಪ್ರಿಲ್‌ 15ರವರೆಗೆ ದಾಖಲೆ ಪ್ರಮಾಣದಲ್ಲಿ ಕಬ್ಬು (2.99 ಕೋಟಿ ಟನ್‌) ಉತ್ಪಾದನೆಯಾಗಿದೆ.

ಸ್ವಾಗತ: ಕೇಂದ್ರದ ಈ ನಿರ್ಧಾರವು ಕಾರ್ಖಾನೆಗಳಿಗೆ ನೆಮ್ಮದಿ ಒದಗಿಸಲಿದೆ. ಇದೊಂದು ಸ್ವಾಗತಾರ್ಹ ನಿರ್ಧಾರವಾಗಿದೆ ಎಂದು ಸಕ್ಕರೆ ಕಾರ್ಖಾನೆಗಳ ಸಂಘವು ‘ಐಎಸ್‌ಎಂಎ’ ಅಭಿಪ್ರಾಯಪಟ್ಟಿದೆ.

‘ಸಕ್ಕರೆ ಉತ್ಪಾದನೆಗೆ ಪ್ರತಿ ಕೆಜಿಗೆ  35ರಂತೆ ವೆಚ್ಚ ಬರುತ್ತಿದೆ. ಆದರೆ, ಸಕ್ಕರೆ ಮಾರಾಟ ದರ ಪ್ರತಿ ಕೆಜಿಗೆ 26ರಂತೆ ಇದೆ’ ಎಂದು ಸಂಘದ ಮಹಾ ನಿರ್ದೇಶಕ ಎ. ವರ್ಮಾ ಹೇಳಿದ್ದಾರೆ.

20 ಸಾವಿರ ಕೋಟಿ: ರೈತರಿಗೆ ಪಾವತಿಸಬೇಕಾದ ಬಾಕಿ ಮೊತ್ತ

2.99 ಕೋಟಿ ಟನ್‌ ಕಬ್ಬು ಉತ್ಪಾದನೆ

1,540 ಕೋಟಿ: ಕೇಂದ್ರದ ಬೊಕ್ಕಸಕ್ಕೆ ಹೆಚ್ಚುವರಿ ಸಬ್ಸಿಡಿ ಹೊರೆ