ಕಪ್ಪುಪಟ್ಟಿಗೆ ಲಾಡೆನ್‌ ಪುತ್ರ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿ ತೀರ್ಮಾನ

0
588

ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಮುಖಂಡ ಒಸಾಮ ಬಿನ್‌ ಲಾಡೆನ್‌ ಪುತ್ರ ಹಮ್ಝಾ ಬಿನ್‌ ಲಾಡೆನ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿ ಕಪ್ಪು ಪಟ್ಟಿಗೆ ಸೇರಿಸಿದೆ.

ವಿಶ್ವಸಂಸ್ಥೆ (ಪಿಟಿಐ): ಭಯೋತ್ಪಾದಕ ಸಂಘಟನೆ ಅಲ್‌ಖೈದಾ ಮುಖಂಡ ಒಸಾಮ ಬಿನ್‌ ಲಾಡೆನ್‌ ಪುತ್ರ ಹಮ್ಝಾ ಬಿನ್‌ ಲಾಡೆನ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿ ಕಪ್ಪು ಪಟ್ಟಿಗೆ ಸೇರಿಸಿದೆ.

29 ವರ್ಷದ ಹಮ್ಝಾ, ಅಲ್‌ಖೈದಾ ಸಂಘಟನೆಯ ಸದ್ಯದ ಮುಖ್ಯಸ್ಥ ಐಮನ್‌ ಅಲ್‌ ಝವಾಹಿರಿ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆ ಹೆಚ್ಚಿದೆ. ಹಮ್ಝಾಗೆ ಪ್ರವಾಸ ಕೈಗೊಳ್ಳಲು ನಿರ್ಬಂಧಿಸಲಾಗಿದೆ.

ಜತೆಗೆ ಈತನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ನಿರ್ಬಂಧಿಸಲಾಗಿದೆ.

ಹಮ್ಝಾಗೆ ಸೇರಿದ ಆಸ್ತಿಗಳನ್ನು ಆಯಾ ರಾಷ್ಟ್ರಗಳು ಮುಟ್ಟುಗೋಲು ಹಾಕಿಕೊಳ್ಳಬೇಕು. ಆತನಿಗೆ ಯಾವುದೇ ಧನ ಸಹಾಯ ಮಾಡುವಂತಿಲ್ಲ. ಯಾವುದೇ ದೇಶಕ್ಕೂ ಹೋಗುವಂತಿಲ್ಲ ಎಂದು ಹೇಳಲಾಗಿದೆ.

ಹಮ್ಝಾ ಕುರಿತು ಮಾಹಿತಿ ನೀಡುವವರಿಗೆ 7 ಕೋಟಿ (10 ಲಕ್ಷ ಡಾಲರ್‌) ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದ ಬೆನ್ನಲ್ಲೇ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿ, ಈತನನ್ನು ಕಪ್ಪು ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ.

‘ಹಮ್ಝಾ ಅಲ್‌ಖೈದಾ ಸಂಘಟನೆಯ ಅಧಿಕೃತ ಸದಸ್ಯ ಎಂದು ಅಲ್‌ ಝವಾಹಿರಿ ಈಗಾಗಲೇ ಘೋಷಿಸಿದ್ದಾರೆ. ಅಲ್ಲದೇ, ಭಯೋತ್ಪಾದಕ ದಾಳಿ ನಡೆಸುವಂತೆ ಅಲ್‌ಖೈದಾ ಉಗ್ರರಿಗೆ ಹಮ್ಝಾ ಕರೆ ನೀಡಿದ್ದಾರೆ’ ಎಂದು ಭದ್ರತಾ ಮಂಡಳಿಯ ಪ್ರಕಟಣೆ ತಿಳಿಸಿದೆ.

ಹಮ್ಝಾ ಪೌರತ್ವ ಹಿಂಪಡೆದ ಸೌದಿ ಅರೇಬಿಯಾ

ದುಬೈ (ಎಪಿ): ಉಗ್ರರ ಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಒಸಾಮ ಬಿನ್‌ ಲಾಡೆನ್‌ ಪುತ್ರ ಹಮ್ಝಾ ಬಿನ್‌ ಲಾಡೆನ್‌ನ ಪೌರತ್ವವನ್ನು ಹಿಂತೆಗೆದುಕೊಂಡಿರುವ ಬಗ್ಗೆ ಸೌದಿ ಅರೇಬಿಯಾ ಮಾರ್ಚ್ 1 ರ  ಶುಕ್ರವಾರ ಘೋಷಿಸಿದೆ.

ಪೌರತ್ವ ಹಿಂತೆಗೆದುಕೊಳ್ಳುವ ಆದೇಶಕ್ಕೆ ಕಳೆದ ನವೆಂಬರ್‌ನಲ್ಲಿ ಸಹಿ ಹಾಕಲಾಗಿತ್ತು. ಆದರೆ, ಈಗ ಏಕಾಏಕಿ ಘೋಷಿಸಿರುವ ಬಗ್ಗೆ ಹೆಚ್ಚಿನ ವಿವರಣೆ ಬಹಿರಂಗವಾಗಿಲ್ಲ.

ಹಮ್ಝಾ ಪೌರತ್ವವನ್ನು 2018 ರ ನವೆಂಬರ್‌ನಲ್ಲಿ ಹಿಂತೆಗೆದುಕೊಳ್ಳಲಾಗಿದೆ ಎಂದು ಆಂತರಿಕ ಸಚಿವಾಲಯ ಹೊರಡಿಸಿದ ಅಧಿಸೂಚನೆಯನ್ನು ರಾಷ್ಟ್ರದ ಗೆಜೆಟ್‌ನಲ್ಲಿ ಶುಕ್ರವಾರ ಪ್ರಕಟಿಸಲಾಗಿದೆ.