ಕನ್ನಡ ಕಲಿಕೆ ಕಡ್ಡಾಯ

0
33

ರಾಜ್ಯದ ಎಲ್ಲಾ ಮಾಧ್ಯಮದ ಶಾಲೆಗಳಲ್ಲೂ ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. 2015ರಲ್ಲಿ ಜಾರಿಗೊಳಿಸಿರುವ ಕನ್ನಡ ಭಾಷಾ ಕಲಿಕೆ ಕಾಯ್ದೆ– 2015ಕ್ಕೆ ನಿಯಮಗಳನ್ನು ರೂಪಿಸಲಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ (2017–18) ಒಂದನೇ ತರಗತಿಗೆ ಕನ್ನಡ ಕಡ್ಡಾಯವಾಗಲಿದೆ. 2026– 27ರ ವೇಳೆಗೆ ಹತ್ತನೇ ತರಗತಿವರೆಗೂ ಸರ್ಕಾರದ ಆದೇಶ ಅನ್ವಯವಾಗಲಿದೆ.

ಇದುವರೆಗೆ ಬರೀ ಬಾಯಿ ಮಾತಿನಲ್ಲಿ ‘ಕನ್ನಡ ಕಲಿಕೆ ಕಡ್ಡಾಯ’ ಎಂದು ಹೇಳುತ್ತಿದ್ದ ಸರ್ಕಾರ ಈಗ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದಾಗಿ ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ರಾಜ್ಯದ ಪಠ್ಯಕ್ರಮ ಬೋಧಿಸುವ ಆಂಗ್ಲ ಮಾಧ್ಯಮ ಶಾಲೆಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕಿದೆ.

2015ರಲ್ಲಿ ಜಾರಿಗೊಳಿಸಿರುವ ಕನ್ನಡ ಭಾಷಾ ಕಲಿಕೆ ಕಾಯ್ದೆ– 2015ಕ್ಕೆ ನಿಯಮಗಳನ್ನು ರೂಪಿಸಲಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ (2017–18) ಒಂದನೇ ತರಗತಿಗೆ ಕನ್ನಡ ಕಡ್ಡಾಯವಾಗಲಿದೆ. 2026– 27ರ ವೇಳೆಗೆ ಹತ್ತನೇ ತರಗತಿವರೆಗೂ ಸರ್ಕಾರದ ಆದೇಶ ಅನ್ವಯವಾಗಲಿದೆ.

ಹೊರ ರಾಜ್ಯಗಳಿಂದ ವಲಸೆ ಬಂದು 2ರಿಂದ 8ನೇ ತರಗತಿವರೆಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಮೊದಲ ವರ್ಷ ಒಂದನೇ ತರಗತಿಗೆ ನಿಗದಿ‍ಪಡಿಸಿದ ಕನ್ನಡ ಭಾಷಾ ಪಠ್ಯ ಬೋಧಿಸಬೇಕು. ಎರಡು ಮತ್ತು ಆನಂತರದ ವರ್ಷಗಳಲ್ಲಿ ಎರಡನೇ ತರಗತಿ ಮತ್ತು ಅನುಕ್ರಮವಾಗಿ ಮೇಲಿನ ತರಗತಿಗಳ ಪಠ್ಯಗಳನ್ನು ಕಲಿಸಬೇಕು. ಒಂಬತ್ತು ಅಥವಾ 10ನೇ ತರಗತಿ ಸೇರುವ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ನಿಗದಿಪಡಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಸೂಚಿಸಲಾಗಿದೆ.

ಎಲ್ಲಾ ಶಾಲೆಗಳಲ್ಲೂ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಹಾಗೂ ಇದನ್ನು ಅನುಷ್ಠಾನ ಮಾಡದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಿಗಳನ್ನು ನೇಮಿಸಲಾಗಿದೆ.

ಸಕ್ಷಮ ಪ್ರಾಧಿಕಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಸುತ್ತೋಲೆ ಹಾಗೂ ಮಾರ್ಗಸೂಚಿಗಳನ್ನು ತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಕಳುಹಿಸಿ, ಕನ್ನಡ ಭಾಷಾ ಕಲಿಕೆ ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆ ಆದೇಶದ ಜಾರಿ ಸಂಬಂಧ ಶಾಲಾವಾರು ಪ್ರತ್ಯೇಕ ವರದಿಗಳನ್ನು ಸಿದ್ಧಪಡಿಸಬೇಕು. ಈ ವರದಿಗಳನ್ನು ಪ್ರತ್ಯೇಕವಾಗಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಿಗಳಿಗೆ ಉಪ ನಿರ್ದೇಶಕರ ಮುಖಾಂತರ ಸಲ್ಲಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಜಾರಿಗೊಳಿಸದ ಶಾಲೆಗಳ ವಿರುದ್ಧ ಬರುವ ದೂರುಗಳನ್ನು ಸಕ್ಷಮ ಪ್ರಾಧಿಕಾರಿಯು ವಿಚಾರಣೆ ನಡೆಸಲಿದ್ದಾರೆ. ಈ ಅಧಿಕಾರಿ ನಿರ್ದಿಷ್ಟ ಶಾಲೆಗೆ ಭೇಟಿ ಕೊಟ್ಟು ದಾಖಲೆಗಳನ್ನು ಪರಿಶೀಲಿಸಿ, ನೋಟಿಸ್‌ ಕೊಟ್ಟು ಕ್ರಮ ಜರುಗಿಸುವ ಅಧಿಕಾರ ಹೊಂದಿರುತ್ತಾರೆ.

ಕನ್ನಡ ಭಾಷೆ ಬೋಧಿಸದ ಶಾಲೆಗಳಿಗೆ ನೋಟಿಸ್‌ ನೀಡಿದ 30 ದಿನಗಳೊಳಗೆ ಈ ಅಧಿಕಾರಿ ವಿಚಾರಣೆ ನಡೆಸಬೇಕು. ಕನ್ನಡ ಭಾಷಾ ಕಲಿಕೆ ಅಧಿನಿಯಮ– 2015 ಉಲ್ಲಂಘಿಸಿದ ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳುವ ಅಧಿಕಾರವನ್ನೂ ಅವರಿಗೆ ಕೊಡಲಾಗಿದೆ.

ಪಠ್ಯಪುಸ್ತಕ ಸಂಘದಿಂದ ಖರೀದಿ
ಯಾವ ತರಗತಿಗೆ ಯಾವ ಯಾವ ಪಠ್ಯಗಳನ್ನು ಬೋಧಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ  ಶಿಕ್ಷಣ ಇಲಾಖೆ ನಿಗದಿಪಡಿಸಿದ್ದು, ಈ ಪಠ್ಯ ಪುಸ್ತಕಗಳನ್ನು ಪಠ್ಯ ಪುಸ್ತಕ ಸಂಘದಿಂದ ಖರೀದಿಸುವಂತೆ ಆದೇಶಿಸಲಾಗಿದೆ.

ಸಕ್ಷಮ ಪ್ರಾಧಿಕಾರಿ ಕಾಲಕಾಲಕ್ಕೆ ಕನ್ನಡ ಪಠ್ಯಪುಸ್ತಕಗಳ ಲಭ್ಯತೆ ಕುರಿತು ಖಾತ್ರಿಪಡಿಸಿಕೊಳ್ಳಬೇಕೆಂದೂ ಸೂಚಿಸಲಾಗಿದೆ.

ಆದೇಶ ಪಾಲಿಸದ ಶಾಲೆಗಳಿಗೆ ದಂಡ: ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಸದ ಶಾಲೆಗಳಿಗೆ ಕರ್ನಾಟಕ ಶಿಕ್ಷಣ ಅಧಿನಿಯಮ 1983ರ 128ನೇ ಪ್ರಕರಣದಲ್ಲಿ ತಿಳಿಸಿದಂತೆ ದಂಡ ಹಾಕಲಾಗುತ್ತದೆ.

ಪ್ರಾದೇಶಿಕ ಭಾಷೆ ಕಡ್ಡಾಯ
ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ, ಹಿಂದಿ ಭಾಷೆಯ ರಾಜ್ಯಗಳ ವಿದ್ಯಾರ್ಥಿಗಳು ಹಿಂದಿ ಮತ್ತು ಇಂಗ್ಲಿಷ್‌ ಜತೆಗೆ ಭಾರತದ ಮತ್ತೊಂದು ಭಾಷೆ ಕಲಿಯಬೇಕು. ಹಿಂದಿಯೇತರ ರಾಜ್ಯಗಳ ವಿದ್ಯಾರ್ಥಿಗಳು ಹಿಂದಿ, ಇಂಗ್ಲಿಷ್‌ ಜತೆಗೆ ಆಯಾ ರಾಜ್ಯ ಭಾಷೆಯನ್ನು ಕಲಿಯಬೇಕು ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಕಳೆದ ವಾರ ಸೂಚನೆ ನೀಡಿತ್ತು.