ಕನ್ನಡದ ಹಿರಿಯ ರಂಗಕರ್ಮಿ, ಸಾಹಿತಿ “ಡಿ ಕೆ ಚೌಟ” ಇನ್ನಿಲ್ಲ

0
15

ಉದ್ಯಮಿ, ಕನ್ನಡದ ಹಿರಿಯ ರಂಗಕರ್ಮಿ, ಬರಹಗಾರ ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ. ಚೌಟ ಅವರು ಇಂದು(ಜೂನ್ 19) ಮಧ್ಯಾಹ್ನ ವಿಧಿವಶರಾಗಿದ್ದಾರೆ.

ಬೆಂಗಳೂರು: ಉದ್ಯಮಿ, ಕನ್ನಡದ ಹಿರಿಯ ರಂಗಕರ್ಮಿ, ಬರಹಗಾರ ರಂಗ ನಿರಂತರ ಕಾರ್ಯಾಧ್ಯಕ್ಷರಾಗಿದ್ದ ಡಿ.ಕೆ. ಚೌಟ ಅವರು ಇಂದು(ಜೂನ್ 19) ಮಧ್ಯಾಹ್ನ ವಿಧಿವಶರಾಗಿದ್ದಾರೆ.

ಡಿ.ಕೆ. ಚೌಟ ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿ.ಕೆ. ಚೌಟ ಅವರು ಕೊನೆಯುಸಿರೆಳೆದಿದ್ದಾರೆ.

ಆನಂದ ಕೃಷ್ಣ ಎಂಬ ಕಾವ್ಯನಾಮದಲ್ಲಿ ಕೃತಿಗಳನ್ನು ರಚಿಸಿದ್ದ ಡಿ.ಕೆ. ಚೌಟ ತುಳು ಸಾಹಿತ್ಯ ಆಕಾಡೆಮಿಯಿಂದ ಪ್ರಶಸ್ತಿಯನ್ನೂ ಪಡೆದಿದ್ದರು. ಚಿತ್ರಕಲಾ ಪರಿಷತ್‌ ಅಧ್ಯಕ್ಷರಾಗಿಯೂ ಡಿ.ಕೆ. ಚೌಟ ಕಾರ್ಯ ನಿರ್ವಹಿಸಿದ್ದರು.

ದರ್ಬೆ ಕೃಷ್ಣಾನಂದ ಚೌಟ ಡಿ.ಕೆ.ಚೌಟ ಎಂದೇ ಪ್ರಸಿದ್ಧಿಯಾಗಿದ್ದರು. ಜೂ.1, 1938ರಲ್ಲಿ ಮಂಜೇಶ್ವರ ಸಮೀಪದ ಮೀಯಪ್ಪದಾವಿನ ತುಳು ಮಾತನಾಡುತ್ತಿದ್ದ ಕೇರಳದ ಬಂಟ ಮನೆತನದಲ್ಲಿ ಜನಿಸಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಸಂದೀಪ್‌ ಚೌಟ ಸಂಗೀತಗಾರರಾಗಿದ್ದರೆ, ಪ್ರಜ್ಞಾ ಚೌಟ ಜನಾಂಗಶಾಸ್ತ್ರಜ್ಞೆಯಾಗಿದ್ದಾರೆ.

ಡಿ.ಕೆ. ಚೌಟ ಅವರ ನಿಧನಕ್ಕೆ ಸಚಿವ ಕೃಷ್ಣ ಬೈರೇಗೌಡ ಸಂತಾಪ ಸೂಚಿಸಿದ್ದು, ಡಿ.ಕೆ. ಚೌಟ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಹೆಸರು. ಅವರು ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ, ರಂಗ ನಿರಂತರದ ಪೋಷಕರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮೂಲಕ ಆ ಸಂಸ್ಥೆಗಳ ಬೆಳವಣಿಗೆಗೆ ಕಾರಣರಾದರು. ಚಿತ್ರಕಲಾ ಪರಿಷತ್ತಿನ ಬೆಳವಣಿಗೆಯಲ್ಲಿ ಡಿ.ಕೆ. ಚೌಟ ಅವರ ಪಾತ್ರ ಬಹಳ ದೊಡ್ಡದು. ಚಿತ್ರಸಂತೆ ಮೂಲಕ ಅವರು ರಾಷ್ಟ್ರಮಟ್ಟದಲ್ಲಿ ಚಿತ್ರಕಲಾ ಪರಿಷತ್ತು ಖ್ಯಾತಿ ಪಡೆಯಲು ಕಾರಣರಾದರು ಎಂದು ತಿಳಿಸಿದ್ದಾರೆ.

ದೊಡ್ಡ ಮಟ್ಟದಲ್ಲಿ ಕಲಾವಿದರಿಗೆ ನೆರವು ನೀಡುತ್ತಿದ್ದ ಡಿ.ಕೆ. ಚೌಟ ಸ್ವತಃ ಬರಹಗಾರರಾಗಿ ಅನೇಕ ಉತ್ತಮ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟಿದ್ದಾರೆ. ತುಳು ಸಾಹಿತ್ಯಕ್ಕೆ ಅವರ ಕೊಡುಗೆ ದೊಡ್ಡದು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಸನ್ಮಾನಗಳಿಗೆ ಅವರು ಭಾಜನರಾಗಿದ್ದರು. ಅವರ ನಿಧನದಿಂದ ಕನ್ನಡ ಸಾಂಸ್ಕೃತಿಕ ಲೋಕ ದೊಡ್ಡ ನಷ್ಟ ಅನುಭವಿಸಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.