ಕಂಚ್ಯಾಣಿಯಜ್ಜನ ಕಿರೀಟಕ್ಕೆ 2018 ರ ಬಾಲ ಸಾಹಿತ್ಯ ಪುರಸ್ಕಾರ

0
70

ಮಕ್ಕಳ ಸಾಹಿತ್ಯದ ತವರೂರು ಎಂದೇ ಮನೆ ಮಾತಾದ ವಿಜಯಪುರ ಜಿಲ್ಲೆಯ ಮುಕುಟಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಸೇರ್ಪಡೆಯಾಗಿದೆ. ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ 2018ನೇ ಸಾಲಿನ ‘ಬಾಲ ಸಾಹಿತ್ಯ ಪುರಸ್ಕಾರ’ ಘೋಷಿಸಿದೆ.

ವಿಜಯಪುರ: ಮಕ್ಕಳ ಸಾಹಿತ್ಯದ ತವರೂರು ಎಂದೇ ಮನೆ ಮಾತಾದ ವಿಜಯಪುರ ಜಿಲ್ಲೆಯ ಮುಕುಟಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಸೇರ್ಪಡೆಯಾಗಿದೆ. ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ 2018ನೇ ಸಾಲಿನ ‘ಬಾಲ ಸಾಹಿತ್ಯ ಪುರಸ್ಕಾರ’ ಘೋಷಿಸಿದೆ.

ಐದು ದಶಕಗಳಿಗೂ ಹೆಚ್ಚು ಕಾಲದಿಂದ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ನಡೆಸುತ್ತಿರುವ ವಿಜಯಪುರದ ಹೆಮ್ಮೆಯ ಪುತ್ರ, ಕಂಚ್ಯಾಣಿ ಅಜ್ಜ ಎಂದೇ ಹೆಸರಾದ ‘ಶರಣಪ್ಪ ಕಂಚ್ಯಾಣಿ’ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿರುವುದಕ್ಕೆ ಮಕ್ಕಳ ಸಾಹಿತ್ಯ ವಲಯ ಸಂಭ್ರಮಿಸಿದೆ.

ಅಕಾಡೆಮಿ ಕಂಚ್ಯಾಣಿಯಜ್ಜನಿಗೆ ಪ್ರಶಸ್ತಿ ಘೋಷಿಸಿದ ಬೆನ್ನಿಗೆ ರಾಜ್ಯದ ವಿವಿಧೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಪ್ರಶಸ್ತಿ ಲಭಿಸಿದ್ದಕ್ಕೆ ಶರಣಪ್ಪ ಕಂಚ್ಯಾಣಿ ಸಹ ‘ಪ್ರಜಾವಾಣಿ’ ಜತೆ ತಮ್ಮ ಸಂತಸ ಹಂಚಿಕೊಂಡರು.

‘ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಎಂದೂ ನಿರೀಕ್ಷಿಸಿರಲಿಲ್ಲ. ಇದು ಅನಿರೀಕ್ಷಿತ. ತುಂಬಾ ಖುಷಿಯಾಗಿದೆ. ನನಗೆ ಪ್ರಶಸ್ತಿ ಲಭಿಸಿತು ಎಂಬುವ ಸಂತೋಷಕ್ಕಿಂತ ಮಕ್ಕಳ ಸಾಹಿತ್ಯದ ತವರೂರಿಗೆ ಈ ಪುರಸ್ಕಾರ ದೊರೆತಿದೆ ಎಂಬುದು ನನ್ನ ಸಂತಸವನ್ನು ಇಮ್ಮಡಿಗೊಳಿಸಿದೆ’ ಎಂದು ಪ್ರತಿಕ್ರಿಯಿಸಿದರು.

ಕಂಚ್ಯಾಣಿಯಜ್ಜನ ಕುರಿತಂತೆ…

ಮುದ್ದೇಬಿಹಾಳ ತಾಲ್ಲೂಕಿನ ಸರೂರ ಹುಟ್ಟೂರು. ತಂದೆ ಶಿವಸಂಗಪ್ಪ ಕಂಚ್ಯಾಣಿ. ತಾಯಿ ರುದ್ರಮ್ಮ. 1930ರ ಜನವರಿ 3ರಂದು ಜನನ. ಪತ್ನಿ ಬಸವಂತೆಮ್ಮ ಶರಣಪ್ಪ ಕಂಚ್ಯಾಣಿ. ಐವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು, 27 ಮೊಮ್ಮಕ್ಕಳು, 33 ಮರಿಮಕ್ಕಳ ತುಂಬು ಸಂಸಾರ.

ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರು. ಮಕ್ಕಳು ಪದವಿ ಪಡೆದ ನಂತರ ದೂರ ಶಿಕ್ಷಣ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮಕ್ಕಳ ಕವನ, ಕಥೆ ಪುಸ್ತಕ ಪ್ರಕಟಗೊಂಡ ಬಳಿಕ ಶರಣಪ್ಪ ಅವರ ಪುಸ್ತಕಗಳು ಪ್ರಕಟವಾದವು.

ಪ್ರೊ.ರೋಹಡೆಕರ್ ಶ್ಯಾಮರಾಯರು ಹಾಗೂ ಹೆಣ್ಣು ಮಕ್ಕಳ ಜೋಗುಳ, ಲಾವಣಿ, ಆಟದ ಹಾಡುಗಳಿಂದ ಮಕ್ಕಳ ಸಾಹಿತ್ಯಕ್ಕೆ ಪ್ರೇರೇಪಣೆ. ಸಹೋದ್ಯೋಗಿ ಶಿ.ಶು.ಸಂಗಮೇಶ ಪ್ರಭಾವ, ಸಹಪಾಠಿ ಶಂ.ಗು.ಬಿರಾದಾರ ಒಡನಾಟದಿಂದ ಮಕ್ಕಳ ಸಾಹಿತ್ಯದಲ್ಲೇ ಕೃಷಿ ಮಾಡಿದರು.

ಮಕ್ಕಳ ಪ್ರಪಂಚಕ್ಕೆ ಬದುಕನ್ನು ಮುಡಿಪಾಗಿಟ್ಟು. 88ರ ಹರೆಯದಲ್ಲೂ ಬತ್ತದ ಉತ್ಸಾಹದಲ್ಲಿ ಮಕ್ಕಳ ಸಾಹಿತ್ಯ ರಚಿಸುತ್ತಿದ್ದಾರೆ. 

ಅಂಗನವಾಡಿ, ಶಿಶುವಿಹಾರ, ಬಾಲವಾಡಿಗಳಲ್ಲಿ ಮಕ್ಕಳಿಗಾಗಿ ಬೇಕಾದ ಸಾಹಿತ್ಯದ ಕೊರತೆಯಿದೆ ಎಂಬ ಚಡಪಡಿಕೆ ಕಂಚ್ಯಾಣಿಯಜ್ಜನದಾಗಿದೆ. ಇದೂವರೆಗೂ ಕಂಚ್ಯಾಣಿ ಶರಣಪ್ಪ ಕಾವ್ಯನಾಮಾಂಕಿತದಲ್ಲಿ 22 ಸಾಹಿತ್ಯ ಕೃತಿ ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಸೇರಿದಂತೆ 26 ವಿವಿಧ ಪ್ರಶಸ್ತಿ, ಪುರಸ್ಕಾರ ಇವರಿಗೆ ಸಂದಿವೆ.

‌ಮಕ್ಕಳ ಸಾಹಿತ್ಯ ಪರಿಪೂರ್ಣ. ಎಲ್ಲ ಸಾಹಿತ್ಯದ ಭದ್ರ ಬುನಾದಿ. ಈ ಸಾಹಿತ್ಯದಿಂದಲೇ ಉಳಿದ ಸಾಹಿತ್ಯ ಅಭಿವೃದ್ಧಿಯಾಗಿದೆ ಎಂದರೇ ತಪ್ಪಾಗಲಾರದು
– ಶರಣಪ್ಪ ಕಂಚ್ಯಾಣಿ, ಮಕ್ಕಳ ಸಾಹಿತಿ