ಕಂಚು ಗೆದ್ದ ಐಸ್ ಸ್ಕೇಟಿಂಗ್ ಆಟಗಾರ್ತಿ”ನಿತ್ಯಾ ರಮೇಶ್‌” ಕುರಿತ ಫೇಸ್‌ಬುಕ್ ಪೋಸ್ಟ್ ವೈರಲ್

0
16

ಬೆಲಾರಸ್‌ನಲ್ಲಿ ನಡೆದ ಯೂರೋಪಿಯನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಆಟಗಾರ್ತಿ ನಿತ್ಯಾ ರಮೇಶ್‌ರನ್ನು ಏರ್‌ಪೋರ್ಟ್‌ನಲ್ಲಿ ಸ್ವಾಗತಿಸುವವರೇ ಇರಲಿಲ್ಲ ಎಂಬ ಸಂಗತಿ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.

ಹೊಸದಿಲ್ಲಿ: ಬೆಲಾರಸ್‌ನಲ್ಲಿ ನಡೆದ ಯೂರೋಪಿಯನ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಆಟಗಾರ್ತಿ ನಿತ್ಯಾ ರಮೇಶ್‌ರನ್ನು ಏರ್‌ಪೋರ್ಟ್‌ನಲ್ಲಿ ಸ್ವಾಗತಿಸುವವರೇ ಇರಲಿಲ್ಲ ಎಂಬ ಸಂಗತಿ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. 

ಭಾರತವನ್ನು ಪ್ರತಿನಿಧಿಸಿರುವ ನಿತ್ಯಾ ರಮೇಶ್ ಐಸ್ ಸ್ಕೇಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಕಂಚಿನ ಪದಕ ಗೆದ್ದು ಸ್ವದೇಶಕ್ಕೆ ಮರಳಿದಾಗ ಅವರನ್ನು ಸ್ವಾಗತಿಸಲು, ವರದಿ ಮಾಡಲು ಏರ್‌ಪೋರ್ಟ್‌ನಲ್ಲಿ ಯಾರೂ ಇರಲಿಲ್ಲ ಎಂಬ ಸಂಗತಿಯನ್ನು ವಂದನಾ ಬಂಗೇರಾ ಎಂಬುವವರು ಹಂಚಿಕೊಂಡಿದ್ದಾರೆ. 

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ವಂದನಾ ಬಂಗೇರಾ ಈ ರೀತಿ ಬರೆದುಕೊಂಡಿದ್ದಾರೆ. “ಇಂದು ಬೆಳಗ್ಗೆ ನಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಭಾರತದ ತ್ರಿವರ್ಣ ಧ್ವಜವುಳ್ಳ ಟ್ರ್ಯಾಕ್ ಸೂಟ್ ತೊಟ್ಟಿದ್ದ ಯುವತಿಯನ್ನು ನೋಡಿದೆ. ಅವರನ್ನು ಮಾತನಾಡಬೇಕು ಎಂದುಕೊಂಡೆ. ವಿಮಾನ ಇಳಿದ ಬಳಿಕ ಅವರ ಬಳಿ ಹೋಗಿ ಭಾರತದ ಪರವಾಗಿ ನೀವು ಯಾವ ಕ್ರೀಡೆ ಪ್ರತಿನಿಧಿಸಿದಿರಿ ಎಂದು ಕೇಳಿದೆ. 

ಯೂರೋಪಿಯನ್ ಓಪನ್ ಚಾಲೆಂಜಿಶಿಪ್‌ನ ಐಸ್ ಸ್ಕೇಟಿಂಗ್ ಕ್ರೀಡೆಯಲ್ಲಿ ಕಂಚಿನ ಪದಕ ಗೆದ್ದು ಬೆಲಾರಸ್‌ನಿಂದ ಹಿಂತಿರುಗುತ್ತಿರುವುದಾಗಿ ತಿಳಿಸಿದರು. ಆದರೆ ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಆಕೆಯ ಡ್ರೈವರ್ ಬಿಟ್ಟರೆ ಬೇರಾರು ಇರಲಿಲ್ಲ. ನಮ್ಮ ದೇಶಕ್ಕೆ ಕೀರ್ತಿ ತಂದ ಕ್ರೀಡಾಪಡುವಿನ ದುಃಸ್ಥಿತಿ ನೋಡಿ ತುಂಬಾ ಬೇಜಾರಾಯಿತು. 

ಇದೇ ಸಂದರ್ಭದಲ್ಲಿ ಭಾರತದಲ್ಲಿ ಅಷ್ಟಾಗಿ ಜನಪ್ರಿಯವಲ್ಲ ಕ್ರೀಡೆಯನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದು ಬಂದದ್ದು ಹೆಮ್ಮೆ ಅನ್ನಿಸಿತು. ಆಕೆಯ ಹೆಸರು ನಿತ್ಯಾ ರಮೇಶ್. ನಿಮಗೆ ಒಳ್ಳೆಯದಾಗಲಿ. ಇನ್ನಷ್ಟು ಪದಕಗಳನ್ನು ಗೆದ್ದು ಬನ್ನಿ. ನಮ್ಮ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿ ಎಂದು ಬರೆದುಕೊಂಡಿದ್ದಾರೆ. 

ಫೇಸ್‌ಬುಕ್‌ನ ಈ ಪೋಸ್ಟ್‌ ವೈರಲ್ ಆಗಿದ್ದು ಸಾಕಷ್ಟು ಕಾಮೆಂಟ್‌ಗಳು ಹರಿದುಬಂದಿವೆ. ಸುಮಾರು 18 ಸಾವಿರ ಷೇರ್ ಆಗಿದ್ದು, 7,900 ಕಾಮೆಂಟ್‌ಗಳು ಹರಿದುಬಂದಿವೆ. ಬಹುತೇಕ ಮಂದಿ ಕಾಮೆಂಟ್‌ನಲ್ಲಿ ನಿತ್ಯಾ ರಮೇಶ್ ಅವರನ್ನು ಅಭಿನಂದಿಸಿದ್ದಾರೆ. 

ಭಾರತದಲ್ಲಿ ಕ್ರಿಕೆಟ್ ಬಿಟ್ಟರೆ ಫುಟ್‌ಬಾಲ್, ಬ್ಯಾಡ್ಮಿಂಟನ್ ಮತ್ತು ಟೆನ್ನಿಸ್ ಕ್ರೀಡೆಗಳಿಗೆ ಸಿಗುತ್ತಿರುವ ಪ್ರೋತ್ಸಾಹ ಉಳಿದ ಕ್ರೀಡೆಗಳಿಗೆ ಸಿಗುತ್ತಿಲ್ಲ ಎಂಬುದಕ್ಕೆ ನಿದರ್ಶನ ಇದು. ನಿತ್ಯಾ ರಮೇಶ್ ಅವರಂತಹ ಪ್ರತಿಭಾನ್ವಿತ ಕ್ರೀಡಾಪಡುಗಳು ಎಲೆಮರೆ ಕಾಯಿಗಳಂತೆ ಉಳಿಯುತ್ತಿರುವುದು ಖೇದಕರ ಸಂಗತಿ.