ಒಸಾಮಾ ಬಿನ್‌ ಲಾಡೆನ್‌ ಪುತ್ರನ ಸುಳಿವು ಕೊಟ್ಟವರಿಗೆ 7 ಕೋಟಿ ರೂ. ಬಹುಮಾನ ಘೋಷಿಸಿದ ಅಮೆರಿಕ

0
851

ಆಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್‌ ಲಾಡೆನ್​ನ ಮಗನಿಗಾಗಿ ಅಮೆರಿಕ ಹುಡುಕಾಟ ನಡೆಸುತ್ತಿದ್ದು, ಆತನ ಕುರಿತು ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಫೆಬ್ರುವರಿ 28 ರ ಗುರುವಾರ ಘೋಷಿಸಿದೆ.

ವಾಷಿಂಗ್ಟನ್‌: ಆಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್‌ ಲಾಡೆನ್​ನ ಮಗನಿಗಾಗಿ ಅಮೆರಿಕ ಹುಡುಕಾಟ ನಡೆಸುತ್ತಿದ್ದು, ಆತನ ಕುರಿತು ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಗುರುವಾರ ಘೋಷಿಸಿದೆ.

ಹಮ್ಜಾ ಬಿನ್‌ ಲಾಡೆನ್‌ ಆಲ್‌ ಖೈದಾ ಉಗ್ರ ಸಂಘಟನೆಯ ನಾಯಕನಾಗಿ ಗುರುತಿಸಿಕೊಂಡಿದ್ದು, ಆತನ ಕುರಿತು ಮಾಹಿತಿ ನೀಡಿದವರಿಗೆ ಅಮೆರಿಕ ಒಂದು ಮಿಲಿಯನ್‌ ಡಾಲರ್‌ ಅಂದರೆ ಬರೋಬ್ಬರಿ 7 ಕೋಟಿ (7,09,26,500) ರೂಪಾಯಿ ಬಹುಮಾನ ನೀಡುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕದಲ್ಲಿ ನಡೆದ 9/11ರ ಉಗ್ರ ದಾಳಿಯ ಹೊಣೆಯನ್ನು ಆಲ್‌ ಖೈದಾ ಒಪ್ಪಿಕೊಂಡ ಬಳಿಕ 2011ರ ಮೇನಲ್ಲಿ ಅಮೆರಿಕದ ಸೇನಾಪಡೆಯು ಪಾಕಿಸ್ತಾನಕ್ಕೆ ನುಗ್ಗಿ ಒಸಾಮಾ ಬಿನ್‌ ಲಾಡೆನ್‌ನ್ನು ಹೊಡೆದುರುಳಿಸಿತ್ತು.

ರಿವಾರ್ಡ್‌ ಫಾರ್‌ ಜಸ್ಟೀಸ್‌ ಪ್ರೋಗ್ರಾಂ ಅಡಿಯಲ್ಲಿ ಹಮ್ಜಾ ಬಿನ್‌ ಲಾಡೆನ್‌ ಯಾವುದೇ ದೇಶದಲ್ಲಿ ಅಡಗಿದ್ದರೂ ಸರಿ ಆತನ ಸುಳಿವನ್ನು ನೀಡಿದವರಿಗೆ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ. ಸದ್ಯ ಹಮ್ಜಾ ಅಲ್‌ ಖೈದಾದ ಎಲ್ಲ ಶಾಖೆಗಳಿಗೂ ನಾಯಕನಾಗಿ ಬೆಳೆಯುತ್ತಿದ್ದಾನೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹಮ್ಜಾ ಬಿನ್​ ಲಾಡೆನ್‌ನ್ನು 2017ರಲ್ಲಿ ವಿಶೇಷವಾಗಿ ಹೆಸರಿಸಿದ ಜಾಗತಿಕ ಉಗ್ರನನ್ನಾಗಿ ಗುರುತಿಸಲಾಗಿದ್ದು, 2015ರಲ್ಲಿ ಈತ ವಿಡಿಯೋ ಮತ್ತು ಆಡಿಯೋ ಸಂದೇಶವನ್ನು ಬಿಡುಗಡೆ ಮಾಡುವ ಮೂಲಕ ಅಮೆರಿಕ ಮತ್ತು ಅದರ ಇತರೆ ಸಂಸ್ಥಾನಗಳ ಮೇಲೆ ದಾಳಿ ನಡೆಸುವಂತೆ ಕರೆ ನೀಡಿದ್ದ. ಇದಾದ ಒಂದು ವರ್ಷದ ನಂತರ ತಂದೆಯ ಮಾರ್ಗವನ್ನೇ ಅನುಸರಿಸಿದ ಆತ ತನ್ನ ಮೂಲದ ಸೌದಿ ಅರೇಬಿಯಾದಲ್ಲಿ ನಾಯಕತ್ವ ಬದಲಾವಣೆಗೆ ಒತ್ತಾಯಿಸಿದ್ದ.

ಜಿಹಾದ್​ನ ಯುವರಾಜ ಎನ್ನುವ ಹೆಸರಿನಿಂದಲೂ ಕರೆಯಲ್ಪಡುವ ಹಮ್ಜಾ ಎಲ್ಲಿದ್ದಾನೆ ಎನ್ನುವ ಕುರಿತು ಇದುವರೆಗೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಬದಲಿಗೆ ಆತ ಪಾಕಿಸ್ತಾನ, ಅಫ್ಘಾನಿಸ್ತಾನ, ಸಿರಿಯಾ ಅಥವಾ ಇರಾನ್​ನಲ್ಲಿ ಗೃಹಬಂಧನದಲ್ಲಿದ್ದಾನೆ ಎಂದು ವರದಿಗಳು ತಿಳಿಸಿವೆ.

ಅಮೆರಿಕದ ಅಂದಾಜಿನ ಪ್ರಕಾರ ಹಮ್ಜಾಗೆ ಈಗ 30 ವರ್ಷವಾಗಿರಬಹುದು. 2011ರಲ್ಲಿ ಅಮೆರಿಕ ಸೇನೆಯು ಪಾಕಿಸ್ತಾನದ ಅಬ್ಬೋಟಾಬಾದ್‌ನ ಗ್ಯಾರಿಸನ್ ಪಟ್ಟಣದಲ್ಲಿ ಅಡಗಿ ಕುಳಿತಿದ್ದ ತನ್ನ ತಂದೆ ಒಸಾಮಾ ಬಿನ್​ ಲಾಡೆನ್​​ನನ್ನು ಹೊಡೆದುರುಳಿಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕದ ಮೇಲೆ ದಾಳಿ ನಡೆಸಲು ಮುಂದಾಗಿದ್ದನು.

ಒಸಾಮಾ ಬಿನ್‌ ಲಾಡೆನ್‌ ಹತ್ಯೆಯ ಬಳಿಕ ಉಳಿದಿದ್ದ ಆತನ ಮೂವರು ಪತ್ನಿಯರು ಮತ್ತು ಮಕ್ಕಳು ಸೌದಿ ಅರೇಬಿಯಾಗೆ ಹಿಂತಿರುಗಿದ್ದರು.(ಏಜೆನ್ಸೀಸ್)