ಐ.ಟಿ ರಿಫಂಡ್‌: ಬ್ಯಾಂಕ್‌ ಖಾತೆಗೆ ‘ಪ್ಯಾನ್‌’ ಕಡ್ಡಾಯ

0
391

ಆದಾಯ ತೆರಿಗೆದಾರರಿಗೆ ಮರು ಪಾವತಿಸುವ ಮೊತ್ತವನ್ನು ಬ್ಯಾಂಕ್‌ ಖಾತೆಗೆ ಮಾತ್ರ ವರ್ಗಾಯಿಸುವ ಸೌಲಭ್ಯವು ಮಾರ್ಚ್‌ ತಿಂಗಳಿನಿಂದ ಜಾರಿಗೆ ಬರಲಿದೆ.

ನವದೆಹಲಿ (ಪಿಟಿಐ): ಆದಾಯ ತೆರಿಗೆದಾರರಿಗೆ ಮರು ಪಾವತಿಸುವ ಮೊತ್ತವನ್ನು ಬ್ಯಾಂಕ್‌ ಖಾತೆಗೆ ಮಾತ್ರ ವರ್ಗಾಯಿಸುವ ಸೌಲಭ್ಯವು ಮಾರ್ಚ್‌ ತಿಂಗಳಿನಿಂದ ಜಾರಿಗೆ ಬರಲಿದೆ.

ಐ.ಟಿ ರಿಫಂಡ್‌ ಬಯಸುವವರು ಇನ್ನು ಮುಂದೆ ತಮ್ಮ  ಬ್ಯಾಂಕ್‌ ಖಾತೆಗೆ ಕಡ್ಡಾಯವಾಗಿ ತಮ್ಮ ಶಾಶ್ವತ ಖಾತೆ ಸಂಖ್ಯೆಯನ್ನು (ಪ್ಯಾನ್‌) ಜೋಡಿಸಬೇಕು. ನಿಮ್ಮ ಮರು ಪಾವತಿಯನ್ನು ನೇರ, ತ್ವರಿತ ಮತ್ತು ಸುರಕ್ಷಿತ ರೀತಿಯಲ್ಲಿ ಪಡೆಯಲು ನಿಮ್ಮ  ‘ಪ್ಯಾನ್‌’ ಅನ್ನು ಬ್ಯಾಂಕ್‌ ಖಾತೆಗೆ ಜೋಡಿಸಿ. ಬ್ಯಾಂಕ್‌ ಖಾತೆ ಉಳಿತಾಯ, ಚಾಲ್ತಿ, ನಗದು ಅಥವಾ ಓವರ್‌ಡ್ರಾಫ್ಟ್‌ ಖಾತೆಯೂ ಆಗಿರಬಹುದು ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ.

ತಮ್ಮ ‘ಪ್ಯಾನ್‌’, ಬ್ಯಾಂಕ್‌ ಖಾತೆ ಜತೆ ಜೋಡಣೆ ಆಗಿರುವುದನ್ನು ತೆರಿಗೆದಾರರು ಇಲಾಖೆಯ ಇ–ಫೈಲಿಂಗ್‌ ಅಂತರ್ಜಾಲ ತಾಣದಲ್ಲಿ  https://www.incometax indiaefiling.gov.in ಖಚಿತಪಡಿಸಿಕೊಳ್ಳಬೇಕು. ಇದುವರೆಗೆ ಬ್ಯಾಂಕ್‌ಗೆ ‘ಪ್ಯಾನ್‌’ ನೀಡದವರು, ತಾವು ಖಾತೆ ಹೊಂದಿರುವ ಬ್ಯಾಂಕ್‌ನ ಮೂಲ ಶಾಖೆಯಲ್ಲಿ ವಿವರ ನೀಡಬೇಕು ಎಂದೂ ಸೂಚಿಸಲಾಗಿದೆ. ಇಲ್ಲಿಯವರೆಗೆ ಇಲಾಖೆಯು ತೆರಿಗೆ ಮರುಪಾವತಿಯನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸುತ್ತಿತ್ತು ಇಲ್ಲವೆ ಚೆಕ್‌ ಮೂಲಕ ಪಾವತಿ ಮಾಡುತ್ತಿತ್ತು. ತೆರಿಗೆದಾರರ ವಹಿವಾಟು ಆಧರಿಸಿ ಮರುಪಾವತಿ ವಿಧಾನ ನಿರ್ಧರಿಸಲಾಗುತ್ತಿತ್ತು.

ಆಧಾರ್‌, ಪ್ಯಾನ್‌ ಜೋಡಣೆ: ಆದಾಯ ತೆರಿಗೆ ಪಾವತಿಸುವವರು ತಮ್ಮ ಆಧಾರ್‌ ಜತೆ ‘ಪ್ಯಾನ್‌’ ಜೋಡಿಸುವುದನ್ನು ಈಗಾಗಲೇ ಕಡ್ಡಾಯ ಮಾಡಲಾಗಿದೆ.

ಈ ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.