ಐ.ಟಿ ರಿಟರ್ನ್‌ ಹೊಸ ಅರ್ಜಿ ನಮೂನೆ

0
19

2018–19ರ ಅಂದಾಜು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಸುವ (ಐ.ಟಿ ರಿಟರ್ನ್ಸ್‌ – ಐಟಿಆರ್‌) ಅರ್ಜಿ ನಮೂನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಹೊರಡಿಸಿದೆ.

ನವದೆಹಲಿ : 2018–19ರ ಅಂದಾಜು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಸುವ (ಐ.ಟಿ ರಿಟರ್ನ್ಸ್‌ – ಐಟಿಆರ್‌) ಅರ್ಜಿ ನಮೂನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಹೊರಡಿಸಿದೆ.

ವೇತನದಾರರು ತಮ್ಮ ವೇತನದ ಭತ್ಯೆ ಮತ್ತಿತರ ವಿವರಗಳನ್ನು, ವಹಿವಾಟುದಾರರು ತಮ್ಮ ಜಿಎಸ್‌ಟಿಎನ್‌ ಸಂಖ್ಯೆಯನ್ನು ಮತ್ತು ಜಿಎಸ್‌ಟಿ ವಹಿವಾಟಿನ ವಿವರಗಳನ್ನು ಕಡ್ಡಾಯವಾಗಿ ದಾಖಲಿಸಲು ಸೂಚಿಸಲಾಗಿದೆ. ಹೊಸ ಅರ್ಜಿ ನಮೂನೆಯಲ್ಲಿ ಕೆಲ ವಿವರಗಳನ್ನು ಸರಳಗೊಳಿಸಲಾಗಿದೆ. ರಿಟರ್ನ್‌ ಸಲ್ಲಿಕೆ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ‘ಸಿಬಿಡಿಟಿ’ ತಿಳಿಸಿದೆ.

ಐಟಿಆರ್‌ 1 ಅಥವಾ ಸಹಜ್‌ ಅರ್ಜಿ ನಮೂನೆಯನ್ನು ವೇತನದಾರರು ಸಲ್ಲಿಸಬೇಕು. ಹಿಂದಿನ ಹಣಕಾಸು ವರ್ಷದಲ್ಲಿ 3 ಕೋಟಿ ತೆರಿಗೆದಾರರು ಇದನ್ನು ಬಳಸಿಕೊಂಡಿದ್ದಾರೆ. ತೆರಿಗೆ ಕಡಿತಗಳ ಬಗೆಗಿನ ಸ್ಪಷ್ಟತೆಗಾಗಿ, ಕಂಪನಿ ವಿತರಿಸುವ ‘ಫಾರ್ಮ್‌ 16’ರಲ್ಲಿನ ವಿವರಗಳನ್ನು  ಐಟಿಆರ್‌ನಲ್ಲಿ ನಮೂದಿಸಬೇಕಾಗುತ್ತದೆ.

ತೆರಿಗೆ ವಿನಾಯ್ತಿಗೆ ಒಳಪಡದ ಭತ್ಯೆಯ ವಿವರಗಳನ್ನು ನೀಡಬೇಕಾಗುತ್ತದೆ. ವೇತನದಿಂದ ಗರಿಷ್ಠ 50 ಲಕ್ಷದವರೆಗೆ ವರಮಾನ ಪಡೆಯುವವರು ಈ ಅರ್ಜಿ ನಮೂನೆ ಬಳಸಬೇಕಾಗುತ್ತದೆ.

ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರ ನಿರ್ದಿಷ್ಟ ಅವಧಿಯಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ ವಿವರ ಸಲ್ಲಿಸುವುದನ್ನು ಈ ಬಾರಿ ಕೈಬಿಡಲಾಗಿದೆ.

ಹೊಸ ಅರ್ಜಿ ನಮೂನೆಯು ಇಲಾಖೆಯ ಅಂತರ್ಜಾಲ ತಾಣ www.incometaxindia.gov.in ದಲ್ಲಿ ಲಭ್ಯ ಇರಲಿದೆ. ಐಟಿಆರ್‌ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.