ಐಸಿಸ್ ವಿರುದ್ಧ ನಿರ್ಣಾಯಕ ಜಯ

0
398

ಸಿರಿಯಾದಲ್ಲಿ ಅಮೆರಿಕ ಬೆಂಬಲಿತ ಮಿತ್ರಪಡೆ ಉಗ್ರ ಸಂಘಟನೆ ಐಸಿಸ್ ವಿರುದ್ಧ ನಿರ್ಣಾಯಕ ಜಯ ಸಾಧಿಸಿದೆ. ಬಾಘುಜ್ ಪ್ರದೇಶವನ್ನು ಹಿಡಿತಕ್ಕೆ ಪಡೆಯುವ ಮೂಲಕ ಸಿರಿಯಾವನ್ನು ಸಂಪೂರ್ಣವಾಗಿ ಐಸಿಸ್​ನಿಂದ ಮುಕ್ತಗೊಳಿಸಿದೆ.

ಡಮಾಸ್ಕಸ್: ಸಿರಿಯಾದಲ್ಲಿ ಅಮೆರಿಕ ಬೆಂಬಲಿತ ಮಿತ್ರಪಡೆ ಉಗ್ರ ಸಂಘಟನೆ ಐಸಿಸ್ ವಿರುದ್ಧ ನಿರ್ಣಾಯಕ ಜಯ ಸಾಧಿಸಿದೆ. ಬಾಘುಜ್ ಪ್ರದೇಶವನ್ನು ಹಿಡಿತಕ್ಕೆ ಪಡೆಯುವ ಮೂಲಕ ಸಿರಿಯಾವನ್ನು ಸಂಪೂರ್ಣವಾಗಿ ಐಸಿಸ್​ನಿಂದ ಮುಕ್ತಗೊಳಿಸಿದೆ.

ಆಗ್ನೇಯ ಭಾಗದ ಸಿರಿಯಾ – ಇರಾಕ್ ಗಡಿಯಲ್ಲಿರುವ ಬಾಘುಜ್​ನಲ್ಲಿ ಒಂದು ವಾರದಿಂದ ಸಿರಿಯಾ ಡಮಾಕ್ರಟಿಕ್ ಫೋರ್ಸ್ (ಎಸ್​ಡಿಎಫ್) ಮತ್ತು ಐಸಿಸ್ ಉಗ್ರರ ನಡುವೆ ಸಂಘರ್ಷ ನಡೆದಿತ್ತು. ಎಸ್​ಡಿಎಫ್ ಗೆಲುವು ಸಾಧಿಸಿದ್ದು, ಈ ಪ್ರದೇಶವನ್ನು ಸಿರಿಯಾ ಆಡಳಿತದ ಹಿಡಿತಕ್ಕೆ ಪಡೆಯಲಾಯಿತು ಎಂದು ಅಮೆರಿಕ ಬೆಂಬಲಿತ ಎಸ್​ಡಿಎಫ್​ನ ವಕ್ತಾರ ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ. ಎಡಿಎಫ್ ಕಾರ್ಯಾಚರಣೆಯಲ್ಲಿ ಅನೇಕ ಉಗ್ರರು ಹತರಾಗಿದ್ದಾರೆ. ಇನ್ನುಳಿದವರು ಯೂಫ್ರಟಿಸ್ ನದಿ ಆಚೆ ದಡಕ್ಕೆ ಪಲಾಯನ ಮಾಡಿದರು. ಎಸ್​ಡಿಫ್ ಧ್ವಜ ಬಾಘುಜ್​ನಲ್ಲಿ ಮತ್ತೆ ಹಾರಾಡಿತು ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅನೇಕ ಮೂಲಭೂತವಾದಿಗಳು ಹತರಾಗಿದ್ದು, ಹಲವರು ಸಿರಿಯಾ ಮತ್ತು ಇರಾಕ್​ನ ಮರಳುಗಾಡಿನಲ್ಲಿ ಭೂಗತರಾಗಿದ್ದಾರೆ ಎನ್ನಲಾಗಿದೆ. ಐಸಿಸ್ ಜತೆ ಸಂಪರ್ಕ ಹೊಂದಿರುವ ಕೆಲ ಉಗ್ರ ಸಂಘಟನೆಗಳು ಈಜಿಪ್ಟ್​ನ ಸಿನಾಯ್ ಪರ್ಯಾಯ ದ್ವೀಪ, ಅಫ್ಘಾನಿಸ್ತಾನದಲ್ಲಿ ಇವೆ ಎನ್ನಲಾಗುತ್ತಿದೆ.

ಖಾತರಿಪಡಿಸಿದ ಅಮೆರಿಕ

ಸಿರಿಯಾ ಐಸಿಸ್​ನಿಂದ ಮುಕ್ತವಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ತಿಳಿಸಿದೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೂಡ ಇದನ್ನು ಖಾತರಿ ಪಡಿಸಿದ್ದಾರೆ. ಐಸಿಸ್ ನಾಯಕ ಅಬು ಬಕರ್ ಅಲ್-ಬಾಗ್ದಾದಿ ಇರಾಕ್​ನಲ್ಲಿ ತಲೆಮರೆಸಿಕೊಂಡಿದ್ದಾನೆಂದು ಅಮೆರಿಕ ಬಲವಾಗಿ ನಂಬಿದೆ. 2014ರಲ್ಲಿ ಸಿರಿಯಾದ ಮೊಸುಲ್ ನಗರದ ಮಸೀದಿ ಮೇಲೆ ನಿಂತು ಭಾಷಣ ಮಾಡಿದ್ದ ಬಾಗ್ದಾದಿ, ತನ್ನನ್ನು ಖಲಿಫಾ (ಜಿಹಾದಿಯ ಮುಖಂಡ)ನೆಂದು ಘೋಷಿಸಿಕೊಂಡಿದ್ದ. ಮುಸ್ಲಿಮರ ರಕ್ಷಕನೆಂದು ಹೇಳಿಕೊಂಡಿದ್ದ. ಇವನ ನೇತೃತ್ವದಲ್ಲಿ ಐಸಿಸ್ ಉಗ್ರರು ಸಿರಿಯಾ ಮತ್ತು ಇರಾಕ್​ನ ಹಲವು ಭೂ ಭಾಗಗಳಲ್ಲಿ ನಾಗರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದರು. ಉಗ್ರರು ಒಂದು ಲಕ್ಷಕ್ಕೂ ಹೆಚ್ಚಿನ ಬಾಂಬ್​ಗಳನ್ನು ಸಿರಿಯಾ ಮತ್ತು ಇರಾಕ್​ನಲ್ಲಿ ಹಾಕಿದ್ದಾರೆ. ಇದರಿಂದ ಅಪಾರ ಸಂಖ್ಯೆಯಲ್ಲಿ ನಾಗರಿಕರು ಮತ್ತು ಭದ್ರತಾಪಡೆ ಯೋಧರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.