ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್ ರ‌್ಯಾಂಕಿಂಗ್ : 3ನೇ ಸ್ಥಾನಕ್ಕೇರಿದ “ಸ್ಮೃತಿ ಮಂದನಾ”

0
681

ಭಾರತ ತಂಡದ ಎಡಗೈ ಬ್ಯಾಟುಗಾರ್ತಿ ಸ್ಮೃತಿ ಮಂದನಾ ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್ ರ‌್ಯಾಂಕಿಂಗ್ ​ನಲ್ಲಿ ಜೀವನಶ್ರೇಷ್ಠ 3ನೇ ಸ್ಥಾನಕ್ಕೇರಿದ್ದಾರೆ. ಕಳೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಸ್ಮೃತಿ 3 ಪಂದ್ಯಗಳಲ್ಲಿ 1 ಅರ್ಧಶತಕ ಸಹಿತ ಒಟ್ಟಾರೆ 72 ರನ್ ಬಾರಿಸಿದ್ದರು.

ದುಬೈ: ಭಾರತ ತಂಡದ ಎಡಗೈ ಬ್ಯಾಟುಗಾರ್ತಿ ಸ್ಮೃತಿ ಮಂದನಾ ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್ ರ‌್ಯಾಂಕಿಂಗ್ ​ನಲ್ಲಿ ಜೀವನಶ್ರೇಷ್ಠ 3ನೇ ಸ್ಥಾನಕ್ಕೇರಿದ್ದಾರೆ.

ಕಳೆದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಸ್ಮೃತಿ 3 ಪಂದ್ಯಗಳಲ್ಲಿ 1 ಅರ್ಧಶತಕ ಸಹಿತ ಒಟ್ಟಾರೆ 72 ರನ್ ಬಾರಿಸಿದ್ದರು. 3 ಪಂದ್ಯಗಳಲ್ಲಿ ಕೇವಲ 15 ರನ್ ಗಳಿಸಿದ್ದ ಮತ್ತೋರ್ವ ಮುಂಬೈ ಆಟಗಾರ್ತಿ ಜೆಮೀಮಾ ರೋಡ್ರಿಗಸ್ 2ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ನ್ಯೂಜಿಲೆಂಡ್​ನ ಸುಜೀ ಬೇಟ್ಸ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, ವೆಸ್ಟ್ ಇಂಡೀಸ್​ನ ಡಿಯೇಂಡ್ರ ಡಾಟಿನ್ 2ನೇ ಸ್ಥಾನಕ್ಕೇರಿದ್ದಾರೆ. ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧ ಸರಣಿ ತಪ್ಪಿಸಿಕೊಂಡಿದ್ದ ಹರ್ವನ್​ಪ್ರೀತ್ ಕೌರ್ 2 ಸ್ಥಾನ ಕುಸಿದು 9ನೇ ಸ್ಥಾನಕ್ಕಿಳಿದಿದ್ದಾರೆ.

ಬೌಲಿಂಗ್ ರ‌್ಯಾಂಕಿಂಗ್ ​ನಲ್ಲಿ ರಾಧಾ ಯಾದವ್ 5 ಸ್ಥಾನ ಬಡ್ತಿ ಪಡೆದು 5ನೇ ಸ್ಥಾನಕ್ಕೇರಿದ್ದರೆ, ಮತ್ತೋರ್ವ ಎಡಗೈ ಸ್ಪಿನ್ನರ್ ಏಕ್ತಾ ಬಿಷ್ಟ್ 3 ಸ್ಥಾನ ಮೇಲೇರಿ 56ನೇ ಸ್ಥಾನ ಗಳಿಸಿದ್ದಾರೆ. ಆಫ್ ಸ್ಪಿನ್ನರ್ ಅನುಜಾ ಪಾಟೀಲ್ 35ರಿಂದ 31ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾದ ಮೆಗನ್ ಸ್ಕಟ್ ಮತ್ತು ಭಾರತದ ಪೂನಂ ಯಾದವ್ ಅಗ್ರ 2 ಸ್ಥಾನದಲ್ಲಿರುವ ಬೌಲರ್​ಗಳಾಗಿದ್ದಾರೆ. ದೀಪ್ತಿ ಶರ್ಮ 10 ಸ್ಥಾನ ಕುಸಿದು 24ನೇ ಸ್ಥಾನಕ್ಕಿಳಿದಿದ್ದಾರೆ. ವೈಟ್​ವಾಷ್ ಸೋಲಿನ ನಡುವೆ ತಂಡ ರ್ಯಾಂಕಿಂಗ್​ನಲ್ಲಿ ಭಾರತ 5ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ತಂಡ ನ್ಯೂಜಿಲೆಂಡ್​ಅನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿ ಮುಂದುವರಿದಿದೆ.