ಐಸಿಸಿ ಟ್ವೆಂಟಿ–20 ರ‍್ಯಾಂಕಿಂಗ್‌: ಮೂರನೇ ಸ್ಥಾನಕ್ಕೇರಿದ ಬೌಲರ್‌ ಕುಲದೀಪ್‌ ಯಾದವ್‌

0
353

ಭಾರತದ ಚೈನಾಮೆನ್ ಬೌಲರ್ ಕುಲದೀಪ್ ಯಾದವ್‌ ಐಸಿಸಿ ಬಿಡುಗಡೆ ಮಾಡಿರುವ ಟ್ವೆಂಟಿ–20 ಕ್ರಿಕೆಟ್ ರ‍್ಯಾಂಕಿಂಗ್ ಪಟ್ಟಿಯ ಅಗ್ರ ಐದರಲ್ಲಿ ಸ್ಥಾನ ಗಳಿಸಿದ್ದಾರೆ. ಅವರು ಈ ಗೌರವಕ್ಕೆ ಪಾತ್ರರಾಗಿರುವುದು ಇದೇ ಮೊದಲು.

ದುಬೈ (ಪಿಟಿಐ): ಭಾರತದ ಚೈನಾಮೆನ್ ಬೌಲರ್ ಕುಲದೀಪ್ ಯಾದವ್‌ ಐಸಿಸಿ ಬಿಡುಗಡೆ ಮಾಡಿರುವ ಟ್ವೆಂಟಿ–20 ಕ್ರಿಕೆಟ್ ರ‍್ಯಾಂಕಿಂಗ್ ಪಟ್ಟಿಯ ಅಗ್ರ ಐದರಲ್ಲಿ ಸ್ಥಾನ ಗಳಿಸಿದ್ದಾರೆ. ಅವರು ಈ ಗೌರವಕ್ಕೆ ಪಾತ್ರರಾಗಿರುವುದು ಇದೇ ಮೊದಲು.

ಆಸ್ಟ್ರೇಲಿಯಾ ಎದುರು ನಡೆದ ಮೂರು ಪಂದ್ಯಗಳ ಟ್ವೆಂಟಿ–20 ಸರಣಿಯಲ್ಲಿ ಕುಲದೀಪ್ ಯಾದವ್‌ ಒಟ್ಟು ನಾಲ್ಕು ವಿಕೆಟ್ ಕಬಳಿಸಿದ್ದರು. ಈ ಸಾಧನೆಯಿಂದಾಗಿ ಅವರಿಗೆ 20 ಸ್ಥಾನಗಳ ಬಡ್ತಿ ಲಭಿಸಿದೆ. ಅವರು ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ.

ಆಸ್ಟ್ರೇಲಿಯಾದ ಆ್ಯಡಂ ಜಂಪಾ 17 ಸ್ಥಾನಗಳ ಏರಿಕೆಯೊಂದಿಗೆ ಐದನೇ ಸ್ಥಾನ ಗಳಿಸಿದ್ದಾರೆ. ಈ ತಂಡದ ಬಿಲಿ ಸ್ಟಾನ್‌ಲೇಕ್‌ ಮತ್ತು ಆ್ಯಂಡ್ರ್ಯೂ ಟೈ ಕ್ರಮವಾಗಿ 14 ಮತ್ತು ಎಂಟು ಸ್ಥಾನಗಳ ಕುಸಿತಕ್ಕೆ ಒಳಗಾಗಿದ್ದಾರೆ. ಅಗ್ರ ಹತ್ತರಲ್ಲಿ ಈ ಬಾರಿ ಒಂಬತ್ತು ಸ್ಪಿನ್ನರ್‌ಗಳು ಸ್ಥಾನ ಗಳಿಸಿದ್ದು ಪಾಕಿಸ್ತಾನದ ಫಾಹೀಮ್‌ ಅಶ್ರಫ್ ಅವರು ಪಟ್ಟಿಯಲ್ಲಿರುವ ಏಕೈಕ ವೇಗದ ಬೌಲರ್‌. ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ 36ಕ್ಕೆ4 ವಿಕೆಟ್ ಕಬಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೃಣಾಲ್ ಪಾಂಡ್ಯ 98ರಿಂದ 66ನೇ ಸ್ಥಾನಕ್ಕೆ ಏರಿದ್ದಾರೆ. ಭುವನೇಶ್ವರ್ ಕುಮಾರ್ ಮತ್ತು ಜಸ್‌ಪ್ರೀತ್ ಬೂಮ್ರಾ ಕ್ರಮವಾಗಿ 19 ಮತ್ತು 21ನೇ ಸ್ಥಾನದಲ್ಲಿದ್ದಾರೆ.

ಶಿಖರ್ ಧವನ್‌ಗೆ ಬಡ್ತಿ: ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಶಿಖರ್ ಧವನ್‌ ಐದು ಸ್ಥಾನಗಳ ಬಡ್ತಿ ಗಳಿಸಿದ್ದು 11ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್‌ ಎರಡು ಸ್ಥಾನಗಳ ಕುಸಿತ ಕಂಡಿದ್ದಾರೆ. ಅವರು ಕ್ರಮವಾಗಿ ಆರು ಮತ್ತು ಒಂಬತ್ತನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರು 14ನೇ ಸ್ಥಾನ ಅಬಾಧಿತವಾಗಿದೆ.

ತಂಡ ವಿಭಾಗದಲ್ಲಿ ಭಾರತ 116 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು ಇಂಗ್ಲೆಂಡ್‌ (108) ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ (106), ಆಸ್ಟ್ರೇಲಿಯಾ (102) ಮತ್ತು ನ್ಯೂಜಿಲೆಂಡ್‌ (101) ಉಳಿದ ಮೂರು ಸ್ಥಾನಗಳಲ್ಲಿವೆ.