ಐಸಿಸಿ ಟೆಸ್ಟ್ ರ‍್ಯಾಂಕಿಂಗ್ : ಕೊಹ್ಲಿಯೇ ‘ಕಿಂಗ್‌’

0
18

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ.

ದುಬೈ (ಪಿಟಿಐ): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಪರಿಷ್ಕೃತ ಪಟ್ಟಿಯನ್ನು ಐಸಿಸಿ ಆಗಸ್ಟ್ 19 ರ ಸೋಮವಾರ ಬಿಡುಗಡೆ ಮಾಡಿದ್ದು ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಹಿಂದಿಕ್ಕಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. 

ವಿರಾಟ್ ಕೊಹ್ಲಿ ಅವರ ಖಾತೆಯಲ್ಲಿ ಈಗ 922 ಪಾಯಿಂಟ್‌ಗಳಿವೆ. ಸ್ಮಿತ್‌ ಬಗಲಲ್ಲಿ 913 ಪಾಯಿಂಟ್‌ ಗಳಿವೆ. ಅವರು ಆ್ಯಷಸ್ ಸರಣಿಯ ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದರು. ಎರಡನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 92 ರನ್ ಕಲೆ ಹಾಕಿದ್ದರು.

ಅಗ್ರ 10 ಮಂದಿಯ ಪಟ್ಟಿಯಲ್ಲಿ ಭಾರತದ ಚೇತೇಶ್ವರ ಪೂಜಾರ ಸ್ಥಾನ ಗಳಿಸಿದ್ದಾರೆ. ಅವರು ನಾಲ್ಕನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ಎದುರಿನ ಟೆಸ್ಟ್‌ನಲ್ಲಿ ತಂಡಕ್ಕೆ ಅಮೋಘ ಜಯ ಗಳಿಸಿಕೊಟ್ಟ ಶ್ರೀಲಂಕಾದ ದಿಮುತ್ ಕರುಣಾರತ್ನೆ ಏಕಾಏಕಿ ನಾಲ್ಕು ಸ್ಥಾನಗಳ ಏರಿಕೆ ಕಂಡಿದ್ದು ಎಂಟನೇ ಸ್ಥಾನದಲ್ಲಿದ್ದಾರೆ.
 
ದಕ್ಷಿಣ ಆಫ್ರಿಕಾದ ಏಡನ್‌ ಮರ್ಕರಮ್ ಆರನೇ ಸ್ಥಾನಕ್ಕೆ ಏರಿದ್ದರೆ, ಇಂಗ್ಲೆಂಡ್ ನಾಯಕ ಜೋ ರೂಟ್ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅಗ್ರ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರನೇ ಸ್ಥಾನದಲ್ಲಿದ್ದ ಭಾರತದ ರವೀಂದ್ರ ಜಡೇಜ ಒಂದು ಸ್ಥಾನದ ಏರಿಕೆ ಕಂಡಿದ್ದಾರೆ.