ಐಟಿಆರ್: ಹೊಸ ಬದಲಾವಣೆಗಳೇನು?

0
17

2018-19ನೇ ಹಣಕಾಸು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐಟಿಆರ್) ಸಲ್ಲಿಸಲು ಜುಲೈ 31, 2019 ಕೊನೆಯ ದಿನ. ಕೊನೆ ಗಳಿಗೆಯಲ್ಲಿ ತರಾತುರಿಯಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸಲು ಅಣಿಯಾಗುವುದಕ್ಕಿಂತ ಈಗಲೇ ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ. ಹೀಗೆ ಮಾಡುವುದರಿಂದ ಹೆಚ್ಚುವರಿ ತೆರಿಗೆ ಕಡಿತಗೊಂಡಿದ್ದ ಪಕ್ಷದಲ್ಲಿ ಆ ಹಣವನ್ನು ಬೇಗ ವಾಪಸ್ ಪಡೆಯಲು ಸುಲಭವಾಗುತ್ತದೆ.

ನವದೆಹಲಿ :  2018-19ನೇ ಹಣಕಾಸು ವರ್ಷದ ಆದಾಯ ತೆರಿಗೆ ಲೆಕ್ಕಪತ್ರ ವಿವರ (ಐಟಿಆರ್) ಸಲ್ಲಿಸಲು ಜುಲೈ 31, 2019 ಕೊನೆಯ ದಿನ.  ಕೊನೆ ಗಳಿಗೆಯಲ್ಲಿ ತರಾತುರಿಯಲ್ಲಿ ಆದಾಯ ತೆರಿಗೆ ವಿವರ ಸಲ್ಲಿಸಲು ಅಣಿಯಾಗುವುದಕ್ಕಿಂತ ಈಗಲೇ ಪೂರ್ವ ತಯಾರಿ ಮಾಡಿಕೊಳ್ಳುವುದು ಉತ್ತಮ. ಹೀಗೆ ಮಾಡುವುದರಿಂದ ಹೆಚ್ಚುವರಿ ತೆರಿಗೆ ಕಡಿತಗೊಂಡಿದ್ದ ಪಕ್ಷದಲ್ಲಿ ಆ ಹಣವನ್ನು ಬೇಗ ವಾಪಸ್ ಪಡೆಯಲು ಸುಲಭವಾಗುತ್ತದೆ.

ನಿಮ್ಮ ಆದಾಯ ತೆರಿಗೆ ಲೆಕ್ಕಪತ್ರ ವಿವರದ ಅರ್ಜಿ ನಮೂನೆಗಳು ಈ ಬಾರಿ ಕೆಲ ಬದಲಾವಣೆಗಳನ್ನು ಒಳಗೊಂಡಿವೆ. ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ‘ಫಾರಂ 16’ ನಲ್ಲಿ ಕೆಲ ಮಾರ್ಪಾಡುಗಳನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳ ಕುರಿತು ಇಲ್ಲಿ ವಿವರಿಸಲಾಗಿದೆ.

‘ಫಾರಂ 16’ ನಲ್ಲಿ ತೆರಿಗೆಗೆ ಒಳಪಡುವ ಭತ್ಯೆಗಳ ವಿವರ ಸಲ್ಲಿಕೆಯಲ್ಲಿನ ಮಾರ್ಪಾಡುಗಳು ಹೀಗಿವೆ. ವೇತನದಾರರು ಈ ಬಾರಿ ಕೆಲ ಹೆಚ್ಚುವರಿ ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ. ವಿನಾಯ್ತಿ ಪಡೆಯಲಾಗಿರುವ ಭತ್ಯೆಗಳ ವಿವರಗಳನ್ನು ‘ಫಾರಂ 16’ ನಲ್ಲಿ ನಮೂದಿಸಬೇಕಾಗುತ್ತದೆ. ಸಾಮಾನ್ಯವಾಗಿ ತೆರಿಗೆ ಪಾವತಿಸುವ ವೇತನದಾರರು ಬಾಡಿಗೆ ಭತ್ಯೆ (ಎಚ್‌ಆರ್‌ಎ), ಪ್ರಯಾಣ ಭತ್ಯೆ (ಎಲ್ ಟಿಎ), ಗ್ರಾಚ್ಯುಟಿ ಅಥವಾ ರಜೆ ಭತ್ಯೆಗಳನ್ನು ಪಡೆದುಕೊಳ್ಳುತ್ತಾರೆ.

ಈ ಭತ್ಯೆಗಳ ಮೇಲೆ ತೆರಿಗೆದಾರರಿಗೆ ಭಾಗಶಃ ಅಥವಾ ಪೂರ್ಣ ವಿನಾಯ್ತಿ ಲಭಿಸುತ್ತದೆ. ಈ ಪ್ರತಿಯೊಂದು ಭತ್ಯೆಯ ವಿವರಗಳನ್ನು ಪ್ರತ್ಯೇಕವಾಗಿ ಫಾರಂನಲ್ಲಿ ದಾಖಲಿಸಬೇಕಾಗುತ್ತದೆ. ಅಂದರೆ ನೀವು ಬಾಡಿಗೆ ಭತ್ಯೆ (ಎಚ್‌ಆರ್‌ಎ), ಪ್ರಯಾಣ ಭತ್ಯೆ (ಎಲ್‌ಟಿಎ) ಮತ್ತು ಗ್ರಾಚ್ಯುಟಿ ವಿನಾಯಿತಿಯನ್ನು ತೆರಿಗೆ ಲೆಕ್ಕಪತ್ರ ವಿವರದಲ್ಲಿ ತೋರಿಸಬೇಕಾಗುತ್ತದೆ. ಇದೇ ರೀತಿ ತೆರಿಗೆಗೆ ಒಳಪಡದ ಭತ್ಯೆಗಳ ವಿವರಗಳನ್ನು ‘ಫಾರಂ 16’ ನಲ್ಲಿ ನೀಡಬೇಕಾಗುತ್ತದೆ.

ಉದ್ಯೋಗಿಗಳಿಗೆ ‘ಫಾರಂ 16’ ನೀಡುವಾಗ ಕಂಪನಿಗಳು ತೆರಿಗೆಗೆ ಒಳಪಡದ ಭತ್ಯೆಯ ಮೌಲ್ಯವನ್ನು ಒಂದೊಂದಾಗಿ ವಿವರಿಸಿ ದಾಖಲಿಸಬೇಕಾಗುತ್ತದೆ. ಆದಾಯ ತೆರಿಗೆಯ ಸೆಕ್ಷನ್ 80 ರ ವಿನಾಯಿತಿಗಳನ್ನು ಪ್ರತ್ಯೇಕವಾಗಿ ತೋರಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ‘ಫಾರಂ 16’ ಆದಾಯ ತೆರಿಗೆ ಲೆಕ್ಕಪತ್ರ ವಿವರಕ್ಕೆ ತಾಳೆಯಾಗುತ್ತದೆ.

ಬದಲಾವಣೆಗೆ ಕಾರಣವೇನು?: ವೇತನದಾರರ ವಿನಾಯ್ತಿ ಪಡೆದಿರುವ ಭತ್ಯೆಗಳಿಗೂ ಮತ್ತು ಕಂಪನಿ ಮೂಲದಲ್ಲೇ ತೆರಿಗೆ ಕಡಿತಕ್ಕೂ ( ಟಿಡಿಎಸ್ ) ಸರಿಯಾದ ತಾಳೆಯಾಗುತ್ತಿರಲಿಲ್ಲ. ಹೀಗಾಗಿ ಹೊಸ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ.

ಕಂಪನಿ ತನ್ನ ಉದ್ಯೋಗಿಗಳಿಗೆ ನೀಡಿರುವ ವೇತನ ಮತ್ತು ಮೂಲದಲ್ಲೇ ಕಡಿತ ಮಾಡಿರುವ ತೆರಿಗೆ ವಿವರವನ್ನು ಫಾರಂ 16 ನೀಡುತ್ತದೆ. ಕಂಪನಿ ಕೂಡ ಉದ್ಯೋಗಿಯ ವೇತನದ ಆಧಾರದಲ್ಲಿ ಕಡಿತ ಮಾಡಿರುವ ತೆರಿಗೆಯ ಸಂಪೂರ್ಣ ವಿವರವನ್ನು ನೀಡಬೇಕಾಗುತ್ತದೆ. ಈ ಟಿಡಿಎಸ್ ವಿವರವನ್ನು ‘ಫಾರಂ 24ಕ್ಯೂ’ ಎಂದು ಕರೆಯಲಾಗುತ್ತದೆ.

ಮೇಲೆ ವಿವರಿಸಲಾಗಿರುವ ಎಲ್ಲ ಬದಲಾವಣೆಗಳನ್ನು ‘ಫಾರಂ 24ಕ್ಯೂ’ ನಲ್ಲಿಯೂ ಅನುಕರಿಸಲಾಗಿದೆ. ಹೊಸ ಪದ್ಧತಿಯಿಂದ ಫಾರಂ 16, ಆದಾಯ ತೆರಿಗೆ ಲೆಕ್ಕಪತ್ರ ವಿವರ ಮತ್ತು ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್) ಒಂದಕ್ಕೊಂದು ತಾಳೆಯಾಗಲಿವೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಉಪಾಧ್ಯಕ್ಷ)