ಐಎಂಎಫ್‌ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞೆ ಮೈಸೂರು ಮೂಲದ ಗೀತಾ ಗೋಪಿನಾಥ್‌

0
1060

ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್​) ಯ ಮುಖ್ಯ ಆರ್ಥಿಕ ತಜ್ಞೆಯಾಗಿ ಮೈಸೂರು ಮೂಲದ ಗೀತಾ ಗೋಪಿನಾಥ್‌ ಅವರು ಅಧಿಕಾರ ಸ್ವೀಕರಿಸಿದ್ದು, ಐಎಂಎಫ್‌ನ ಪ್ರಮುಖ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ವಾಷಿಂಗ್ಟನ್‌: ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್​) ಯ ಮುಖ್ಯ ಆರ್ಥಿಕ ತಜ್ಞೆಯಾಗಿ ಮೈಸೂರು ಮೂಲದ ಗೀತಾ ಗೋಪಿನಾಥ್‌ ಅವರು ಅಧಿಕಾರ ಸ್ವೀಕರಿಸಿದ್ದು, ಐಎಂಎಫ್‌ನ ಪ್ರಮುಖ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ವಿಶ್ವದಲ್ಲಿ ಜಾಗತೀಕರಣದಿಂದಾಗಿ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಬೆನ್ನಲ್ಲೇ ಬಹುಪಕ್ಷೀಯ ಸಂಸ್ಥೆಗಳು ಕೂಡ ಸವಾಲುಗಳನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಐಎಂಎಫ್‌ನ 11ನೇ ಮುಖ್ಯ ಅರ್ಥಿಕ ತಜ್ಞೆಯಾಗಿ ನೇಮಕವಾಗಿರುವ ಗೀತಾ ಗೋಪಿನಾಥ್‌ ಅವರ ಮುಂದೆ ಸಹಜವಾಗಿಯೇ ಸವಾಲುಗಳು ಮತ್ತು ನಿರೀಕ್ಷೆಗಳು ಹೆಚ್ಚಾಗಿವೆ.

ಡಿ. 31 ರಂದು ಮಾರಿಸ್ ಆಬ್‌ಸ್ಟೆಫೆಲ್ಡ್‌ ನಿವೃತ್ತಿ ಹಿನ್ನೆಲೆಯಲ್ಲಿ ಗೀತಾ ಗೋಪಿನಾಥ್‌ ಅವರನ್ನು ಅ. 1ರಂದು ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಿನ್ ಲಾಗರ್ಡ್ ಅವರು ಹೆಸರನ್ನು ಘೋಷಿಸಿದ್ದರು. ಗೀತಾ ಅವರು ಅಗತ್ಯ ಶೈಕ್ಷಣಿಕ ಅರ್ಹತೆ, ಬೌದ್ಧಿಕ ನಾಯಕತ್ವ ಮತ್ತು ಅಂತಾರಾಷ್ಟ್ರೀಯ ಅನುಭವದೊಂದಿಗೆ ವಿಶ್ವದ ಅತಿದೊಡ್ಡ ಅರ್ಥಶಾಸ್ತ್ರಜ್ಞರ ಪೈಕಿ ಒಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ.

ಡಿ. 8, 1971ರಲ್ಲಿ ಮೈಸೂರಿನಲ್ಲಿ ಜನಿಸಿದ ಗೀತಾ ಗೋಪಿನಾಥ್‌ ಅವರು ಮೈಸೂರಿನ ನಿರ್ಮಲಾ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ಟಿ ವಿ ಗೋಪಿನಾಥ್‌ ಮತ್ತು ವಿ ಸಿ ವಿಜಯಲಕ್ಷ್ಮಿ ಅವರ ಇಬ್ಬರು ಪುತ್ರಿಯರಲ್ಲಿ ಇವರು ಕಿರಿಯರು. ಅಪ್ಪ – ಅಮ್ಮ ಮೂಲತಃ ಕೇರಳದವರಾಗಿದ್ದು, ಮೈಸೂರಿನಲ್ಲಿ ನಲೆಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಮಹಿಳಾ ಶ್ರೀರಾಮ ಕಾಲೇಜಿನಲ್ಲಿ 1992ರಲ್ಲಿ ಪದವಿ ಪಡೆದ ಇವರು ದೆಹಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಾಷಿಂಗ್ಟನ್‌ ವಿಶ್ವವಿದ್ಯಾಲಯದಲ್ಲಿ ಎಂಎ ಮುಗಿಸಿದ ಬಳಿಕ 2001ರಲ್ಲಿ ಪ್ರಿನ್ಸ್ಟನ್‌ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

ಹಾರ್ವರ್ಡ್ ಪ್ರೊಫೆಸರ್

ಸದ್ಯ ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಇಂಟರ್ನ್ಯಾಷನಲ್ ಸ್ಟಡೀಸ್ ಮತ್ತು ಎಕನಾಮಿಕ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದು, 2010ರಲ್ಲಿ ಕಾಯಂ ಪ್ರೊಫೆಸರ್‌ ಆಗಿ ನೇಮಕಗೊಂಡಿದ್ದರು.

2016ರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಹಣಕಾಸು ಸಲಹೆಗಾರರಾಗಿ ನೇಮಕಗೊಂಡಿದ್ದರು. (ಏಜೆನ್ಸೀಸ್)