ಏಷ್ಯಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ :ಅಮಿತ್‌, ಸೋನಿಯಾಗೆ ಭಾರತ ತಂಡದ ಸಾರಥ್ಯ

0
245

ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತೆ ಸೋನಿಯಾ ಚಹಲ್‌ ಮತ್ತು ಏಷ್ಯನ್‌ ಗೇಮ್ಸ್‌ ಬಂಗಾರದ ಪದಕ ವಿಜೇತ ಅಮಿತ್‌ ಪಂಗಲ್‌ ಏ.17 ರಂದು ಬ್ಯಾಂಕಾಕ್‌ನಲ್ಲಿ ಆರಂಭವಾಗಲಿರುವ ಏಷ್ಯಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ 20 ಸದಸ್ಯರ ಭಾರತ ಬಾಕ್ಸಿಂಗ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಹೊಸದಿಲ್ಲಿ : ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತೆ ಸೋನಿಯಾ ಚಹಲ್‌ ಮತ್ತು ಏಷ್ಯನ್‌ ಗೇಮ್ಸ್‌ ಬಂಗಾರದ ಪದಕ ವಿಜೇತ ಅಮಿತ್‌ ಪಂಗಲ್‌ ಏಪ್ರೀಲ್.17ರಂದು ಬ್ಯಾಂಕಾಕ್‌ನಲ್ಲಿ ಆರಂಭವಾಗಲಿರುವ ಏಷ್ಯಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ 20 ಸದಸ್ಯರ ಭಾರತ ಬಾಕ್ಸಿಂಗ್‌ ತಂಡವನ್ನು ಮುನ್ನಡೆಸಲಿದ್ದಾರೆ. 

ವಿಶ್ವ ಚಾಂಪಿಯನ್‌ಷಿಪ್‌ ಪದಕ ವಿಜೇತರಾದ ಸರಿತಾ ದೇವಿ ಮತ್ತು ಶಿವ ಥಾಪ ಸಹ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 52 ಕೆಜಿ ವಿಭಾಗದಲ್ಲಿ ಪಂಗಲ್‌ ಪ್ರಥಮ ಬಾರಿಗೆ ಕಣಕ್ಕಿಳಿಯುತ್ತಿದ್ದರೆ, ಶಿವ ಥಾಪ 60 ಕೆಜಿ ವಿಭಾಗದಲ್ಲಿ ದಾಖಲೆ ಸತತ ನಾಲ್ಕನೇ ಬಾರಿ ಪದಕದ ಗುರಿ ಇಟ್ಟುಕೊಂಡಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಅಸ್ಸಾಂ ಮೂಲದ ಥಾಪ ಇದಕ್ಕೂ ಮೊದಲು 2013ರ ಆವೃತ್ತಿಯಲ್ಲಿ ಚಿನ್ನ, 2015ರಲ್ಲಿ ಕಂಚು ಮತ್ತು 2017ರಲ್ಲಿ ಬೆಳ್ಳಿ ಪದಕ ಜಯಿಸಿದ್ದರು. 

ಮಾಜಿ ವಿಶ್ವ ಜೂನಿಯರ್‌ ಚಾಂಪಿಯನ್‌ ಮತ್ತು ಸ್ಟ್ರ್ಯಾಂಡ್ಜಾ ಮೆಮೋರಿಯಲ್‌ ಕಪ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನಿಖತ್‌ ಜರೀನ್‌ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರೆ, ಎರಡು ಬಾರಿಯ ಯೂತ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರ ಗೆದ್ದಿರುವ ನೀತು 48 ಕೆಜಿ ವಿಭಾಗದಲ್ಲಿ ಅಖಾಡಕ್ಕಿಳಿಯುತ್ತಿದ್ದಾರೆ. ಮನಿಶಾ 54 ಕೆಜಿ ವಿಭಾಗದಲ್ಲಿ ಸ್ಪರ್ಧೆ ಮಾಡಲಿದ್ದರೆ, ಸಿಮ್ರಂಜಿತ್‌ ಕೌರ್‌ (64 ಕೆಜಿ), ಲಾವ್ಲಿನಾ ಬೊರ್ಗೊಹೈನ್‌ (69 ಕೆಜಿ), ನೂಪುರ್‌ (75 ಕೆಜಿ) ಮತ್ತು ಪೂಜಾ ರಾಣಿ (81 ಕೆಜಿ) ಹಾಗೂ ಸೀಮಾ ಪೂನಿಯಾ (81+ಕೆಜಿ) ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದು, ಭಾರತದ ಪದಕ ಭರವಸೆ ಎನಿಸಿಕೊಂಡಿದ್ದಾರೆ. 
 
ಪುರುಷರ ವಿಭಾಗದಲ್ಲಿ 49 ಕೆಜಿ ವಿಭಾಗದಲ್ಲಿ ದೀಪಕ್‌ ಸಿಂಗ್‌ ಮತ್ತು 56 ಕೆಜಿ ವಿಭಾಗದಲ್ಲಿ ಕವಿಂದರ್‌ ಸಿಂಗ್‌ ಬಿಷ್ತ್‌ ಪದಕ ಗೆಲ್ಲುವ ನೆಚ್ಚಿನ ಬಾಕ್ಸರ್‌ಗಳಾಗಿದ್ದಾರೆ. ಇವರಲ್ಲದೆ, ರೋಹಿತ್‌ ಟೊಕಾಸ್‌ (64 ಕೆಜಿ), ಆಶಿಶ್‌ (69 ಕೆಜಿ), ಆಶಿಶ್‌ ಕುಮಾರ್‌ (75 ಕೆಜಿ), ಬ್ರಿಜೇಶ್‌ ಯಾದವ್‌ (81 ಕೆಜಿ) ಮತ್ತು ನಮನ್‌ ತನ್ವರ್‌ (91 ಕೆಜಿ) ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳು ತಲಾ ಒಂದು ಚಿನ್ನ, ಬೆಳ್ಳಿ ಮತ್ತು ಐದು ಕಂಚು ಸೇರಿ ಏಳು ಪದಕ ಜಯಿಸಿದ್ದರು.