ಏಷ್ಯನ್ ಗೇಮ್ಸ್ 2018; “ವೂಶೂ” ಕ್ರೀಡೆಯಲ್ಲಿ ಭಾರತಕ್ಕೆ ನಾಲ್ಕು ಕಂಚಿನ ಪದಕ

0
937

ಇಂಡೋನೇಷ್ಯಾದಲ್ಲಿ ಸಾಗುತ್ತಿರುವ ಏಷ್ಯನ್ ಗೇಮ್ಸ್ 2018 ಟೂರ್ನಮೆಂಟ್‌ನಲ್ಲಿ ನಾಲ್ಕನೇ ದಿನವೂ ಭಾರತೀಯ ಸ್ಪರ್ಧಿಗಳ ಪದಕ ಬೇಟೆ ಮುಂದುವರಿದಿದೆ.

ಹೊಸದಿಲ್ಲಿ: ಇಂಡೋನೇಷ್ಯಾದಲ್ಲಿ ಸಾಗುತ್ತಿರುವ ಏಷ್ಯನ್ ಗೇಮ್ಸ್ 2018 ಟೂರ್ನಮೆಂಟ್‌ನಲ್ಲಿ ನಾಲ್ಕನೇ ದಿನವೂ ಭಾರತೀಯ ಸ್ಪರ್ಧಿಗಳ ಪದಕ ಬೇಟೆ ಮುಂದುವರಿದಿದೆ. 

ಇದರಂತೆ ವೂಶೂ ವಿಭಾಗದಲ್ಲಿ ಭಾರತದ ಸಂತೋಷ್ ಕುಮಾರ್, ರೋಷಿಬಿನಾ ದೇವಿ, ಸೂರ್ಯ ಭಾನು ಪ್ರತಾಪ್ ಸಿಂಗ್ ಮತ್ತು ನರೆಂದರ್ ಗ್ರೆವಾಲ್ ಕಂಚಿನ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ. 

ಬುಧವಾರ ನಡೆದ ಪುರುಷ ಸಂಡ 56 ಕೆ.ಜಿ ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ವಿಯೆಟ್ನಾಂದ ಟ್ರುವಾಂಗ್ ಜಿಯಾಂಗ್ ಬುಯಿ ವಿರುದ್ಧ ಮಣಿದ ಸಂತೋಷ್ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. 

ಇದಕ್ಕೂ ಮೊದಲು ಮಹಿಳೆಯರ ಸಂಡ 60 ಕೆ.ಜಿ ವಿಭಾಗದ ಸೆಮೀಸ್ ಹಣಾಹಣಿಯಲ್ಲಿ ಚೀನಾದ ಕಾಯ್ ಯಿಂಗ್‌ಯಿಂಗ್ ವಿರುದ್ಧ ರೋಷಿಬಿನಾ ದೇವಿ ಶರಣಾಗಿದ್ದರು. 

ಇನ್ನು ಪುರುಷರ 60 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಇರಾನ್‌ನ ಇರ್ಫಾನ್ ಅಹಂಗಾರಿಯನ್ ವಿರುದ್ಧ ಮಣಿದಿರುವ ಸೂರ್ಯ ಭಾನು ಪ್ರತಾಪ್ ಸಿಂಗ್ ಸಹ ಕಂಚಿನ ಪದಕ ಗೆದ್ದಿದ್ದಾರೆ. 

ಅಂತಿಮವಾಗಿ ನರೆಂದರ್ ಗ್ರೆವಾಲ್ ಸಹ ಸೆಮಿಫೈನಲ್‌ನಲ್ಲಿ ಸೋಲನ್ನಪ್ಪುವುದರೊಂದಿಗೆ ಭಾರತಕ್ಕೆ ವೂಶೂ ವಿಭಾಗದಲ್ಲಿ ನಾಲ್ಕನೇ ಕಂಚಿನ ಪದಕ ದೊರಕಿತು. ಪುರುಷರ ಸಂಡ 65 ಕೆ.ಜಿ ವಿಭಾಗದ ಸೆಮಿಫೈನಲ್ ಹೋರಾಟದಲ್ಲಿ ಇರಾನ್‌ನ ಫಾರೌದ್ ಜಫಾರಿ ವಿರುದ್ಧ ಭಾರತೀಯ ಸ್ಪರ್ಧಿ ಪರಾಭವಗೊಂಡರು. 

ಇದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇದರಲ್ಲಿ ನಾಲ್ಕು ಚಿನ್ನ, ಮೂರು ಬೆಳ್ಳಿ ಹಾಗೂ ಎಂಟು ಕಂಚಿನ ಪದಕಗಳು ಸೇರಿವೆ.