ಏಷ್ಯನ್ ವೈಯಕ್ತಿಕ ಸ್ಕ್ವಾಷ್ ಚಾಂಪಿ ಯನ್ಷಿಪ್ ನಲ್ಲಿ ಭಾರತದ ಸೌರವ್ ಘೋಷಾಲ್ ಮತ್ತು ಜೋಷ್ನಾ ಚಿಣ್ಣಪ್ಪ ಅವರು ಮೇ 5 ರ ಭಾನುವಾರ ರಾತ್ರಿ ಮಲೇಷ್ಯಾದ ಹಾಂಕಾಂಗ್ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ಮೂಲಕ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ನವದೆಹಲಿ (ಪಿಟಿಐ): ಏಷ್ಯನ್ ವೈಯಕ್ತಿಕ ಸ್ಕ್ವಾಷ್ ಚಾಂಪಿ ಯನ್ಷಿಪ್ ನಲ್ಲಿ ಭಾರತದ ಸೌರವ್ ಘೋಷಾಲ್ ಮತ್ತು ಜೋಷ್ನಾ ಚಿಣ್ಣಪ್ಪ ಅವರು ಮೇ 5 ರ ಭಾನುವಾರ ರಾತ್ರಿ ಮಲೇಷ್ಯಾದ ಹಾಂಕಾಂಗ್ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ಮೂಲಕ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಅಗ್ರಶ್ರೇಯಾಂಕಿತ ಆಟಗಾರ ಸೌರವ್ 11–9, 11–2, 11–8 ನೇರ ಗೇಮ್ಗಳಿಂದ ಹಾಂಕಾಂಗ್ನ ಲಿಯೊ ಅವು ಚುನ್ ಮಿಂಗ್ ಅವರನ್ನು ಮಣಿಸಿದರು. ಈ ಮೂಲಕ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ ಎಂಬ ಹಿರಿಮೆಗೆ ಭಾಜನರಾದರು.
ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಸೌರವ್ ಮತ್ತು ಚಾಂಪಿಯನ್ಷಿಪ್ನಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿದ್ದ ಮಿಂಗ್, ಮೊದಲ ಗೇಮ್ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 9–9 ಸಮಬಲ ಕಂಡುಬಂತು. ಈ ಹಂತದಲ್ಲಿ ಚುರುಕಿನ ಡ್ರಾಪ್ಗಳ ಮೂಲಕ ಎರಡು ಪಾಯಿಂಟ್ಸ್ ಬುಟ್ಟಿಗೆ ಹಾಕಿಕೊಂಡ ಭಾರತದ ಆಟಗಾರ ಸಂಭ್ರಮಿಸಿದರು.
ಹೋದ ವರ್ಷ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಮಿಂಗ್, ಎರಡನೇ ಗೇಮ್ನಲ್ಲಿ ತಿರುಗೇಟು ನೀಡಬಹುದು ಎಂಬ ನಿರೀಕ್ಷೆಯೂ ಹುಸಿಯಾಯಿತು. ಅಮೋಘ ಸರ್ವ್ ಮತ್ತು ಚುರುಕಿನ ರಿಟರ್ನ್ಗಳ ಮೂಲಕ ಲೀಲಾಜಾಲವಾಗಿ ಪಾಯಿಂಟ್ಸ್ ಗಳಿಸಿದ ಘೋಷಾಲ್ ಏಕಪಕ್ಷೀಯವಾಗಿ ಗೇಮ್ ಗೆದ್ದು 2–0 ಮುನ್ನಡೆ ಪಡೆದರು.
ಮೂರನೇ ಗೇಮ್ನಲ್ಲೂ ಮಿಂಚಿನ ಸಾಮರ್ಥ್ಯ ತೋರಿದ ಭಾರತದ ಆಟ ಗಾರ ಎದುರಾಳಿಯ ಜಯದ ಕನಸಿಗೆ ತಣ್ಣೀರು ಸುರಿದರು.
ಎರಡನೇ ಶ್ರೇಯಾಂಕದ ಆಟಗಾರ್ತಿ ಜೋಷ್ನಾ 11–5, 8–11, 11–6, 11–6ರಲ್ಲಿ ಹಾಂಕಾಂಗ್ನ ಅಗ್ರ
ಶ್ರೇಯಾಂಕದ ಆಟಗಾರ್ತಿ ಆ್ಯನಿ ಅವುಗೆ ಆಘಾತ ನೀಡಿದರು.
ಜೋಷ್ನಾ, ಚಾಂಪಿಯನ್ಷಿಪ್ನಲ್ಲಿ ಗೆದ್ದ ಸತತ ಎರಡನೇ ಪ್ರಶಸ್ತಿ ಇದಾಗಿದೆ. 2017ರಲ್ಲಿ ಚೆನ್ನೈಯಲ್ಲಿ ನಡೆದಿದ್ದ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ಅವರು ಭಾರತದ ದೀಪಿಕಾ ಪಳ್ಳಿಕಲ್ ಎದುರು ಗೆದ್ದು ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದ್ದರು.
ಮೊದಲ ಗೇಮ್ನಲ್ಲಿ ಮಿಂಚಿನ ಸಾಮರ್ಥ್ಯ ತೋರಿದ ಜೋಷ್ನಾ ಎರ ಡನೇ ಗೇಮ್ನಲ್ಲಿ ನಿರಾಸೆ ಕಂಡರು. ಇದರಿಂದ ಎದೆಗುಂದದ ಭಾರತದ ಆಟಗಾರ್ತಿ ನಂತರದ ಎರಡು ಗೇಮ್ ಗಳಲ್ಲಿ ಗುಣಮಟ್ಟದ ಸಾಮರ್ಥ್ಯ ತೋರಿ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.