ಏಷ್ಯನ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಇತಿಹಾಸ ಬರೆದ ಲಕ್ಷ್ಯ ಸೇನ್‌

0
21

ಭಾರತದ ಭವಿಷ್ಯದ ತಾರೆ ಹಾಗೂ ಕಿರಿಯರ ವಿಭಾಗದ ಮಾಜಿ ನಂ.1 ಆಟಗಾರ ಲಕ್ಷ್ಯ ಸೇನ್‌, ಇಲ್ಲಿ ಮುಕ್ತಾಯಗೊಂಡ ಏಷ್ಯನ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಸಾಧನೆ ಮಾಡಿದ್ದಾರೆ.

ಜಕಾರ್ತ: ಭಾರತದ ಭವಿಷ್ಯದ ತಾರೆ ಹಾಗೂ ಕಿರಿಯರ ವಿಭಾಗದ ಮಾಜಿ ನಂ.1 ಆಟಗಾರ ಲಕ್ಷ್ಯ ಸೇನ್‌, ಇಲ್ಲಿ ಮುಕ್ತಾಯಗೊಂಡ ಏಷ್ಯನ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಸಾಧನೆ ಮಾಡಿದ್ದಾರೆ. 

ಈ ಮೂಲಕ 53 ವರ್ಷಗಳ ಬಳಿಕ ಏಷ್ಯನ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಚಿನ್ನದ ಪದಕ ಗೆದ್ದು ಕೊಡುವ ಮೂಲಕ ಇತಿಹಾಸ ಬರೆದಿದ್ದಾರೆ. 

ಜುಲೈ 22 ರ ಭಾನುವಾರ ನಡೆದ ಹೈ ವೋಲ್ಟೇಜ್‌ ಫೈನಲ್‌ ಪಂದ್ಯದಲ್ಲಿ ನಿಯಂತ್ರಣದ ಆಟವಾಡಿದ 16 ವರ್ಷದ ತಾರೆ ಲಕ್ಷ್ಯ ಸೇನ್‌, 21-19, 21-18 ಅಂತರದ ನೇರ ಗೇಮ್‌ಗಳಿಂದ ಕಿರಿಯರ ವಿಭಾಗದಲ್ಲಿ ಹಾಲಿ ನಂ.1 ಆಟಗಾರ ಥಾಯ್ಲೆಂಡ್‌ನ ಕುನ್ಲಾವುತ್‌ ವಿಟಿಡ್ಸರ್ನ್‌ ಅವರನ್ನು ನೇರ ಗೇಮ್‌ಗಳಿಂದ ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದರು. 2016ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಇದೇ ಟೂರ್ನಿಯಲ್ಲಿ 14 ವರ್ಷವಿದ್ದ ಲಕ್ಷ್ಯ ಸೇನ್‌ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಸೆಮಿಫೈನಲ್‌ನಲ್ಲಿ ಚೀನಾದ ಆಟಗಾರ ಸನ್‌ ಫೆಕ್ಸಿಯಾಂಗ್‌ ಎದುರು 12-21, 16-21 ಅಂತರದ ಗೇಮ್‌ಗಳಿಂದ ನಿರಾಸೆ ಅನುಭವಿಸಿದ್ದರು. 

ಇದೀಗ ಚಾಂಪಿಯನ್‌ಷಿಪ್‌ ಗೆಲುವಿನೊಂದಿಗೆ ಜೂನಿಯರ್‌ ಏಷ್ಯನ್‌ ಬ್ಯಾಡ್ಮಿಂಟನ್‌ನ ಸಿಂಗಲ್ಸ್‌ ವಿಭಾಗದಲ್ಲಿ ಸ್ವರ್ಣ ಗೆದ್ದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೂ ಲಕ್ಷ್ಯ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಪಿ.ವಿ ಸಿಂಧೂ ಮತ್ತು ಗೌತಮ್‌ ಥಕ್ಕರ್‌ ಕ್ರಮವಾಗಿ 2012 ಮತ್ತು 1965ರಲ್ಲಿ ಪ್ರತ್ಯೇಕ ಸಿಂಗಲ್ಸ್‌ ವಿಭಾಗಗಳಲ್ಲಿ ಚಿನ್ನ ಗೆದ್ದ ಸಾಧನೆ ಮೆರೆದಿದ್ದರು. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತಕ್ಕೆ 1965ರ ಬಳಿಕ ಸಿಕ್ಕ ಮೊದಲ ಸ್ವರ್ಣ ಎಂಬುದು ವಿಶೇಷ. 

ಲಕ್ಷ್ಯ ಸೇನ್‌, ಸೆಮಿಫೈನಲ್‌ ಪಂದ್ಯದಲ್ಲಿ ನಾಲ್ಕನೇ ಶ್ರೇಯಾಂಕಿತ ಆಟಗಾರ ಇಂಡೊನೇಷ್ಯಾದ ಇಕ್ಷಾನ್‌ ಲಿಯೊನಾರ್ಡೊ ಇಮ್ಯಾನುಯೆಲ್‌ ರುಂಬೇ ಎದುರು 21-7, 21-14 ಅಂತರದ ನೇರ ಗೇಮ್‌ಗಳ ಅಧಿಕಾರಯುತ ಜಯ ದಾಖಲಿಸಿದ್ದರು. 2011ರಲ್ಲಿ ಟಾರ್ಗೆಟ್‌ ಒಲಿಂಪಿಕ್‌ ಪೋಡಿಯಂ ಯೋಜನೆಯಡಿ ಉದಯಿಸಿದ ಪ್ರತಿಭೆ ಲಕ್ಷ್ಯ ಸೇನ್‌, ಇದೇ ಇಂಡೋನೇಷ್ಯಾದ ಎದುರಾಳಿ ವಿರುದ್ಧ ಫೈನಲ್‌ನಲ್ಲಿ ಗೆದ್ದು, ತಮ್ಮ 11ನೇ ವಯಸ್ಸಿನಲ್ಲೇ ಸಿಂಗಾಪುರದಲ್ಲಿ ಪಿಪಿಬಿಎ ಟೂರ್ನಿಯ ಚಾಂಪಿಯನ್‌ ಪಟ್ಟ ಪಡೆದಿದ್ದರು. 

ಬೆಂಗಳೂರಿನಲ್ಲಿರುವ ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯಲ್ಲಿ ಅನುಭವಿ ಕೋಚ್‌ ವಿಮಲ್‌ ಕುಮಾರ್‌ ಅವರ ಗರಡಿಯಲ್ಲಿ ಪಳಗಿರುವ ಲಕ್ಷ್ಯ ಸೇನ್‌, ಭವಿಷ್ಯದಲ್ಲಿ ಭಾರತಕ್ಕೆ ಒಲಿಂಪಿಕ್‌ ಪದಕ ಗೆದ್ದುಕೊಡಬಲ್ಲ ಭರವಸೆಯಾಗಿದ್ದಾರೆ.