ಏಷ್ಯನ್‌ ಗೇಮ್ಸ್‌ಗೆ ಕರ್ನಾಟಕದ ಡಾ. ವರ್ಷಾ

0
23

ಇಂಡೊನೇಷ್ಯಾ ಜಕಾರ್ತ ಮತ್ತು ಪಲೆಂಬಾಂಗ್‌ನಲ್ಲಿ ಆ.18ರಿಂದ ಸೆ.2ರವರೆಗೆ ನಡೆಯಲಿರುವ ಏಷ್ಯನ್‌ ಕ್ರೀಡಾಕೂಟದಲ್ಲಿ ಕರ್ನಾಟಕದ ವೈದ್ಯರೊಬ್ಬರು ಸ್ಕೇಟಿಂಗ್‌ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಬೆಂಗಳೂರು: ಇಂಡೊನೇಷ್ಯಾ ಜಕಾರ್ತ ಮತ್ತು ಪಲೆಂಬಾಂಗ್‌ನಲ್ಲಿ ಆ.18ರಿಂದ ಸೆ.2ರವರೆಗೆ ನಡೆಯಲಿರುವ ಏಷ್ಯನ್‌ ಕ್ರೀಡಾಕೂಟದಲ್ಲಿ ಕರ್ನಾಟಕದ ವೈದ್ಯರೊಬ್ಬರು ಸ್ಕೇಟಿಂಗ್‌ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. 

ಬಾಲ್ಯದ ಆಸಕ್ತಿ ಸ್ಕೇಟಿಂಗ್‌ ಜತೆಗೆ ವೈದ್ಯಕೀಯ ವಿಭಾಗದಲ್ಲಿ ಎಂಡಿ ಆದರೂ ತನ್ನ ಸಾಹಸ ಹಾದಿಯನ್ನು ಕೈಬಿಡದ ಡಾ. ವರ್ಷಾ ತಮ್ಮ ಮೂವತ್ತನೇ ವರ್ಷದಲ್ಲಿ ಎರಡನೇ ಬಾರಿಗೆ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತವನ್ನು ಮತ್ತೊಮ್ಮೆ ಪ್ರತಿನಿಧಿಸುವ ಸೌಭಾಗ್ಯ ಗಳಿಸಿದ್ದಾರೆ. ಇದರೊಂದಿಗೆ ಈ ಬಾರಿಯ ಏಷ್ಯನ್‌ ಕ್ರೀಡಾಕೂಟದ ಸ್ಕೇಟಿಂಗ್‌ ವಿಭಾಗದಲ್ಲಿ ವೈದ್ಯರೊಬ್ಬರು ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದು ನಮ್ಮೆಲ್ಲರ ಸಂತಸಕ್ಕೆ ಕಾರಣವಾಗಿದೆ. 

ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ವರ್ಷಾ ಮೈಸೂರಿನ ತಾರಾ ಹಾಗೂ ಆರ್‌. ಶ್ರೀರಾಮಕೃಷ್ಣ ಅವರ ಮುದ್ದಿನ ಮಗಳು. ಮೈಕ್ರೋ ಬಯಾಲಜಿಯಲ್ಲಿ ಎಂಡಿ ಪದವಿ ಗಳಿಸಿರುವ ವರ್ಷಾ, ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ. ರೋಲರ್‌ ಸ್ಕೇಟಿಂಗ್‌ನಲ್ಲಿ ಏಕಲವ್ಯ ಪ್ರಶಸ್ತಿ ವಿಜೇತರಾಗಿರುವ ವರ್ಷಾ, ಅನೇಕ ಅಂತಾರಾಷ್ಟ್ರೀಯ ಪ್ರತಿಭೆಗಳನ್ನು ಬೆಳಕಿಗೆ ತಂದ ಕೆ. ಶ್ರೀಕಾಂತ್‌ ರಾವ್‌ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. 21 ಬಾರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ವರ್ಷಾ, 44 ಚಿನ್ನ, 17 ಬೆಳ್ಳಿ ಹಾಗೂ 6 ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ. 

ಇದರ ಜತೆಗೆ 9 ಬಾರಿ ರಾಷ್ಟ್ರೀಯ ಚಾಂಪಿಯನ್‌ ಪಟ್ಟ ಗೆದ್ದ ಕೀರ್ತಿ ವರ್ಷಾ ಅವರ ಪಾಲಿಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಸಲ ಭಾರತವನ್ನು ಪ್ರತಿನಿಧಿಸಿರುವ ವರ್ಷಾ, 3 ಬಾರಿ ವಿಶ್ವ ಚಾಂಪಿಯನ್‌ಷಿಪ್‌, 5 ಬಾರಿ ಏಷ್ಯನ್‌ ಚಾಂಪಿಯನ್‌ಷಿಪ್‌, 2 ಏಷ್ಯನ್‌ ಗೇಮ್ಸ್‌ (ಬೇಸಿಗೆ ಹಾಗೂ ಚಳಿಗಾಲ), ಹಾಗೂ ಒಂದು ಬಾರಿ ವಿಶ್ವ ಗೇಮ್ಸ್‌ನಲ್ಲಿ ಭಾಗಿಯಾಗಿದ್ದಾರೆ. 2001ರಲ್ಲಿ ತೈವಾನ್‌ನಲ್ಲಿ ನಡೆದ 10ನೇ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ವರ್ಷಾ, ಐಸ್‌ ಸ್ಕೇಟಿಂಗ್‌ನಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 4 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದಿದ್ದಾರೆ. ವರ್ಷಾ ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ 2012ರ ಏಕಲವ್ಯ ಪ್ರಶಸಿ ಯನ್ನು ನೀಡಿ ಗೌರವಿಸಿದೆ. 

2010ರ ನಂತರ ಏಷ್ಯನ್‌ ಗೇಮ್ಸ್‌ನಲ್ಲಿ ಎರಡನೇ ಬಾರಿಗೆ ಪಾಲ್ಗೊಳ್ಳುತ್ತಿರುವ ಕುರಿತು ‘ವಿಜಯ ಕರ್ನಾಟಕ’ದೊಂದಿಗೆ ಪ್ರತಿಕ್ರಿಯಿಸಿದ ಡಾ. ವರ್ಷಾ, ”ಕಳೆದ ನಾಲ್ಕು ವರ್ಷಗಳಿಂದ ಏಷ್ಯನ್‌ ಗೇಮ್ಸ್‌ಗಾಗಿ ವೈದ್ಯಕೀಯ ವೃತ್ತಿಯ ಜತೆಗೆ ಪ್ರವೃತ್ತಿಯಲ್ಲೂ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ದೇಶಕ್ಕೆ ಸ್ವರ್ಣ ಪದಕ ತಂದುಕೊಡುವುದು ನನ್ನ ಹೆಗ್ಗುರಿಯಾಗಿದೆ. ಈ ನಿಟ್ಟಿನಲ್ಲಿ ಸರ್ವಪ್ರಯತ್ನ ನಡೆಸಲಿದ್ದೇನೆ, ” ಎಂದು ವಿಶ್ವಾಸ ವ್ಯಕ್ತಪಡಿಸಿದರು. 

2010ರಲ್ಲಿ ರೋಲರ್‌ ಸ್ಕೇಟಿಂಗ್‌ ಸ್ಪೀಡ್‌ ವಿಭಾಗದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ವರ್ಷಾ, 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಆದರೆ 2014ರಲ್ಲಿ ರೋಲರ್‌ ಸ್ಕೇಟಿಂಗ್‌ ಅನ್ನು ಗೇಮ್ಸ್‌ನಿಂದ ಹೊರಗಿಡಲಾಗಿತ್ತು. ಆದರೆ ಈಗ 2018ರ ಕೂಟಕ್ಕೆ ಮತ್ತೆ ಸೇರ್ಪಡೆ ಮಾಡಲಾಗಿದ್ದು, ಭಾರತ ಪದಕ ನಿರೀಕ್ಷಿಸುತ್ತಿದೆ.