ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ : ಗೋಮತಿ ಮಾರಿಮುತ್ತುಗೆ ಚಿನ್ನದ ಪದಕ

0
298

ಮಿಂಚಿನ ಗತಿಯಲ್ಲಿ ಓಡಿದ “ಗೋಮತಿ ಮಾರಿಮುತ್ತು” ಅವರು ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಈ ಬಾರಿ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು.

ದೋಹಾ: ಮಿಂಚಿನ ಗತಿಯಲ್ಲಿ ಓಡಿದ ಗೋಮತಿ ಮಾರಿಮುತ್ತು ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ  ಭಾರತಕ್ಕೆ ಈ ಬಾರಿ ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು.

ಏಪ್ರೀಲ್ 22 ರ ಸೋಮವಾರ ನಡೆದ ಮಹಿಳೆಯರ 800 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಟ್ರ್ಯಾಕ್‌ಗೆ ಇಳಿದಿದ್ದ ಗೋಮತಿ, ಎರಡು ನಿಮಿಷ 02.70 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಸರಿತಾ ಗಾಯಕವಾಡ್‌ ಮಹಿಳಾ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದರು. ಅವರು 57.22 ಸೆಕೆಂಡುಗಳಲ್ಲಿ ನಿಗದಿತ ಗುರಿ ಕ್ರಮಿಸಿದರು.

ಪುರುಷರ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಕಣದಲ್ಲಿದ್ದ ಎಂ.ಪಿ.ಜಬೀರ್‌ ಕೂಡಾ ಕಂಚಿನ ಪದಕ ಗೆದ್ದರು. ಅವರು 49.13 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದರು. ಇದು ಜಬೀರ್‌ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಶಿವಪಾಲ್‌ ಸಿಂಗ್‌ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು. ಅವರಿಂದ 86.23 ಮೀಟರ್ಸ್‌ ಸಾಮರ್ಥ್ಯ ಮೂಡಿಬಂತು.

ಫೈನಲ್‌ಗೆ ದ್ಯುತಿ: ಮಹಿಳೆಯರ 100 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ದ್ಯುತಿ ಚಾಂದ್‌ ಫೈನಲ್ ಪ್ರವೇಶಿಸಿದರು.

ಎರಡನೇ ಸೆಮಿಫೈನಲ್‌ನಲ್ಲಿ ಅವರು 11.26 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ಮೂಲಕ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆ ಉತ್ತಮ ಪಡಿಸಿಕೊಂಡರು.

ಪುರುಷರ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅರೋಕ್ಯ ರಾಜೀವ್‌ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಫೈನಲ್‌ನಲ್ಲಿ ಅವರು 45.37 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿದರು.