ಏರ್‌ ಇಂಡಿಯಾದ 9,000 ಕೋಟಿ ಮೌಲ್ಯದ ಆಸ್ತಿ ಮಾರಾಟಕ್ಕೆ ಚಿಂತನೆ

0
369

ಸಾಲದ ಹೊರೆಯಿಂದ ತತ್ತರಿಸಿರುವ ಏರ್‌ ಇಂಡಿಯಾದ ಭೂಮಿ, ರಿಯಲ್‌ ಎಸ್ಟೇಟ್‌ ಆಸ್ತಿಗಳನ್ನು ಮಾರಾಟ ಮಾಡಿ 9,000 ಕೋಟಿ ರೂ. ಸಂಗ್ರಹಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.

ಹೊಸದಿಲ್ಲಿ : ಸಾಲದ ಹೊರೆಯಿಂದ ತತ್ತರಿಸಿರುವ ಏರ್‌ ಇಂಡಿಯಾದ ಭೂಮಿ, ರಿಯಲ್‌ ಎಸ್ಟೇಟ್‌ ಆಸ್ತಿಗಳನ್ನು ಮಾರಾಟ ಮಾಡಿ 9,000 ಕೋಟಿ ರೂ. ಸಂಗ್ರಹಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. 

55,000 ಕೋಟಿ ರೂ. ಸಾಲದ ಭಾರದಿಂದ  ಏರ್‌ ಇಂಡಿಯಾ ತತ್ತರಿಸಿದ್ದು, ಕಾರ್ಯಾಚರಣೆ ಬಂಡವಾಳಕ್ಕೂ ತೊಡಕಾಗಿದೆ. ಪರಿಸ್ಥಿತಿ ನಿಭಾಯಿಸಲು ಏರ್‌ ಇಂಡಿಯಾದ ಆಸ್ತಿ ಮಾರಾಟ ಮಾಡಲು ಸರಕಾರ ಚಿಂತನೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಳೆದ ವಾರ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಸಚಿವರ ಸಮಿತಿ ಸಭೆ ನಡೆದಿತ್ತು. ಏರ್‌ ಇಂಡಿಯಾದ 29,000 ಕೋಟಿ ರೂ. ಸಾಲವನ್ನು ಸ್ಪೆಷಲ್‌ ಪರ್ಪಸ್‌ ವೆಹಿಕಲ್‌(ಎಸ್‌ಪಿವಿ) ಸಂಸ್ಥೆಗೆ ವರ್ಗಾಯಿಸಲು ಸಮಿತಿ ಅನುಮೋದನೆ ನೀಡಿತ್ತು. ಇದರೊಟ್ಟಿಗೆ ಏರ್‌ ಇಂಡಿಯಾ ಒಡೆತನದ ಬಾಂಬೆಯಲ್ಲಿನ ಏರ್‌ಲೈನ್ಸ್‌ ಹೌಸ್‌, ದಿಲ್ಲಿಯಲ್ಲಿನ ರಿಯಾಲ್ಟಿ ಸೇರಿದಂತೆ ಇನ್ನಷ್ಟು ಆಸ್ತಿಗಳ ಮಾರಾಟಕ್ಕೆ ಚಿಂತನೆ ನಡೆದಿದೆ. 

ಏರ್‌ ಇಂಡಿಯಾ ಮಾರಾಟಕ್ಕೆ ಸರಕಾರ ನಡೆಸಿದ ಪ್ರಯತ್ನಗಳು ಫಲಿಸಿಲ್ಲ. ಶೇ.76ರಷ್ಟು ಷೇರುಗಳ ಮಾರಾಟಕ್ಕೆ ಸರಕಾರ ಉದ್ದೇಶಿಸಿದೆ.