ಏಕಕಾಲ ಚುನಾವಣೆಗೆ “ಕಾನೂನು ಆಯೋಗ” ಬೆಂಬಲ

0
440

ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಒಂದೇ ಬಾರಿ ಚುನಾವಣೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಕಾನೂನು ಆಯೋಗ ಬೆಂಬಲ ಸೂಚಿಸಿದೆ. ಈ ಕುರಿತು ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ.

ನವದೆಹಲಿ: ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಒಂದೇ ಬಾರಿ ಚುನಾವಣೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಕಾನೂನು ಆಯೋಗ ಬೆಂಬಲ ಸೂಚಿಸಿದೆ. ಈ ಕುರಿತು ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಲಾಗಿದೆ. ಏಕಕಾಲ ಚುನಾವಣೆಗೆ ಸಂವಿಧಾನ ಹಾಗೂ ಚುನಾವಣೆಗೆ ಸಂಬಂಧಿಸಿದ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ದೇಶದ ಅರ್ಧದಷ್ಟು ರಾಜ್ಯಗಳಿಗೆ ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಸಂವಿಧಾನ ತಿದ್ದುಪಡಿಯ ಅಗತ್ಯವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ 2019ರ ಲೋಕಸಭೆ ಚುನಾವಣೆ ಜತೆಗೆ 12 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣೆ ನಡೆಸಲು ಯಾವುದೇ ಅಡ್ಡಿ ಉಂಟಾಗುವುದಿಲ್ಲ. 2021ರ ಲೋಕಸಭಾ ಚುನಾವಣೆ ಜತೆಗೆ 16 ರಾಜ್ಯಗಳು ಹಾಗೂ ಪುದುಚೇರಿಯ ಚುನಾವಣೆ ನಡೆಸಬಹುದಾಗಿದೆ. ಇದು ಜಾರಿಗೆ ಬಂದರೆ ಐದು ವರ್ಷದಲ್ಲಿ ಎರಡು ಚುನಾವಣೆಗಳು ಮಾತ್ರ ನಡೆಯಲಿವೆ. ಏಕಕಾಲ ಚುನಾವಣೆಯಿಂದ ದೊಡ್ಡ ಪ್ರಮಾಣದಲ್ಲಿ ಸರ್ಕಾರದ ಹಣ ಉಳಿತಾಯ ವಾಗುತ್ತದೆ. ದೇಶದಲ್ಲಿ ಪದೇ ಪದೆ ಚುನಾವಣೆಗಳು ನಡೆಯುತ್ತಿದ್ದರೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಳ್ಳುತ್ತದೆ. ಆಡಳಿತ ಯಂತ್ರ ಭದ್ರತಾ ಸಿಬ್ಬಂದಿ ಮೇಲೆ ಹೊರೆ ಬೀಳುತ್ತದೆ. ಏಕಕಾಲ ಚುನಾವಣೆಯಿಂದ ಇದನ್ನು ತಡೆಯಬಹುದು ಎಂದು ಕಾನೂನು ಆಯೋಗ ಅಭಿಪ್ರಾಯಪಟ್ಟಿದೆ.

ಸಾಧ್ಯವಿಲ್ಲ ಎಂದಿದ್ದ ರಾವತ್: 2019ರ ಲೋಕಸಭೆ ಚುನಾವಣೆ ಜತೆಗೆ 12 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುವುದು ಬಹುತೇಕ ಅಸಾಧ್ಯ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ಒ.ಪಿ. ರಾವತ್ ಇತ್ತೀಚೆಗೆ ಅಭಿಪ್ರಾಯಪಟ್ಟಿದ್ದರು.