ಎಸ್- 400 ಟ್ರಯಂಫ್’ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ

0
625

ಅಮೆರಿಕದಿಂದ ಎದುರಾಗಿರುವ ಕಠಿಣ ನಿರ್ಬಂಧದ ನಡುವೆಯೂ ಭಾರತವು ರಷ್ಯಾದೊಂದಿಗೆ 40 ಸಾವಿರ ಕೋಟಿ ರೂ.ಗಳ ಎಸ್-400 ಟ್ರಯಂಫ್ ಕ್ಷಿಪಣಿ ಒಪ್ಪಂದಕ್ಕೆ ಅಕ್ಟೋಬರ್ 5 ರ ಶುಕ್ರವಾರ ಸಹಿ ಹಾಕಿದೆ. ಇದರಿಂದಾಗಿ ಅತ್ಯಂತ ಮಾರಕ ವಾಯು ಕ್ಷಿಪಣಿ ಹೊಂದಿರುವ ವಿಶ್ವದ 5 ರಾಷ್ಟ್ರಗಳಲ್ಲಿ ಭಾರತವು ಒಂದಾಗಲಿದೆ.

ನವದೆಹಲಿ: ಅಮೆರಿಕದಿಂದ ಎದುರಾಗಿರುವ ಕಠಿಣ ನಿರ್ಬಂಧದ ನಡುವೆಯೂ ಭಾರತವು ರಷ್ಯಾದೊಂದಿಗೆ 40 ಸಾವಿರ ಕೋಟಿ ರೂ.ಗಳ ಎಸ್-400 ಟ್ರಯಂಫ್ ಕ್ಷಿಪಣಿ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ. ಇದರಿಂದಾಗಿ ಅತ್ಯಂತ ಮಾರಕ ವಾಯು ಕ್ಷಿಪಣಿ ಹೊಂದಿರುವ ವಿಶ್ವದ 5 ರಾಷ್ಟ್ರಗಳಲ್ಲಿ ಭಾರತವು ಒಂದಾಗಲಿದೆ.

ರಕ್ಷಣಾ ಒಪ್ಪಂದಕ್ಕೆ ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ 19ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ‘ಎಸ್-400 ಟ್ರಯಂಫ್’ ಕ್ಷಿಪಣಿ ಖರೀದಿಗೆ ಸಹಿ ಮಾಡಿದ್ದಾರೆ. ಅಲ್ಲದೆ, ಉಭಯ ರಾಷ್ಟ್ರಗಳು ಇನ್ನಿತರೆ 20 ಮಹತ್ವದ ಅಂಶಗಳಿಗೆ ಸಹಿ ಹಾಕಿವೆ.

ಈ ಒಪ್ಪಂದವು 2020ರ ವೇಳೆಗೆ ಸಂಪೂರ್ಣವಾಗಲಿದ್ದು, ಸೈಬೀರಿಯಾದ ನೊವೊಸಿಬಿರ್ಸ್ಕ್ ಸಮೀಪ ಭಾರತೀಯ ಮೇಲ್ವಿಚಾರಣಾ ಕೇಂದ್ರವನ್ನು ನಿರ್ಮಿಸಲಾಗುತ್ತದೆ. ಇದಲ್ಲದೆ, ಪರಮಾಣು ಸಹಕಾರ, ಬಾಹ್ಯಾಕಾಶ ಸಹಕಾರ, ರೈಲ್ವೇ ಮತ್ತು ಸಾರಿಗೆ, ವಿದೇಶಾಂಗ ವ್ಯವಹಾರ ಸಂಬಂಧ, ರಸಗೊಬ್ಬರ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ 5 ಒಪ್ಪಂದಗಳಿಗೆ ಭಾರತ ಮತ್ತು ರಷ್ಯಾ ಸಹಿ ಹಾಕಿವೆ.

ಭಾರತಕ್ಕೆ ಸಹಕರಿಸಲು ಬದ್ಧ

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಮ್ಮ ಸಂಬಂಧಗಳೂ ಕೂಡ ಅಷ್ಟೇ ವೇಗವಾಗಿ ಬೆಳೆದಿವೆ. ಈ ಸಮಯದಲ್ಲಿ ನಮ್ಮ ದೇಶಗಳ ನಡುವಿನ ಸಂಬಂಧವು ಅತ್ಯಂತ ಶಕ್ತಿಯುತವಾಗಿ ಬದಲಾಗಲಿದೆ. ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಪಿಡುಗಿನ ವಿರುದ್ಧ ಹೋರಾಡಲು ಭಾರತಕ್ಕೆ ಸಹಕಾರ ನೀಡಲು ನಾವು ಒಪ್ಪಿದ್ದೇವೆ ಎಂದು ರಷ್ಯಾದ ಅಧ್ಯಕ್ಷ ಪುತಿನ್‌ ಅವರು ಪ್ರಧಾನಿ ಮೋದಿಯವರೊಂದಿಗಿನ ಜಂಟಿ ಹೇಳಿಕೆಯಲ್ಲಿ ತಿಳಿಸಿದರು.

ದೇಶದ ಬೆಳವಣಿಗೆಯಲ್ಲಿ ರಷ್ಯಾ ಪಾತ್ರ ಮಹತ್ತರ

ಇನ್ನು ನರೇಂದ್ರ ಮೋದಿ ಅವರು ಮಾತನಾಡಿ, ರಕ್ಷಣಾ ವ್ಯವಸ್ಥೆಯಲ್ಲಿ ದಶಕಗಳಿಂದಲೂ ಭಾರತಕ್ಕೆ ಅಗತ್ಯ ಶಸ್ತ್ರಾಸ್ತ್ರಗಳ ಪೂರೈಕೆಯಲ್ಲಿ ರಷ್ಯಾ ಪ್ರಮುಖ ಪಾತ್ರ ವಹಿಸಿದೆ. ರಷ್ಯಾವು ಎಲ್ಲ ಸಮಯದಲ್ಲೂ ಭಾರತದ ಜತೆ ನಿಂತಿದೆ ಮತ್ತು ಭಾರತದ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಹೇಳಿದರು.

ಅಮೆರಿಕ ನಿರ್ಬಂಧ ಸಾಧ್ಯತೆ

ರಷ್ಯಾ, ಉತ್ತರ ಕೊರಿಯಾ ಅಥವಾ ಇರಾನ್‌ ಜತೆ ಮಹತ್ವದ ಒಪ್ಪಂದ ವ್ಯವಹಾರ, ಶಸ್ತ್ರಾಸ್ತ್ರಗಳನ್ನು ಖರೀದಿಸದಂತೆ ಹೇಳಿರುವ ಅಮೆರಿಕ, ತನ್ನ ‘ಕಾಟ್ಸಾ’ ಕಾಯ್ದೆಯಡಿ ಅಂತಹ ದೇಶಗಳ ಮೇಲೆ ನಿರ್ಬಂಧ ಹೇರುವ ಸಾಧ್ಯತೆ ಇದೆ. ಅಮೆರಿಕದ ಎಚ್ಚರಿಕೆ ನಡುವೆಯೂ ರಷ್ಯಾದೊಂದಿಗೆ ಭಾರತ ಮಾಡಿಕೊಂಡಿರುವ ಈ ಒಪ್ಪಂದವು ಕುತೂಹಲಕಾರಿಯಾಗಿರುವುದರೊಂದಿಗೆ ಭಾರತದ ರಕ್ಷಣಾ ಸಾಮರ್ಥ್ಯವನ್ನು ಈ ಒಪ್ಪಂದ ಬಲಪಡಿಸಲಿದೆ. (ಏಜೆನ್ಸೀಸ್)