ಎಸ್‌ಬಿಐ: ‘ಯೋನೊ’ ಮೊಬೈಲ್‌ ಆ್ಯಪ್‌ ಮೂಲಕ ಕಾರ್ಡ್‌ರಹಿತ ಎಟಿಎಂ ವಹಿವಾಟು

0
511

ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಡೆಬಿಟ್‌ ಕಾರ್ಡ್‌ ಬದಲಿಗೆ ಬ್ಯಾಂಕ್‌ನ ‘ಯೋನೊ’ ಮೊಬೈಲ್‌ ಆ್ಯಪ್‌ ಮೂಲಕವೇ ಎಟಿಎಂಗಳಿಂದ ಸುರಕ್ಷಿತವಾಗಿ ಹಣ ಪಡೆಯುವ ಸೌಲಭ್ಯಕ್ಕೆ ಚಾಲನೆ ನೀಡಿದೆ.

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಡೆಬಿಟ್‌ ಕಾರ್ಡ್‌ ಬದಲಿಗೆ ಬ್ಯಾಂಕ್‌ನ ‘ಯೋನೊ’ ಮೊಬೈಲ್‌ ಆ್ಯಪ್‌ ಮೂಲಕವೇ ಎಟಿಎಂಗಳಿಂದ ಸುರಕ್ಷಿತವಾಗಿ ಹಣ ಪಡೆಯುವ ಸೌಲಭ್ಯಕ್ಕೆ ಚಾಲನೆ ನೀಡಿದೆ.

‘ಯೋನೊ ಕ್ಯಾಷ್‌’ ಹೆಸರಿನ ಈ ಸೌಲಭ್ಯವನ್ನು ಶುಕ್ರವಾರ ಜಾರಿಗೆ ತರಲಾಗಿದೆ. ಈ ಸೌಲಭ್ಯ ಒಳಗೊಂಡಿರುವ ಬ್ಯಾಂಕ್‌ನ ಎಟಿಎಂಗಳನ್ನು ‘ಯೋನೊ ಕ್ಯಾಷ್‌ ಪಾಯಿಂಟ್‌’ ಎಂದು ಗುರುತಿಸಲಾಗಿದೆ. ಡೆಬಿಟ್‌ ಕಾರ್ಡ್‌ ಬಳಸದ ಗರಿಷ್ಠ ಸುರಕ್ಷತೆಯ ಈ ಸೌಲಭ್ಯವು ಬ್ಯಾಂಕ್‌ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಒದಗಿಸಲಿದೆ.

ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡಿರುವ ಯೋನೊ ಆ್ಯಪ್‌ನಲ್ಲಿ (You Only Need One–YONO) ಇರುವ ಕ್ವಿಕ್‌ ಲಿಂಕ್‌ ವಿಭಾಗದಲ್ಲಿ ಯೋನೊ ಕ್ಯಾಷ್‌ ವಿಭಾಗಕ್ಕೆ ಹೋಗಿ ಹಣ ಪಡೆಯುವ ಪ್ರಕ್ರಿಯೆ ಆರಂಭಿಸಬೇಕು. 6 ಅಂಕಿಯ ರಹಸ್ಯ ಸಂಖ್ಯೆ (ಯೋನೊ ಕ್ಯಾಷ್‌ ಪಿನ್‌) ನಮೂದಿಸಬೇಕು. ಇದಕ್ಕೆ ಪ್ರತಿಯಾಗಿ ಗ್ರಾಹಕರ ಮೊಬೈಲ್‌ಗೆ 6 ಅಂಕಿಯ ಇನ್ನೊಂದು ಸಂದೇಶವು ಎಸ್‌ಎಂಎಸ್‌ ಮೂಲಕ ಬರುತ್ತದೆ. ಹತ್ತಿರದಲ್ಲಿನ ‘ಯೋನೊ ಕ್ಯಾಷ್‌ ಪಾಯಿಂಟ್‌’ ಎಟಿಎಂನಲ್ಲಿ ಕ್ಯಾಷ್‌ ಪಿನ್‌ ಮತ್ತು ಎಸ್‌ಎಂಎಸ್‌ ಮೂಲಕ ಬಂದಿರುವ ಸಂಖ್ಯೆ ನಮೂದಿಸಿ ಹಣ ಪಡೆಯಬಹುದು.

‘ಗ್ರಾಹಕರ ಬ್ಯಾಂಕಿಂಗ್‌ ಅನುಭವ ಹೆಚ್ಚಿಸಲು ‘ಯೋನೊ ಕ್ಯಾಷ್‌’ ಇನ್ನೊಂದು ಹೆಜ್ಜೆಯಾಗಿದೆ. ಡೆಬಿಟ್‌ ಕಾರ್ಡ್‌ ಬಳಸುವ ಸಂದರ್ಭದಲ್ಲಿನ ಕಾರ್ಡ್‌ ದುರ್ಬಳಕೆ, ಕಾರ್ಡ್‌ ಮಾಹಿತಿ ಕದ್ದು, ನಕಲಿ ಕಾರ್ಡ್‌ ತಯಾರಿಸಿ ವಂಚಿಸುವುದಕ್ಕೆ ಇದರಿಂದ ಕಡಿವಾಣ ಬೀಳಲಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ರಜನೀಶ್‌ ಕುಮಾರ್‌ ಹೇಳಿದ್ದಾರೆ.

ಡೆಬಿಟ್‌ ಕಾರ್ಡ್‌ ಬಳಸದ ಗರಿಷ್ಠ ಸುರಕ್ಷತೆಯ ಈ ಸೌಲಭ್ಯವು ಬ್ಯಾಂಕ್‌ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಒದಗಿಸಲಿದೆ