ಎಲ್‌ & ಟಿ ಗನ್ ಉತ್ಪಾದನೆ ಘಟಕಕ್ಕೆ ಪ್ರಧಾನಿ ಚಾಲನೆ

0
1075

ಸೂರತ್‌ ಬಳಿಯ ಹಜೀರಾದಲ್ಲಿ ಎಲ್‌ ಆ್ಯಂಟ್‌ ಟಿ ಕಂಪನಿಯ ಗನ್‌ ಉತ್ಪಾದನೆಯ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 2019 ಜನೇವರಿ 19 ರ ಶನಿವಾರ ಚಾಲನೆ ನೀಡಿದ್ದಾರೆ.

ಹಜೀರಾ(ಗುಜರಾತ್‌): ಸೂರತ್‌ ಬಳಿಯ ಹಜೀರಾದಲ್ಲಿ ಎಲ್‌ ಆ್ಯಂಟ್‌ ಟಿ ಕಂಪನಿಯ ಗನ್‌ ಉತ್ಪಾದನೆಯ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು 2019 ಜನೇವರಿ 19 ರ  ಶನಿವಾರ ಚಾಲನೆ ನೀಡಿದ್ದಾರೆ. ರಕ್ಷಣಾ ವಲಯಕ್ಕೆ ಅಗತ್ಯವಾದ ಅತ್ಯಾಧುನಿಕ ಅಸ್ತ್ರಗಳನ್ನು ಈ ಘಟಕದಲ್ಲಿ ತಯಾರಿಸಲಾಗುತ್ತದೆ. ಖಾಸಗಿ ವಲಯದಲ್ಲಿ ಇದು ಹೊಸ ಮಾದರಿಯ ಗನ್‌ ಉತ್ಪಾದನಾ ಘಟಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಕೆ-9 ವಜ್ರ-ಟಿ 155 ಎಂಎಂ/52 ಕ್ಯಾಲಿಬರ್‌ ಟ್ರ್ಯಾಕ್‌ನ ಗನ್‌ ಸಿಸ್ಟಮ್‌ ಅನ್ನು ಭಾರತೀಯ ಸೇನೆಗೆ ಪೂರೈಸುವ 4,500 ಕೋಟಿ ರೂ. ಮೌಲ್ಯದ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ 2017ರಲ್ಲಿ ಪಡೆದಿತ್ತು. ಸೂರತ್‌ಗೆ 30 ಕಿ.ಮೀ ದೂರದಲ್ಲಿ ಸಶಸ್ತ್ರ ವ್ಯವಸ್ಥೆಯ ಸಂಕೀರ್ಣವನ್ನು(ಆರ್ಮರ್ಡ್‌ ಸಿಸ್ಟಮ್ಸ್‌ ಕಾಂಪ್ಲೆಕ್ಸ್‌) ಅನ್ನು ಎಲ್‌ ಆ್ಯಂಡ್‌ ಟಿ ರೂಪಿಸಿದೆ. ಮೇಕ್‌ ಇನ್‌ ಇಂಡಿಯಾ ಉತ್ತೇಜಕ ಕ್ರಮವಾಗಿ ಈ ಯೋಜನೆ ಜಾರಿಗೆ ಬಂದಿದೆ. 40 ಎಕರೆಯಲ್ಲಿ ಹರಡಿಗೊಂಡಿರುವ ಈ ಘಟಕದಲ್ಲಿ ಸ್ವಯಂ ಚಾಲಿತ ಬಂದೂಕುಗಳು, ಯುದ್ಧ ವಾಹನಗಳು, ಭವಿಷ್ಯದ ಸಮರ ವಾಹನಗಳನ್ನು ತಯಾರಿಸಲಾಗುತ್ತದೆ. ಸೆಪ್ಟೆಂಬರ್‌ ತನಕ 100 ಟ್ಯಾಂಕ್‌ಗಳನ್ನು ಸೇನೆಗೆ ಸರಬರಾಜು ಮಾಡಲಾಗಿದೆ. 

”ರಕ್ಷಣಾ ಪಡೆಗೆ ನೆರವಾದ ಇಡೀ ತಂಡವನ್ನು ಅಭಿನಂದಿಸುತ್ತೇನೆ. ದೇಶದ ಸುರಕ್ಷತೆಯ ನಿಟ್ಟಿನಲ್ಲಿ ಭಾರತೀಯ ರಕ್ಷಣಾ ವಲಯಕ್ಕೆ ಎಲ್‌ ಆ್ಯಂಡ್‌ ಟಿ ಮಹತ್ವದ ಕೊಡುಗೆ ನೀಡಿದೆ,” ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ. 

ಪ್ರಧಾನಿ ಟ್ಯಾಂಕರ್‌ ಸವಾರಿ 

ಭಾರತೀಯ ಸೇನೆಗಾಗಿ ಎಲ್‌ ಆ್ಯಂಡ್‌ ಟಿ ಕಂಪನಿ ನಿರ್ಮಿಸಿರುವ ಕೆ-9 ವಜ್ರ ಟ್ಯಾಂಕರ್‌ನಲ್ಲಿ ಏಕಾಂಗಿಯಾಗಿ ಪ್ರಧಾನಿ ನರೇಂದ್ರ ಮೋದಿ ಸವಾರಿ ಮಾಡಿದರು. ಆ ಮೂಲಕ ರಕ್ಷಣಾ ವಲಯದಲ್ಲಿ ಮೇಕ್‌ ಇನ್‌ ಇಂಡಿಯಾದ ಯಶಸ್ಸನ್ನು ಪ್ರದರ್ಶಿಸಿದರು. 

ಸ್ವಯಂಚಾಲಿತ ಫಿರಂಗಿಗಳನ್ನು ಹೊಂದಿರುವ ಕೆ-9 ವಜ್ರ ಟ್ಯಾಂಕರ್‌ನಲ್ಲಿ ಸಾಗುವ 10 ಸೆಕೆಂಡ್‌ಗಳ ವಿಡಿಯೊವೊಂದನ್ನು ಬಳಿಕ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪ್ರಧಾನಿ ಶೇರ್‌ ಮಾಡಿದ್ದಾರೆ. ಅತ್ಯಾಧುನಿಕ ಕೆ-9 ವಜ್ರ ಟ್ಯಾಂಕರ್‌ ಸೇರಿದಂತೆ ಎರಡು ಹೊಸ ಫಿರಂಗಿಗಳು ಭಾರತೀಯ ಸೇನೆಗೆ ಇತ್ತೀಚೆಗಷ್ಟೇ ಸೇರ್ಪಡೆಯಾಗಿವೆ. ಈ ಟ್ಯಾಂಕ್‌ಗಳನ್ನು ಈ ಸಲದ ಗಣರಾಜ್ಯೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.