ಎಲ್ಲ ಖಾಸಗಿ ಶಾಲೆಗಳಲ್ಲಿ “ಕನ್ನಡ” ಕಡ್ಡಾಯ ಬೋಧನೆಗೆ ಆದೇಶ

0
667

ಎಲ್ಲ ಖಾಸಗಿ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧನೆ ಮಾಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಶಿಕ್ಷಣ ಇಲಾಖೆಯು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.

ಬೆಂಗಳೂರು: ಎಲ್ಲ ಖಾಸಗಿ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧನೆ ಮಾಡುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಶಿಕ್ಷಣ ಇಲಾಖೆಯು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.

ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂದು 2017-18ನೇ ಸಾಲಿನಲ್ಲಿ ಆದೇಶಿಸಿದ್ದರೂ ಸಿಬಿಎಸ್‌ಸಿ, ಐಸಿಎಸ್‌ಇ ಹಾಗೂ ಇತರೆ ಪಠ್ಯ ಕ್ರಮ ಹೊಂದಿರುವ ಬಹುತೇಕ ಖಾಸಗಿ ಶಾಲೆಗಳು ಕನ್ನಡ ಬೋಧಿಸುತ್ತಿಲ್ಲ. ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಇತರೆ ಪಠ್ಯ ಕ್ರಮ ಇದ್ದರೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು. ಕನ್ನಡ ಕಲಿಸದ ಶಾಲೆಗಳ ಪಟ್ಟಿಯನ್ನು ಸೆ.5ರೊಳಗೆ ಕಳುಹಿಸುವಂತೆ ಜಿಲ್ಲೆಗಳ ಉಪ ನಿರ್ದೇಶಕರಿಗೆ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶದಲ್ಲಿ ಸೂಚಿಸಿದ್ದಾರೆ. 

ಏನಿದು ನಿಯಮ? 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮನವಿಯ ಮೇರೆಗೆ ರಾಜ್ಯ ಸರಕಾರ 2015ರಲ್ಲಿ ‘ಕನ್ನಡ ಭಾಷಾ ಕಲಿಕಾ ಅಧಿನಿಯಮ’ವನ್ನು ರೂಪಿಸಿತ್ತು. ಇದರ ಆಧಾರದ ಮೇಲೆ 2017ರಲ್ಲಿ ‘ಕನ್ನಡ ಭಾಷಾ ಕಲಿಕಾ ನಿಯಮ’ಗಳನ್ನು ಜಾರಿಗೆ ತರಲಾಗಿದೆ. 2017-18ನೇ ಶೈಕ್ಷಣಿಕ ಸಾಲಿನಿಂದ 1ರಿಂದ 10ನೇ ತರಗತಿವರೆಗೆ ಹಂತ ಹಂತವಾಗಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವುದನ್ನು ಕಡ್ಡಾಯ ಮಾಡಿದೆ. ಆ ಮೂಲಕ ಎಲ್ಲಾ ಶಾಲೆಗಳಲ್ಲಿ ಪ್ರತಿವರ್ಷ ಒಂದೊಂದು ತರಗತಿಯಂತೆ 2026-27ನೇ ಸಾಲಿಗೆ 10ನೇ ತರಗತಿವರೆಗೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಟ್ಟುನಿಟ್ಟಾಗಿ ಕಲಿಸಬೇಕಿದೆ. 

ನಿರಾಕರಿಸುತ್ತಿದ್ದ ಖಾಸಗಿ ಶಾಲೆಗಳು: 

ಈ ನಿಯಮಗಳಿಗೆ ರಾಜ್ಯ ಪಠ್ಯಕ್ರಮಕ್ಕೆ ಸಿಬಿಎಸ್‌ಸಿ, ಐಸಿಎಸ್‌ಸಿ ಹಾಗೂ ಇತರೆ ಪಠ್ಯಕ್ರಮ ಬೋಧಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಬೋಧಿಸಲು ನಿರಾಕರಿಸುತ್ತಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಂತಹ ಖಾಸಗಿ ಶಾಲೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆ ನೀಡಿತ್ತು ಎಂದು ತಿಳಿದುಬಂದಿದೆ. 

ಶಿಕ್ಷಣ ಇಲಾಖೆಗೆ ಪತ್ರ: 

ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕಾ ನಿಯಮಗಳ ಜಾರಿ ಕುರಿತು ಸಮಗ್ರ ವರದಿ ನೀಡುವಂತೆ ಶಿಕ್ಷಣ ಇಲಾಖೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪತ್ರಕ್ಕೆ ಕಾಲಮಿತಿಯಲ್ಲಿ ಶಿಕ್ಷಣ ಇಲಾಖೆ ವರದಿ ನೀಡಲು ವಿಫಲವಾಗಿತ್ತು. ಇದಕ್ಕೆ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. 

”ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಮೀಲಾಗುವ ಮೂಲಕ, ಸರಕಾರ ರೂಪಿಸಿರುವ ನಿಯಮಗಳನ್ನು ಬುಡಮೇಲು ಮಾಡಲು ಮುಂದಾಗಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ,” ಎಂದು ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ, ಕನ್ನಡ ಭಾಷಾ ಕಲಿಕಾ ನಿಯಮಗಳ ಜಾರಿ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಜತೆಗೆ ನಿಯಮಗಳನ್ನು ಜಾರಿಗೆ ತರದ ಶಾಲೆಗಳ ವಿರುದ್ಧ ಕೈಗೊಂಡಿರ ಕ್ರಮದ ಬಗ್ಗೆಯೂ ವರದಿ ನೀಡುವಂತೆ ಆಯಾ ಜಿಲ್ಲೆಗಳ ಉಪ ನಿರ್ದೇಶಕರಿಗೆ ಸೂಚಿಸಿದೆ. 

”ರಾಜ್ಯದ ಎಲ್ಲಾ ಶಾಲೆಗಳಲ್ಲೂ 2017-18ನೇ ಸಾಲಿನಿಂದ ಕನ್ನಡ ಭಾಷಾ ಕಲಿಕಾ ನಿಯಮಗಳ ಜಾರಿ ಕಡ್ಡಾಯವಾಗಿದೆ. ಈ ಬಗ್ಗೆ ಸೆಪ್ಟೆಂಬರ್ ರ ಒಳಗೆ ಮಾಹಿತಿ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದ್ದೇವೆ. ವಿವರ ಕೈ ಸೇರಿದ ಬಳಿಕ ವರದಿ ತಯಾರಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುತ್ತೇವೆ. ನಿಯಮಗಳನ್ನು ಜಾರಿಗೊಳಿಸದ ಶಾಲೆಗಳ ವಿರುದ್ಧ ಕಠಿಣ ಕಾನುನು ಕ್ರಮ ಜರುಗಿಸುತ್ತೇವೆ.” 

ಬಿ.ಕೆ.ಬಸವರಾಜ, ನಿರ್ದೇಶಕ (ಪ್ರಾಥಮಿಕ ಶಿಕ್ಷಣ), ಸಾರ್ವಜನಿಕ ಶಿಕ್ಷಣ ಇಲಾಖೆ.