ಎರಡು ಗ್ರಾಮೀಣ ಬ್ಯಾಂಕ್‌ ವಿಲೀನ (ಏಪ್ರಿಲ್‌ನಿಂದ ಹೊಸ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅಸ್ತಿತ್ವಕ್ಕೆ)

0
758

ಕಾವೇರಿ ಗ್ರಾಮೀಣ ಬ್ಯಾಂಕ್‌ ಮತ್ತು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಲಾಗುತ್ತಿದ್ದು, ರಾಜ್ಯದಲ್ಲಿ ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿರುವ ಮೂರು ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆಯು ಇದೇ ಏಪ್ರಿಲ್‌ನಿಂದ ಎರಡಕ್ಕೆ ಇಳಿಯಲಿದೆ.

ಬೆಂಗಳೂರು: ಕಾವೇರಿ ಗ್ರಾಮೀಣ ಬ್ಯಾಂಕ್‌ ಮತ್ತು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಲಾಗುತ್ತಿದ್ದು, ರಾಜ್ಯದಲ್ಲಿ ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿರುವ ಮೂರು ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆಯು ಇದೇ ಏಪ್ರಿಲ್‌ನಿಂದ ಎರಡಕ್ಕೆ ಇಳಿಯಲಿದೆ.

ಸದ್ಯಕ್ಕೆ ರಾಜ್ಯದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್‌, ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಮತ್ತು ಕರ್ನಾಟಕ ವಿಕಾಸ್‌ ಗ್ರಾಮೀಣ ಬ್ಯಾಂಕ್‌ ಅಸ್ತಿತ್ವದಲ್ಲಿ ಇವೆ. ಹೊಸ ಹಣಕಾಸು ವರ್ಷದಿಂದ ಹೊಸದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಮತ್ತು ಈ ಮೊದಲಿನ ಕರ್ನಾಟಕ ವಿಕಾಸ್‌ ಗ್ರಾಮೀಣ ಬ್ಯಾಂಕ್‌ಗಳು ಮಾತ್ರ ಅಸ್ತಿತ್ವದಲ್ಲಿ ಇರಲಿವೆ.

‘ಈ ಪ್ರಕ್ರಿಯೆ ವಿಲೀನವೂ ಅಲ್ಲ, ಸ್ವಾಧೀನವೂ ಅಲ್ಲ. ಎರಡೂ ಬ್ಯಾಂಕ್‌ಗಳನ್ನು ಒಂದುಗೂಡಿಸಿ ಹೊಸದಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಅಸ್ತಿತ್ವಕ್ಕೆ ಬರುತ್ತಿದೆ. ಹೊಸ ಬ್ಯಾಂಕ್‌ನ ಪ್ರಧಾನ ಕಚೇರಿ ಬಳ್ಳಾರಿಯಲ್ಲಿಯೇ ಇರಲಿದೆ’ ಎಂದು ಹೊಸ ಬ್ಯಾಂಕ್‌ನ ಅಧ್ಯಕ್ಷರಾಗಿರುವ ಪ್ರಗತಿ ಕೃಷ್ಣಾ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಶ್ರೀನಾಥ್‌ ಜೋಶಿ ಅವರು ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

‘ಅತಿದೊಡ್ಡ ಗ್ರಾಮೀಣ ಬ್ಯಾಂಕ್‌: ಶಾಖೆಗಳು ಮತ್ತು ವಹಿವಾಟಿನ ವಿಷಯದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ದೇಶದಲ್ಲಿಯೇ ಅತಿದೊಡ್ಡ ಗ್ರಾಮೀಣ ಬ್ಯಾಂಕ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈಶಾನ್ಯ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ 21 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಹೊಸ ಬ್ಯಾಂಕ್‌ನ ಒಟ್ಟಾರೆ ವಹಿವಾಟು  45 ಸಾವಿರ ಕೋಟಿಗಳಷ್ಟು ಇರಲಿದೆ. ಹೊಸ ಬ್ಯಾಂಕ್‌ನ ಪ್ರವರ್ತಕ ಬ್ಯಾಂಕ್‌ ಆಗಿ ಕೆನರಾ ಬ್ಯಾಂಕ್‌ ಮುಂದುವರೆಯಲಿದೆ.

‘ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಗ್ರಾಮೀಣ ಬ್ಯಾಂಕ್‌ಗಳು ಹಳ್ಳಿ ಹಳ್ಳಿಗಳಲ್ಲಿ ಮನೆ ಮಾತಾಗಿವೆ. ಗ್ರಾಮೀಣ ಸಾಲ, ಕೃಷಿ ಕ್ಷೇತ್ರಕ್ಕೆ ನೆರವು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ (ಎಂಎಸ್‌ಎಂಇ) ವಲಯ ಒಳಗೊಂಡಂತೆ ಆದ್ಯತಾ ವಲಯಕ್ಕೆ ಸಾಲ ನೀಡುವಲ್ಲಿ ‘ಆರ್‌ಆರ್‌ಬಿ’ಗಳು ಮುಂಚೂಣಿಯಲ್ಲಿ ಇವೆ. ಹೊಸದಾಗಿ ಅಸ್ತಿತ್ವಕ್ಕೆ ಬರುತ್ತಿರುವ ಬ್ಯಾಂಕ್‌ನ ಹೊಣೆ
ಗಾರಿಕೆ ಇನ್ನಷ್ಟು ಹೆಚ್ಚಿದೆ’ ಎಂದಿದ್ದಾರೆ

ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ಪ್ರತಿಯೊಂದು ರಾಜ್ಯದಲ್ಲಿ ಒಂದೇ ಗ್ರಾಮೀಣ ಬ್ಯಾಂಕ್ ಅಸ್ತಿತ್ವದಲ್ಲಿ ಇರಬೇಕೆಂಬ ಉದ್ದೇಶ ಸಾಧನೆಗೆ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಮತ್ತು ಗ್ರಾಮೀಣ ಬ್ಯಾಂಕ್‌ಗಳ ಪ್ರವರ್ತಕ ಬ್ಯಾಂಕ್‌ಗಳಾಗಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಅಭಿಪ್ರಾಯ ಪಡೆದಿರುವ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. 

ಪ್ರಗತಿಗೆ ಪೂರಕ: ‘ಬದಲಾದ ಕಾಲಘಟ್ಟದಲ್ಲಿ ಗ್ರಾಮೀಣ ಬ್ಯಾಂಕ್‌ಗಳೂ ತಮ್ಮ ವಹಿವಾಟು ಲಾಭ ಹೆಚ್ಚಿಸಿಕೊಂಡು ಪ್ರಗತಿಪಥದಲ್ಲಿ ಮುನ್ನಡೆಯಬೇಕು ಎನ್ನುವ ಉದ್ದೇಶದಿಂದ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ’ ಎಂದು ಕಾವೇರಿ ಗ್ರಾಮೀಣ ಬ್ಯಾಂಕ್‌ನ ಹಾಲಿ ಅಧ್ಯಕ್ಷ ಭುವನೇಶ್ವರ ಠಾಕೂರ್‌ ಪ್ರತಿಕ್ರಿಯಿಸಿದ್ದಾರೆ.

‘ಬ್ಯಾಂಕೇತರ ಕಿರು ಹಣಕಾಸು ಸಂಸ್ಥೆ, ಪೇಮೆಂಟ್ಸ್‌ ಬ್ಯಾಂಕ್‌, ಅಂಚೆ ಪಾವತಿ ಬ್ಯಾಂಕ್‌ ಮುಂತಾದವುಗಳ ಸ್ಪರ್ಧೆ ಎದುರಿಸುವ ಉದ್ದೇಶವೂ ಇದೆ. ಪ್ರತಿಯೊಂದು ರಾಜ್ಯದಲ್ಲಿ ಒಂದೇ ಗ್ರಾಮೀಣ ಬ್ಯಾಂಕ್‌ ಅಸ್ತಿತ್ವದಲ್ಲಿ ಇರಬೇಕು ಎಂಬುದು ವ್ಯಾಸ್‌ ಸಮಿತಿಯ ಶಿಫಾರಸುಗಳಲ್ಲಿ ಪ್ರಮುಖವಾಗಿತ್ತು.

‘ರಾಜ್ಯದಲ್ಲಿ ಒಂದೇ ಗ್ರಾಮೀಣ ಬ್ಯಾಂಕ್‌ ಇದ್ದರೆ ಅದರ ವಿಶಾಲ ಕಾರ್ಯವ್ಯಾಪ್ತಿಯ ಕಾರಣಕ್ಕೆ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಗಳು ತಲೆದೋರಬಹುದು. ಎರಡು ಬ್ಯಾಂಕ್‌ಗಳು ಇದ್ದರೆ ಅವುಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ಏರ್ಪಟ್ಟು ವಹಿವಾಟಿನಲ್ಲಿ ಹೆಚ್ಚಿನ ಪ್ರಗತಿ ನಿರೀಕ್ಷಿಸಬಹುದು ಎನ್ನುವ ಕಾರಣಕ್ಕೆ ಎರಡು ಗ್ರಾಮೀಣ ಬ್ಯಾಂಕ್‌ಗಳ ಅಗತ್ಯ ಇದೆ ಎನ್ನುವುದು ರಾಜ್ಯ ಸರ್ಕಾರದ ಧೋರಣೆಯಾಗಿತ್ತು. ಸರ್ಕಾರದ ಈ ನಿಲುವಿಗೆ ಮನ್ನಣೆ ಸಿಕ್ಕಿದೆ. ಈ ಕಾರಣಕ್ಕೆ ರಾಜ್ಯದಲ್ಲಿ ಇನ್ನು ಮುಂದೆ ಎರಡು ಗ್ರಾಮೀಣ ಬ್ಯಾಂಕ್‌ಗಳಷ್ಟೇ ಅಸ್ತಿತ್ವದಲ್ಲಿ ಇರಲಿವೆ’ ಎಂದು ವಿವರಿಸಿದ್ದಾರೆ.

‘ವಿಲೀನದಿಂದಾಗಿ ಬ್ಯಾಂಕ್‌ನ ಕಾರ್ಯವ್ಯಾಪ್ತಿ ಹಿಗ್ಗಲಿದೆ. ಗ್ರಾಹಕರಿಗೆ ಆರಂಭದಲ್ಲಿ ಕೆಲ ಗೊಂದಲಗಳು ಕಾಡುತ್ತವೆ. ಕ್ರಮೇಣ ಎಲ್ಲವೂ ಸರಿ ಹೋಗುತ್ತದೆ. ನಂತರದ ದಿನಗಳಲ್ಲಿ ಸಿಬ್ಬಂದಿ ಕೂಡ ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೆ ವರ್ಗಾವಣೆಗೊಳ್ಳುವ ಸಾಧ್ಯತೆ ಇರುತ್ತದೆ’ ಎಂದು ಹೇಳಿದ್ದಾರೆ.