“ಎಮರ್ಸನ್ ಮನ್ಗಾಗ್ವಾ” ಜಿಂಬಾಬ್ವೆ ನೂತನ ಅಧ್ಯಕ್ಷ

0
33

ರಾಬರ್ಟ್ ಮುಗಾಬೆ ಅವರ 37 ವರ್ಷದ ಸುದೀರ್ಘ ಆಡಳಿತ ಕೊನೆಗೊಂಡ ಬಳಿಕ ಜಿಂಬಾಬ್ವೆಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತ ಪಕ್ಷದ ನಾಯಕ ಎಮರ್ಸನ್ ಮನ್ಗಾಗ್ವಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಹರಾರೆ: ರಾಬರ್ಟ್ ಮುಗಾಬೆ ಅವರ 37 ವರ್ಷದ ಸುದೀರ್ಘ ಆಡಳಿತ ಕೊನೆಗೊಂಡ ಬಳಿಕ ಜಿಂಬಾಬ್ವೆಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಡಳಿತ ಪಕ್ಷದ ನಾಯಕ ಎಮರ್ಸನ್ ಮನ್ಗಾಗ್ವಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ 23 ಅಭ್ಯರ್ಥಿಗಳು ಕಣದಲ್ಲಿದ್ದರು. ಆಡಳಿತಾರೂಢ ಜನು-ಪಿಎಫ್ ಪಕ್ಷದ ಎಮರ್ಸನ್ ಮನ್ಗಾಗ್ವಾ ಹಾಗೂ ಪ್ರತಿಪಕ್ಷಗಳ ಮೈತ್ರಿಕೂಟದ ನೆಲ್ಸನ್ ಚಮೀಸಾ ನಡುವೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಮನ್ಗಾಗ್ವಾ ಶೇ. 50.8 ಮತ ಪಡೆದಿದ್ದರೆ ಪ್ರತಿಸ್ಪರ್ಧಿ ನೆಲ್ಸನ್ ಚಮೀಸಾ ಶೇ. 44.3 ಮತ ಪಡೆದರು. ಇನ್ನುಳಿದ ಮತಗಳನ್ನು ಇತರ ಅಭ್ಯರ್ಥಿಗಳು ಪಡೆದಿದ್ದಾರೆ. ಚುನಾವಣಾ ಫಲಿತಾಂಶ ವಿರುದ್ಧ ಪ್ರತಿಪಕ್ಷಗಳು ಕೋರ್ಟ್ ಮೆಟ್ಟಿಲೇರಲು ನಿರ್ಧಾರ ಮಾಡಿದ್ದು, ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿಕೊಂಡಿವೆ.

ಹಿಂಸಾಚಾರ ಬಳಿಕ ಕಟ್ಟೆಚ್ಚರ: ಆಡಳಿತಾರೂಢ ಪಕ್ಷ ಫಲಿತಾಂಶವನ್ನು ತಿರುಚಿದೆ ಎಂದು ಆರೋಪಿಸಿ ಪ್ರತಿಪಕ್ಷದ ಬೆಂಬಲಿಗರು ಗುರುವಾರ ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಇದು ಹಿಂಸಾಚಾರಕ್ಕೆ ತಿರುಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ 10 ಜನರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿ 18 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮನ್ಗಾಗ್ವಾ ಯಾರು? : ಮೂರು ದಶಕಕ್ಕೂ ಅಧಿಕ ಕಾಲ ಜಿಂಬಾಬ್ವೆಯಲ್ಲಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸಿದ್ದ ರಾಬರ್ಟ್ ಮುಗಾಬೆಯ ಆಪ್ತ ವಲಯದಲ್ಲಿ ಮನ್ಗಾಗ್ವಾ ಗುರುತಿಸಿಕೊಂಡಿದ್ದರು. ಮುಗಾಬೆ ಆಡಳಿತದಲ್ಲಿ ಮಹತ್ವದ ಪಾತ್ರವನ್ನೂ ವಹಿಸಿದ್ದರು. ಅವರ ಹಲವು ವಿವಾದಿತ ನೀತಿಯನ್ನು ಜಾರಿಗೆ ತರುವಲ್ಲಿ ಮನ್ಗಾಗ್ವಾ ಶ್ರಮಿಸಿದ್ದರು. ಹೀಗಾಗಿ ಅಲ್ಲಿನ ಸೇನೆ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಮೇಲೆ ಅವರು ಹಿಡಿತ ಹೊಂದಿದ್ದಾರೆ. ಮುಗಾಬೆ ವಿರುದ್ಧ ಬಂಡಾಯ ಉಂಟಾಗುವಂತೆ ಮಾಡಿ, ಅವರನ್ನು ಪದಚ್ಯುತಗೊಳಿಸುವಲ್ಲಿ ಮನ್ಗಾಗ್ವಾ ಪಾತ್ರವೂ ಇತ್ತು ಎನ್ನಲಾಗಿದೆ.

ಮುಂದೇನು?

ಸುದೀರ್ಘ ಸರ್ವಾಧಿಕಾರಿ ಆಳ್ವಿಕೆ ಬಳಿಕ ಚುನಾವಣೆ ನಡೆದುದು ಜಿಂಬಾಬ್ವೆ ಜನರಲ್ಲಿ ಹೊಸ ಆಶಾವಾದ ಮೂಡಿಸಿದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಹಿಂದುಳಿದ ಜಿಂಬಾಬ್ವೆ ತುಸು ಅಭಿವೃದ್ಧಿ ಹೊಂದಲಿದೆ ಎಂಬುದು ಜನರ ನಿರೀಕ್ಷೆ. ಪ್ರಸ್ತುತ ಜಿಂಬಾಬ್ವೆಯಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಮುಗಾಬೆ ಆಡಳಿತದಲ್ಲಿ ಅಮೆರಿಕ ಸಹಿತ ಹಲವು ರಾಷ್ಟ್ರಗಳು ಜಿಂಬಾಬ್ವೆ ಮೇಲೆ ನಿರ್ಬಂಧ ಹೇರಿದ್ದವು. ಈಗ ದೇಶವನ್ನು ಸರಿದಾರಿಗೆ ತರುವ ಹೊಣೆ ಹೊಸ ಸರ್ಕಾರದ ಮೇಲಿದೆ. ಆದರೆ ಮುಗಾಬೆ ಆಪ್ತನಾಗಿದ್ದ ಮನಾಗ್ವಾ ಯಾವ ನೀತಿ ಅನುಸರಿಸಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.