ಎಫ್16: ಪಾಕ್‌ ವಿವರಣೆ ಕೋರಿದ ಅಮೆರಿಕ

0
451

ಭಾರತದ ಮೇಲೆ ವೈಮಾನಿಕ ದಾಳಿ ನಡೆಸಲು ಎಫ್‌–16 ಯುದ್ಧವಿಮಾನಗಳನ್ನು ಬಳಸಿರುವ ಬಗ್ಗೆ ಅಮೆರಿಕ ತನ್ನ ಮಿತ್ರರಾಷ್ಟ್ರ ಪಾಕಿಸ್ತಾನದಿಂದ ವಿವರಣೆ ಕೋರಿದೆ.

ವಾಷಿಂಗ್ಟನ್ (ಪಿಟಿಐ): ಭಾರತದ ಮೇಲೆ ವೈಮಾನಿಕ ದಾಳಿ ನಡೆಸಲು ಎಫ್‌–16 ಯುದ್ಧವಿಮಾನಗಳನ್ನು ಬಳಸಿರುವ ಬಗ್ಗೆ ಅಮೆರಿಕ ತನ್ನ ಮಿತ್ರರಾಷ್ಟ್ರ ಪಾಕಿಸ್ತಾನದಿಂದ ವಿವರಣೆ ಕೋರಿದೆ.  

‘ಭಾರತದ ವಿರುದ್ಧ ಎಫ್‌–16 ಯುದ್ಧ ವಿಮಾನಗಳನ್ನು ದುರ್ಬಳಕೆ ಮಾಡಿರುವ ಸಾಧ್ಯತೆ ಇದೆ. ಒಂದು ಇದು ನಿಜವಾದರೆ ಪಾಕಿಸ್ತಾನವು ಅಮೆರಿಕದೊಂದಿಗೆ ಮಾಡಿಕೊಂಡ ‘ಬಳಕೆದಾರರ ಒಪ್ಪಂದ’ ಉಲ್ಲಂಘಿಸಿದಂತಾಗುತ್ತದೆ. ಈ ಬಗ್ಗೆ ಹೆಚ್ಚಿನ ವಿವರ ನೀಡುವಂತೆ ಪಾಕಿಸ್ತಾನಕ್ಕೆ ಸೂಚಿಸಿದ್ದೇವೆ’ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯ ಹೇಳಿದೆ.

ಅಮೆರಿಕದ ವಿದೇಶಾಂಗ ಸಚಿವಾಲಯದ ಅಧಿಕಾರಿಯು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಮಾಹಿತಿ ನೀಡಿದ್ದಾರೆ. ಎಫ್‌–16 ಬಳಕೆ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ಪ್ರತಿಪಾದನೆ ಉಲ್ಲೇಖಿಸಿ ಅವರು ಮಾತನಾಡಿದ್ದಾರೆ. 

ಬಾಲಾಕೋಟ್‌ ಉಗ್ರರ ನೆಲೆ ಮೇಲೆ ಭಾರತ ನಡೆಸಿದ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವು ಭಾರತದ ಸೇನಾ ನೆಲೆಗಳ ಮೇಲೆ ದಾಳಿಗೆ ಮುಂದಾಗಿತ್ತು. ಆದರೆ ಈ ದಾಳಿ ವಿಫಲವಾಗಿತ್ತು.

‘ದಾಳಿಗೆ ಅಮೆರಿಕ ನಿರ್ಮಿತ ಎಫ್‌–16 ಯುದ್ಧವಿಮಾನಗಳನ್ನು ಪಾಕಿಸ್ತಾನ ಬಳಸಿದೆ. ನಾವು ಒಂದು ಎಫ್‌–16 ಅನ್ನು ಹೊಡೆದುರುಳಿಸಿದ್ದೇವೆ’ ಎಂದು ಭಾರತದ ಭದ್ರತಾ ಪಡೆಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದವು. ಎಫ್‌–16 ಯುದ್ಧವಿಮಾನಗಳಲ್ಲಿ ಬಳಸಲಾಗುವ ‘ಎಎಂಆರ್‌ಎಎಎಂ’ ಕ್ಷಿಪಣಿಯ ತುಣುಕನ್ನು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಲಾಗಿತ್ತು.

‘ಈ ಕಾರ್ಯಾಚರಣೆಯಲ್ಲಿ ನಮ್ಮ ಯಾವ ವಿಮಾನಕ್ಕೂ ಹಾನಿಯಾಗಿಲ್ಲ. ನಮ್ಮ ದಾಳಿಯಲ್ಲಿ ಎಫ್‌–16 ಬಳಸಿಲ್ಲ’ ಎಂದು ಪಾಕಿಸ್ತಾನ ಸ್ಪಷ್ಟನೆ ನೀಡಿತ್ತು.

‘ಈ ಎರಡೂ ವರದಿಗಳನ್ನು ನಾವು ಗಮನಿಸಿದ್ದೇವೆ. ಬೇರೆ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ಮಾರಾಟ ಮಾಡುವಾಗ ಅವುಗಳ ಬಳಕೆ ಮೇಲೆ ಹಲವು ನಿರ್ಬಂಧಗಳನ್ನು ಹೇರಿರುತ್ತೇವೆ. ಅಲ್ಲದೆ ಆ ಶಸ್ತ್ರಾಸ್ತ್ರಗಳ ಬಳಕೆಗೆ ಸಂಬಂಧಿಸಿದಂತೆ ಪ್ರಕಟವಾಗುವ ಎಲ್ಲಾ ವರದಿಗಳನ್ನೂ ಗಂಭೀರವಾಗಿ ಪರಿಗಣಿಸುತ್ತೇವೆ’ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ ಮಾಹಿತಿ ನೀಡಿದ್ದಾರೆ.

ಭಾರತದ ಮೇಲಿನ ದಾಳಿಯಲ್ಲಿ ಅಮೆರಿಕ ನಿರ್ಮಿತ ವಿಮಾನ ಬಳಕೆ

ಪಾಕಿಸ್ತಾನವು ಭಾರತದ ಸೇನಾ ಠಾಣೆಗಳ ಮೇಲೆ ದಾಳಿಗೆ ಯತ್ನಿಸಿತ್ತು ಎಂಬುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಭಾರತ ಒದಗಿಸಿದೆ

ಪಾಕಿಸ್ತಾನದ ದಾಳಿ ವಿವರ

ಪಾಕಿಸ್ತಾನದ ಯುದ್ಧವಿಮಾನಗಳು ನಮ್ಮ ಗಡಿಯತ್ತ ನುಗ್ಗುತ್ತಿರುವುದನ್ನು ಗುರುತಿಸಿ, ದಾಳಿಯನ್ನು ವಿಫಲಗೊಳಿಸಲಾಯಿತು – ಭಾರತ

ಭಾರತದ ವಿರುದ್ಧ ಎಫ್‌–16 ಬಳಸಲಾಗಿದೆ ಎಂಬುದರ ಬಗ್ಗೆ ತಕ್ಷಣವೇ ಯಾವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಸಂಬಂಧ ಲಭ್ಯವಿರುವ ಸಾಕ್ಷ್ಯಗಳನ್ನು ಪರಿಶೀಲಿಸ ಬೇಕಾಗುತ್ತದೆ ಎಂದು ಅಮೆರಿಕ ಹೇಳಿದೆ.

ನಿರ್ಬಂಧ ಬಹಿರಂಗವಿಲ್ಲ

‘ಎಫ್‌–16 ಬಳಕೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಮೇಲೆ ಹಲವು ನಿರ್ಬಂಧಗಳಿವೆ. ಇದು ಸೇನಾ ಒಪ್ಪಂದವಾಗಿರುವ ಕಾರಣ ಆ ನಿರ್ಬಂಧಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ಅಮೆರಿಕದ ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದೆ.

ಅನುಮತಿ ಅಗತ್ಯ

‘ಎಫ್‌–16 ಅನ್ನು ಬೇರೆ ದೇಶದ ವಿರುದ್ಧ ಸೇನಾ ಕಾರ್ಯಾಚರಣೆಗೆ, ಜಂಟಿ ಸಮರಭ್ಯಾಸಕ್ಕೆ ಬಳಸುವ ಮುನ್ನ ಪಾಕಿಸ್ತಾನವು ಅಮೆರಿಕದ ಅನುಮತಿ ಪಡೆಯಲೇಬೇಕು. ವಿಮಾನ ಬಳಕೆ ಬಗ್ಗೆ ದಾಖಲೆಗಳನ್ನು ಇಡಬೇಕು’ ಎಂದು 2006ರಲ್ಲಿ ಅಮೆರಿಕ ಸರ್ಕಾರವು ತನ್ನ ಸಂಸತ್ತಿನಲ್ಲಿ ಹೇಳಿತ್ತು.