ಎಫ್‌ಕೆಸಿಸಿಐಯಿಂದ ಯೂತ್ ಇಂಡಿಯಾ ಯೋಜನೆ ಜಾರಿ

0
356

ಎಫ್‌ಕೆಸಿಸಿಐ ವತಿಯಿಂದ ಯೂತ್ ಇಂಡಿಯಾ ಎನ್ನುವ ಯೋಜನೆಯನ್ನು ಜಾರಿಗೆ ತಂದಿದ್ದು ಮಂಥನ ಸಮಿತಿ ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಈ ಮೂಲಕ ರಾಜ್ಯದ ಎಲ್ಲ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳು ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಕಾನ್ಸೆಫ್ಟ್‌ಗಳನ್ನು ಸಿದ್ಧಪಡಿಸಿದರೆ ಅದರಲ್ಲಿ 9 ಪ್ರಾಜೆಕ್ಟ್‌ಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತದೆ ವಾಣಿಜ್ಯ

ಮಂಗಳೂರು:  ಎಫ್‌ಕೆಸಿಸಿಐ ವತಿಯಿಂದ ಯೂತ್ ಇಂಡಿಯಾ ಎನ್ನುವ ಯೋಜನೆಯನ್ನು ಜಾರಿಗೆ ತಂದಿದ್ದು ಮಂಥನ ಸಮಿತಿ ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಈ ಮೂಲಕ ರಾಜ್ಯದ ಎಲ್ಲ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳು ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ಕಾನ್ಸೆಫ್ಟ್‌ಗಳನ್ನು ಸಿದ್ಧಪಡಿಸಿದರೆ ಅದರಲ್ಲಿ 9 ಪ್ರಾಜೆಕ್ಟ್‌ಗಳಿಗೆ ಎಲ್ಲ ರೀತಿಯ ನೆರವು ನೀಡಲಾಗುತ್ತದೆ ಎಂದು ಎಫ್‌ಕೆಸಿಸಿ( ಫೆಡರೇಶನ್ ಆಫ್ ಕರ್ನಾಟಕ ಚೇಂಬರ‍್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ)ಯ ಅಧ್ಯಕ್ಷ ಸುಧಾಕರ ಎಸ್ ಶೆಟ್ಟಿ ಹೇಳಿದರು. 

ಅವರು ಶುಕ್ರವಾರ ನಗರದ ಬಂದರಿನಲ್ಲಿರುವ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಪದಾಧಿಕಾರಿಗಳ ಜತೆಗೆ ಸಂವಾದ ನಡೆಸಿದ ಬಳಿಕ ಮಾತನಾಡಿ, ವಿದ್ಯಾರ್ಥಿ ಸಮೂಹ ಕೈಗಾರಿಕೆ, ಉದ್ದಿಮೆ ಕ್ಷೇತ್ರದಲ್ಲಿ ಆಸಕ್ತಿ ವಹಿಸುವಂತೆ ಮಾಡಲು ಈ ಆರ್ಥಿಕ ವರ್ಷದಿಂದ ಯೂತ್ ಇಂಡಿಯಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಜಿಲ್ಲಾ ಮಟ್ಟದಲ್ಲಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ನಮ್ಮ ಗಮನಕ್ಕೆ ತಂದರೆ ಅಂತಹ ಪ್ರಾಜೆಕ್ಟ್‌ಗೆ ಸಹಕಾರ ನೀಡಲಾಗುತ್ತದೆ ಎಂದರು. 

ಇತ್ತೀಚಿನ ಮಾಹಿತಿಯ ಪ್ರಕಾರ 1ಕೋಟಿ ಜನಸಂಖ್ಯೆಯ ಲೆಕ್ಕಚಾರದಲ್ಲಿ 90 ಲಕ್ಷ ಮಂದಿ ಯುವಜನರು ಇದ್ದಾರೆ. ಅವರಿಗೆ ಸ್ವ ಉದ್ಯೋಗ ಸೃಷ್ಟಿ ಮಾಡಬೇಕಾದ ಅಗತ್ಯತೆ ಈಗ ಬಂದಿದೆ. ಈ ಯೋಜನೆಯಲ್ಲಿ ಭಾಗಿಗಳಾಗುವವರು ಮುಖ್ಯವಾಗಿ 24ರಿಂದ 35 ವರ್ಷದೊಳಗಿನವರಾಗಿರಬೇಕು. ಈ ಮೂಲಕ 5 ಲಕ್ಷ ಮಂದಿಗಳಾದರೂ ನೆರವಾದರೆ ಉಳಿದ 85 ಲಕ್ಷ ಮಂದಿ ಉದ್ಯೋಗ ಸೃಷ್ಟಿಯ ಮೂಲಕ ಪರೋಕ್ಷ ರೀತಿಯಲ್ಲಿ ಲಾಭ ಪಡೆದುಕೊಳ್ಳುತ್ತಾರೆ ಎಂದರು. 

ರಾಜ್ಯದ 30 ಜಿಲ್ಲೆಗಳಲ್ಲಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಮಾತೃ ಸಂಸ್ಥೆಗೆ ಎಫ್‌ಕೆಸಿಸಿಐ ಕಾರ‍್ಯ ನಿರ್ವಹಣೆ ಮಾಡಿಕೊಂಡು ಬರುತ್ತಿದೆ. ಜಿಲ್ಲೆಗಳಲ್ಲಿರುವ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳನ್ನು ಅರಿತುಕೊಂಡು ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನಕ್ಕೆ ತಂದು ಪರಿಹಾರ ನೀಡುವ ನಿಟ್ಟಿನಲ್ಲಿ ಸಂಸ್ಥೆ ಕಾರ‍್ಯಪ್ರವೃತ್ತವಾಗಿದೆ. 200 ಕ್ಕೂ ಅಧಿಕ ಹೋಟೆಲ್ ಸೇರಿದಂತೆ ಇತರ ಫೆಡರೇಶನ್‌ಗಳನ್ನು ಕೂಡ ಒಟ್ಟಿಗೆ ಸೇರಿಸಿಕೊಂಡು ಕೆಲಸ ಮಾಡುತ್ತಿದೆ ಎಂದರು. 

ರಾಜ್ಯದ ಅಭಿವೃದ್ಧಿ ಎಂದರೆ ಅದು ಬರೀ ಬೆಂಗಳೂರು ಅಭಿವೃದ್ಧಿಯಲ್ಲ ಬದಲಾಗಿ ರಾಜ್ಯದ 30 ಜಿಲ್ಲೆಗಳಲ್ಲಿಯೂ ಅಭಿವೃದ್ಧಿಯಾಗಬೇಕು ಎಂದು ನಂಬಿಕೆ ಇಟ್ಟುಕೊಂಡು ಸಂಸ್ಥೆ ಕಾರ‍್ಯನಿರ್ವಹಿಸುತ್ತಿದೆ. ಮುಖ್ಯವಾಗಿ ಉದ್ಯೋಗ ನೀಡುವ ಕ್ಷೇತ್ರದಲ್ಲಿ ಖಾಸಗಿ ಉದ್ಯಮ ಕ್ಷೇತ್ರಗಳು ಅಗ್ರಸ್ಥಾನದಲ್ಲಿದೆ. ಇದಕ್ಕೆ ತಕ್ಕಂತೆ ನಮ್ಮ ದೇಶದ ಉತ್ಪನ್ನಗಳು ಇತರ ದೇಶಗಳಲ್ಲೂ ಬೇಡಿಕೆ ಸೃಷ್ಟಿಯಾಗಬೇಕು. ಅಮೆರಿಕಾ, ಚೀನಾದಂತಹ ದೇಶಗಳ ಜತೆಗೆ ಪೈಪೋಟಿ ನಡೆಸುವಂತಹ ಪ್ರಾಡಕ್ಟ್‌ಗಳು ನಮ್ಮ ದೇಶದಲ್ಲೂ ಉತ್ಪಾದನೆಯಾಗುವ ನಿಟ್ಟಿನಲ್ಲಿ ಇಲ್ಲಿನ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕು ಎಂದು ಫೆಡರೇಶನ್ ಬಯಸುತ್ತಿದೆ ಅದಕ್ಕೆ ತಕ್ಕಂತೆ ಕೆಲಸ ಕೂಡ ಮಾಡುತ್ತಿದೆ ಎಂದರು