ಎಟಿಪಿ ರ‍್ಯಾಂಕಿಂಗ್‌: ಸುಮಿತ್ ಗೆ ಬಡ್ತಿ

0
6

ಭಾರತದ ಟೆನಿಸ್‌ ಆಟಗಾರ ಸುಮಿತ್‌ ನಗಾಲ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ 15 ಸ್ಥಾನ ಜಿಗಿತ ಕಂಡಿದ್ದಾರೆ. ಸೆಪ್ಟೆಂಬರ್ 16 ರ ಸೋಮವಾರ ಪ್ರಕಟವಾದ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅವರು 159ನೇ ಸ್ಥಾನ ಪಡೆದಿದ್ದಾರೆ.

ನವದೆಹಲಿ (ಪಿಟಿಐ): ಭಾರತದ ಟೆನಿಸ್‌ ಆಟಗಾರ ಸುಮಿತ್‌ ನಗಾಲ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ 15 ಸ್ಥಾನ ಜಿಗಿತ ಕಂಡಿದ್ದಾರೆ. ಸೆಪ್ಟೆಂಬರ್ 16 ರ ಸೋಮವಾರ ಪ್ರಕಟವಾದ ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅವರು 159ನೇ ಸ್ಥಾನ ಪಡೆದಿದ್ದಾರೆ.

ಹೋದ ತಿಂಗಳು ಅಮೆರಿಕ ಓಪನ್‌ನ ಮೊದಲ ಸುತ್ತಿನಲ್ಲಿ ಆಡಿದ್ದ ಹರಿಯಾಣ ಆಟಗಾರ, ಬಾಂಜಾ ಲುಕಾ ಎಟಿಪಿ ಟೂರ್ನಿಯಲ್ಲಿ ರನ್ನರ್ಸ್ ಅಪ್‌ ಆಗಿದ್ದರು. ಅಮೆರಿಕ ಓಪನ್‌ನಲ್ಲಿ ದಿಗ್ಗಜ ಆಟಗಾರ ರೋಜರ್‌ ಫೆಡರರ್‌ ಎದುರು ನಗಾಲ್‌ ಮೊದಲ ಗೇಮ್‌ ಜಯಿಸಿ ಅಚ್ಚರಿ ಮೂಡಿಸಿದ್ದರು. ಆದರೆ ಅದೇ ಮುನ್ನಡೆಯನ್ನು ಕಾಯ್ದುಕೊಳ್ಳಲಾಗದೆ ಪಂದ್ಯದಲ್ಲಿ ಸೋಲು ಕಂಡಿದ್ದರು.

ಭಾರತದ ಮತ್ತೊಬ್ಬ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌ ಅಗ್ರ 100ರೊಳಗೆ ಮುಂದುವರಿದಿದ್ದಾರೆ. ಸದ್ಯ ಅವರು ಮೂರು ಸ್ಥಾನ ಮೇಲಕ್ಕೆ ಏರಿ 82ನೇ ಸ್ಥಾನದಲ್ಲಿದ್ದಾರೆ. ರಾಮಕುಮಾರ್‌ ರಾಮನಾಥನ್‌ 179ನೇ ಸ್ಥಾನಕ್ಕೆ ಇಳಿಕೆ ಕಂಡಿದ್ದಾರೆ.

ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಹಾಗೂ ದಿವಿಜ್‌ ಶರಣ್ ಕ್ರಮವಾಗಿ 43 ಹಾಗೂ 49ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಲಿಯಾಂಡರ್‌ ಪೇಸ್‌ 78ನೇ ಸ್ಥಾನದಲ್ಲಿದ್ದಾರೆ. ಮಹಿಳೆಯರಲ್ಲಿ ಅಂಕಿತಾ ರೈನಾ (191ನೇ ವಿಶ್ವ ರ‍್ಯಾಂಕಿಂಗ್‌) ಭಾರತದ ಅಗ್ರ ರ‍್ಯಾಂಕಿನ ಆಟಗಾರ್ತಿಯಾಗಿದ್ದಾರೆ.