ಎಟಿಪಿ ಮಹಾರಾಷ್ಟ್ರ ಓಪನ್​ ಟೆನಿಸ್ ನ ಡಬಲ್ಸ್ ವಿಭಾಗ :ಬೋಪಣ್ಣ-ದಿವಿಜ್​ಗೆ ಡಬಲ್ಸ್ ಪ್ರಶಸ್ತಿ

0
507

2020ರ ಟೋಕಿಯೊ ಒಲಿಂಪಿಕ್ಸ್​ಗೆ ಸಿದ್ಧತೆ ದೃಷ್ಟಿಯಿಂದ ಒಗ್ಗೂಡಿರುವ ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಜೋಡಿಗೆ ಆರಂಭದಲ್ಲೇ ಭರ್ಜರಿ ಯಶ ಲಭಿಸಿದೆ. ದೇಶದ ಏಕೈಕ ಎಟಿಪಿ ಟೂರ್ ಟೆನಿಸ್ ಟೂರ್ನಿಯಾದ ಮಹಾರಾಷ್ಟ್ರ ಓಪನ್​ನ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಬೋಪಣ್ಣ-ದಿವಿಜ್ ಜೋಡಿ ಹೊಸ ವರ್ಷವನ್ನು ಶುಭಾರಂಭ ಮಾಡಿದೆ.

ಪುಣೆ: 2020ರ ಟೋಕಿಯೊ ಒಲಿಂಪಿಕ್ಸ್​ಗೆ ಸಿದ್ಧತೆ ದೃಷ್ಟಿಯಿಂದ ಒಗ್ಗೂಡಿರುವ ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಜೋಡಿಗೆ ಆರಂಭದಲ್ಲೇ ಭರ್ಜರಿ ಯಶ ಲಭಿಸಿದೆ. ದೇಶದ ಏಕೈಕ ಎಟಿಪಿ ಟೂರ್ ಟೆನಿಸ್ ಟೂರ್ನಿಯಾದ ಮಹಾರಾಷ್ಟ್ರ ಓಪನ್​ನ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಬೋಪಣ್ಣ-ದಿವಿಜ್ ಜೋಡಿ ಹೊಸ ವರ್ಷವನ್ನು ಶುಭಾರಂಭ ಮಾಡಿದೆ.

ಅಗ್ರ ಶ್ರೇಯಾಂಕಿತ ಬೋಪಣ್ಣ- ದಿವಿಜ್ ಜೋಡಿ ಜನೇವರಿ 5 ರ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಬ್ರಿಟನ್​ನ ಲ್ಯೂಕ್ ಬಾಂಬ್ರಿಡ್ಜ್ ಮತ್ತು ಜಾನಿ ಓಮಾರ ಜೋಡಿ ವಿರುದ್ಧ 6-3, 6-4 ನೇರಸೆಟ್​ಗಳಿಂದ ಗೆಲುವು ದಾಖಲಿಸಿತು. ಕನ್ನಡಿಗ ಬೋಪಣ್ಣ ಬಲಿಷ್ಠ ಸರ್ವ್ ಮತ್ತು ಚಾಣಕ್ಷ ಹಿಂಗೈ ಹೊಡೆತಗಳಿಂದ ಗಮನ ಸೆಳೆದರು. ಬೋಪಣ್ಣ ಪಂದ್ಯದಲ್ಲಿ ತಮ್ಮ ಸರ್ವ್​ನಲ್ಲಿ ಕೇವಲ 4 ಅಂಕಗಳನ್ನಷ್ಟೇ ಬಿಟ್ಟುಕೊಟ್ಟರು. ಅನುಭವಿ ಆಟಗಾರ ಬೋಪಣ್ಣಗೆ ಇದು 18ನೇ ಎಟಿಪಿ ಟೂರ್ ಡಬಲ್ಸ್ ಪ್ರಶಸ್ತಿ ಗೆಲುವಾಗಿದ್ದರೆ, ದಿವಿಜ್​ಗೆ ಇದು ವೃತ್ತಿಜೀವನದ ಕೇವಲ 4ನೇ ಪ್ರಶಸ್ತಿಯಾಗಿದೆ. ಇವರಿಬ್ಬರಿಗೆ ಜತೆಯಾಗಿ ಇದು ಮೊದಲ ಪ್ರಶಸ್ತಿ ಗೆಲುವಾಗಿದೆ. ಕಳೆದ ವರ್ಷ ಏಷ್ಯಾಡ್​ನಲ್ಲಿ ಈ ಜೋಡಿಗೆ ಸ್ವರ್ಣ ಪದಕ ಒಲಿದಿತ್ತು. ಒಲಿಂಪಿಕ್ಸ್ ಪದಕ ಗೆಲುವು ಮುಂದಿನ ದೊಡ್ಡ ಗುರಿ ಎನಿಸಿದೆ. ಮುಂಬರುವ ಆಸ್ಟ್ರೇಲಿಯನ್ ಓಪನ್​ನಲ್ಲೂ ಬೋಪಣ್ಣ-ದಿವಿಜ್ ಜತೆಯಾಗಿ ಆಡಲಿದ್ದು, ಅಲ್ಲಿ ಇನ್ನಷ್ಟು ಬಲಿಷ್ಠ ಎದುರಾಳಿಗಳನ್ನು ಎದುರಿಸಲು ಉತ್ತಮ ಸಿದ್ಧತೆಯನ್ನೇ ನಡೆಸಿದರು.

ಆಂಡರ್​ಸನ್: ವಿಂಬಲ್ಡನ್ ರನ್ನರ್​ಅಪ್ ಕೆವಿನ್ ಆಂಡರ್​ಸನ್ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ದಕ್ಷಿಣ ಆಫ್ರಿಕಾದ ಆಂಡರ್​ಸನ್ ಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾದ ಇವೊ ಕಾಲೋವಿಕ್ ಎದುರು 7-6, 6-7, 7-6 ಸೆಟ್​ಗಳಿಂದ ರೋಚಕ ಗೆಲುವು ದಾಖಲಿಸಿದರು.